ಕರ್ನಾಟಕ

ವಿಧಾನಸೌಧ ವಜ್ರ ಮಹೋತ್ಸವ: ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿ ಉಡುಗೊರೆ ಪ್ರಸ್ತಾವನೆ ಹಿಂಪಡೆದ ಸರ್ಕಾರ

Pinterest LinkedIn Tumblr

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವದ ಸವಿನೆನಪಿಗಾಗಿ ಶಾಸಕರು, ಸಂಸತ್‌ ಸದಸ್ಯರು ಮತ್ತು ವಿಧಾನಮಂಡಲ ಉಭಯ ಸಚಿವಾಲಯಗಳ ಸಿಬ್ಬಂದಿಗೆ ಉಡುಗೊರೆ ನೀಡಲು ₹ 3 ಕೋಟಿ ಖರ್ಚು ಮಾಡುತ್ತಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ವಿಧಾನಸಭಾಧ್ಯಕ್ಷ ಕೋಳಿವಾಡ ಚಿನ್ನದ ಬಿಸ್ಕತ್ತೂ ಇಲ್ಲ, ಬೆಳ್ಳಿ ತಟ್ಟೆನೂ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ವಿಧಾನಸೌಧ ವಜ್ರಮಹೋತ್ಸವ ಇದೇ ತಿಂಗಳ 25 ಮತ್ತು 26 ರಂದು ನಡೆಲಿದ್ದು, ವಜ್ರಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸರ್ಕಾರ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರಂತೆ ಶಾಸಕರಿಗೆ, ಸಂಸತ್ ಸದಸ್ಯರಿಗೆ ಚಿನ್ನದ ಬಿಸ್ಕತ್ತು ಹಾಗೂ ಬೆಳ್ಳಿ ತಟ್ಟೆ ನೀಡಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಭಾರೀ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗತೊಡಗಿವೆ.

ಈ ಹಿನ್ನಲೆಯಲ್ಲಿ ವಿವಾದ ಕುರಿತಂತೆ ಸ್ಪಷ್ಟನೆ ನೀಡಿರುವ ವಿಧಾನಸಭಾಧ್ಯಕ್ಷ ಕೋಳಿವಾಡ ಅವರು, ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಚಿನ್ನದ ಬಿಸ್ಕತ್, ಸಿಬ್ಬಂದಿಗೆ ಬೆಳ್ಳಿ ತಟ್ಟೆ ಕೊಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಯಾರಿಗೂ ಚಿನ್ನದ ಬಿಸ್ಕತ್ ಕೊಡುತ್ತಿಲ್ಲ, ಬೆಳ್ಳಿ ತಟ್ಟೆಯನ್ನೂ ಕೊಡುತ್ತಿಲ್ಲ. ಮಾಧ್ಯಮಗಳಲ್ಲಿ ಇದು ಹೇಗೆ ವರದಿಯಾಯಿತು ಎನ್ನುವುದು ಗೊತ್ತಿಲ್ಲ. ವಿಧಾನಸಭೆ ಸ್ಪೀಕರ್ ಕಚೇರಿಯಿಂದ ಹಣಕಾಸು ಇಲಾಖೆಗೆ ಕಳುಹಿಸಿತ್ತ ಪ್ರಸ್ತಾವನೆಯಲ್ಲಿ 19 ಉಡುಗೊರೆ ಸೇರಿ ಸಿದ್ಧಪಡಿಸಿರುವ ಒಟ್ಟು ರೂ.26.87 ಕೋಟಿಯ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯ ಒಪ್ಪಗೆಗೆ ಕಳುಹಿಸಲಾಗಿದೆ.

ನಮ್ಮ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದೇ ಆದರೆ, ಹಣವನ್ನು ನೀಡಿದರೆ ನೆನಪಿನ ಕಾಣಿಕೆ ಕೊಡುತ್ತೇವೆ. ಉಡುಗೊರೆ ಬೇಡ ಎಂದು ಸಚಿವರು ಹಾಗೂ ಶಾಸಕರು ಹೇಳಿದರೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಜ್ರಮಹೋತ್ಸವದ ಭಾರೀ ವೆಚ್ಚವನ್ನು ಸಮರ್ಥಿಸಿಕೊಂಡಿರುವ ಅವರು, ಉಡುಗೊರೆ ಕುರಿತು ಈ ವರೆಗೂ ನಿರ್ಧಾರಗಳನ್ನು ಕೈಗೊಂಡಿಲ್ಲ. ಈ ಬಾರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕರೆಸುತ್ತಿದ್ದೇವೆ. ಇದು ಗೌರವದ ಪ್ರಶ್ನೆಯಾಗಿದ್ದು, ಹೀಗಾಗಿ ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಕರ್ನಾಟಕದ ಗೌರವವನ್ನು ಕಾಪಾಡುತ್ತಿದ್ದೇವೆ. ಹೀಗಾಗಿ ಇದರಲ್ಲಿ ದುಡ್ಡು ಮುಖ್ಯವಲ್ಲ ಎಂದಿದ್ದಾರೆ.

ನಮ್ಮ ಸಚಿವಾಲಯದ ನಿರ್ಧಾರ ನಮ್ಮದು. ಸರ್ಕಾರ ಅಂದ್ರಿ ಮುಖ್ಯಮಂತ್ರಿಗಳು, ಅವರಿಗೆ ಈ ವಿಚಾರವನ್ನು ತಿಳಿಸಿದ್ದೇವೆ. ಆದರೆ, ಸಚಿವರು, ಶಾಸಕರು ಪ್ರತ್ರಿಕೆಗಳಲ್ಲಿ ಬಂದಿರುವ ವರದಿ ನೋಡಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಣಕಾರಸಿನ ವಿಚಾರ ಆರ್ಥಿಕ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಮುಂದಿನ ನಿರ್ಧಾರ ಏನಿದ್ದರೂ ಆರ್ಥಿಕ ಇಲಾಖೆಯದ್ದು ಎಂದು ಹೇಳಿದ್ದಾರೆ.

Comments are closed.