ಕರಾವಳಿ

ಶೀಘ್ರದಲ್ಲೇ ಮಂಗಳೂರಿನಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್‌ ನಿರ್ಮಾಣ

Pinterest LinkedIn Tumblr

ಮಂಗಳೂರು, ಅಕ್ಟೋಬರ್.17: ಮಂಗಳೂರಿನಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ಲಾಸ್ಟಿಕ್ ಪಾರ್ಕ್‌ಗೆ ದೇಶದಲ್ಲೇ ಅತ್ಯಂತ ವೇಗವಾಗಿ ಮಂಗಳೂರು ಸಜ್ಜಾಗುತ್ತಿದೆ. ಇದಕ್ಕಾಗಿ 90 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಕೇಂದ್ರ ಸರಕಾರದಿಂದ ಅನುಮತಿ ಪತ್ರ ನೀಡಲಾಗುವುದು ಎಂದು ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಭಾರತ ಸರಕಾರದ ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗದ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಹಮ್ಮಿಕೊಂಡ ಮುದ್ರಾ ಪ್ರೋತ್ಸಾಹ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ಪ್ಲಾಸ್ಟಿಕ್ ಪಾರ್ಕ್‍ಗೆ ಒಂದು ಸಾವಿರ ಕೋಟಿ ರೂ. ಘೋಷಣೆಯಾಗಿದೆ. ಈ ಪ್ಲಾಸ್ಟಿಕ್ ಪಾರ್ಕ್ ಯೋಜನೆಯಲ್ಲಿ 36 ಉದ್ದಿಮೆಗಳು ಕಾರ್ಯನಿರ್ವಹಿಸಲು ಸಮ್ಮತಿಸಿ ಸೂಚಿಸಿವೆ. ಇದರಿಂದ ಸುಮಾರು 30 ಸಾವಿರ ಜನರಿಗೆ ಉದ್ಯೋಗವಾಕಾಶ ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗುವ ಪ್ಲಾಸ್ಟಿಕ್ ಪಾರ್ಕ್ಗೆ ಸಂಬಂಧಿಸಿದಂತೆ ಆರಂಭಿಕ ಹಂತದ ಕೆಲಸ ಕಾರ್ಯ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವಾರವೇ ಈ ಯೋಜನೆಗೆ ಕೇಂದ್ರ ಸರಕಾರದಿಂದ ಅನುಮತಿ ಪತ್ರ ಒದಗಿಸಿ ಕೊಡುವುದಾಗಿ ಅನಂತ್ ಕುಮಾರ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಸ ನಳಿನ್ ಕುಮಾರ್ ಕಟೀಲ್ ಅವರು ದೇಶದಲ್ಲೇ ಅತಿ ಹೆಚ್ಚು ಅನುದಾನಗಳನ್ನು ಜಿಲ್ಲೆಗೆ ತಂದವರಲ್ಲಿ ಮೊದಲಿಗರು. ಜಿಲ್ಲೆಯ ಅಭಿವೃದ್ಧಿಗಾಗಿ ಈ ಅವಧಿಯಲ್ಲಿ ಸುಮಾರು 17ಸಾವಿರ ಕೋಟಿ ರೂ. ಅನುದಾನವನ್ನು ವಿವಿಧ ಯೋಜನೆಗಳಲ್ಲಿ ತರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಕೆಲಸಗಳಿಗೆ ನಿರಂತರವಾಗಿ ದುಡಿಯುತ್ತಿರುವ ‘ಅವಿಶ್ರಾಂತ ಚೇತನ ‘ಎಂದು ಅವರಿಗೆ ಬಿರುದ ನೀಡಬಹುದು. ದೇಶದ ಎಲ್ಲಾ ಸಂಸದರ ಪೈಕಿ ಗರಿಷ್ಠ ಪ್ರಮಾಣದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿ ತಾರತಮ್ಯ ಮಾಡಿಲ್ಲ ಇದರಿಂದಾಗಿ ಕರ್ನಾಟಕ ಮುದ್ರಾ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿ ಒಂದನೆ ಸ್ಥಾನದಲ್ಲಿದೆ. ಮುದ್ರ ಯೋಜನೆಯ ಸೌಲಭ್ಯವನ್ನು ಪಡೆದವರಲ್ಲಿ ಕರ್ನಾಟಕ ನಂಬರ್ ಒನ್. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನದಲ್ಲಿದೆ . ರಾಜ್ಯದಲ್ಲಿ ಈಗಾಗಲೇ 27,29,612 ಮಂದಿಗೆ 24,894 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತದ ಸಾಲ ಯೋಜನೆ ಇಲ್ಲಿಯವರೆಗೆ ಬಂದಿಲ್ಲ ಎಂದು ಹೇಳಿದರು.

ಮುದ್ರಾ ಯೋಜನೆಯ ಸಾಲ ಸೌಲಭ್ಯವನ್ನು ಈ ದೇಶದ ಕಡು ಬಡವರು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ಮೋದಿಯವರ ಆಶಯವಾಗಿದೆ. ಮೇಕ್ ಇಂಡಿಯಾ ಎಂದರೆ ದೇಶದಲ್ಲಿ ತಯಾರಾಗುವ ವಸ್ತುಗಳು ದೇಶದಲ್ಲಿಯೇ ಮಾರಾಟ ಮಾಡಬೇಕು ಎನ್ನುವುದಲ್ಲ. ಇಲ್ಲಿ ತಯಾರಾಗುವ ವಸ್ತುಗಳು ವಿದೇಶಿ ಮಾರುಕಟ್ಟೆಯಲ್ಲೂ ಮಾರಾಟವಾಗುವಂತಹ ಗುಣಮಟ್ಟವನ್ನು ಹೊಂದಬೇಕು ಎನ್ನುವುದು ಮೋದಿಯವರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಮುದ್ರಾ ಯೋಜನೆಯಿಂದ ದ.ಕ ಜಲ್ಲೆಗೆ 750 ಕೋಟಿ ಸಾಲ ಮಂಜೂರು:-ಮುದ್ರಾ ಯೋಜನೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ 59 ಸಾವಿರ ಫಲಾನುಭವಿಗಳಿಗೆ 750 ಕೋಟಿ ರೂಪಾಯಿ ಸಾಲ ನೀಡಲಾಗಿದೆ.ಸರಕಾರದ ವಿವಿಧ ಯೋಜನೆಯನ್ನು ಜನರ ಬಳಿಗೆ ತಲುಪಿಸಲು ಬ್ಯಾಂಕ್ಗಳ ಅಧಿಕಾರಿಗಳು ಶ್ರಮಿಸಿದ್ದಾರೆ.ಮುದ್ರಾ ಯೋಜನೆಯಲ್ಲಿ ಸಾಲ ಮಂಜೂರಾತಿಗೆ ಬ್ಯಾಂಕ್ ಅಧಿಕಾರಿಗಳು ಹಲವು ಸಬೂಬು ನೀಡಿ ಸಾಲ ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತವೆ. ಮೂರು ವರ್ಷದ ಆದಾಯ ತೆರಿಗೆಯ ದಾಖಲೆ ಕೇಳುತ್ತಾರೆ ಈ ರೀತಿ ಆಗಬಾರದು ಮುದ್ರಾ ಸಾಲ ಯೋಜನೆಯಲ್ಲಿ ಸಾಲ ನೀಡಲು ಈ ರೀತಿಯ ನಿಯಮಾವಳಿಗಳಿಲ್ಲ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಸಾಲ ಮಂಜೂರಾತಿ ನೀಡಬೇಕು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಕಳೆದ ಮೂರೂವರೆ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ 16,500 ಕೋಟಿ ರೂಪಾಯಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.

ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾದ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ಸಾಲದ ಚೆಕ್ಕ್ ಅನ್ನು ಸಚಿವರು ವಿತರಿಸಿದರು.

ವೇದಿಕೆಯಲ್ಲಿ ಭಾರತ ಸರಕಾರದ ಆರ್ಥಿಕ ಇಲಾಖೆಯ ನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ,ಪ್ರಭಾರ ಜಿಲ್ಲಾಧಿಕಾರಿ ಕುಮಾರ್,ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ,ಕಾರ್ಪೋರೇಶನ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಕೆ.ಗೋಪಾಲ್, ಸಿಂಡಿಕೇಟ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಮೊದಲಾದವರು ಉಪಸ್ಥಿತರಿದ್ದರು.

Comments are closed.