ಮನೋರಂಜನೆ

ಬಾಲಿವುಡ್ ನೃತ್ಯ ಬಹುಷಃ ವಿಶ್ವದಲ್ಲೇ ಉತ್ತಮ: ಜಾಕಿ ಚಾನ್

Pinterest LinkedIn Tumblr


ಮುಂಬೈ: ಹಾಲಿವುಡ್ ಖ್ಯಾತ ನಟ ಜಾಕಿ ಚಾನ್ ತಮ್ಮ ಮುಂದಿನ ಚಿತ್ರ ‘ಕುಂಗ್ ಫು ಯೋಗ’ ಸಿನೆಮಾ ಪ್ರಚಾರಕ್ಕಾಗಿ ಭಾರತ ಪ್ರವಾಸ ಬೆಳೆಸಿದ್ದು, ಬಾಲಿವುಡ್ ನೃತ್ಯದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
“ನಾನು ನನ್ನ ೧೬ ನೆಯ ವಯಸ್ಸಿನಲ್ಲಿ ಬಾಲಿವುಡ್ ಸಿನೆಮಾಗಳನ್ನು ನೋಡುತ್ತಿದ್ದೆ. ನನಗೆ ಭಾಷೆ ಅರ್ಥವಾಗುತ್ತಿರಲಿಲ್ಲ, ಅದಕ್ಕೆ ನೃತ್ಯ ನೋಡಿ ಹೊರಬರುತ್ತಿದ್ದೆ. ೧೫ ವರ್ಷಗಳಿಂದ ಹಿಂದಿ ಸಿನೆಮಾಗಳನ್ನು ನೋಡುತ್ತಿದ್ದೇನೆ.. ಏಕೆ? ನೃತ್ಯಕ್ಕಾಗಿ, ಬಹುಷಃ ಇದು ವಿಶ್ವದಲ್ಲೇ ಉತ್ತಮ” ಎಂದು ಚಾನ್ ಕಾರ್ಯಕ್ರಮವೊಂದರಲ್ಲಿ ಸೋಮವಾರ ಹೇಳಿದ್ದಾರೆ.
“ಈ ಹಿಂದ ಬಾಲಿವುಡ್ ಮತ್ತು ಚೈನೀಸ್ ಸಿನೆಮಾಗಳಲ್ಲಿ ಆಕ್ಷನ್ ಮತ್ತು ನೃತ್ಯ ಅತ್ಯತ್ತಮ ಮಟ್ಟದ್ದಾಗಿರಲಿಲ್ಲ. ಆದರೆ ಈಗ ನಮ್ಮ ಬಳಿ ಹಣ ಮತ್ತು ತಂತ್ರಜ್ಞಾನ ಇದೆ ಮತ್ತು ಜನರಿಗೆ ತರಬೇತಿ ನೀಡಬಹುದಾಗಿದೆ. ಸದ್ಯಕ್ಕೆ ಬಾಲಿವುಡ್ ಏಷಿಯಾದ ಕೆಲವು ಅತ್ಯುತ್ತಮ ಸಿನೆಮಾಗಳನ್ನು ನಿರ್ಮಿಸುತ್ತಿದೆ” ಎಂದು ಕೂಡ ಅವರು ಹೇಳಿದ್ದಾರೆ.
ಐದು ದಶಕಗಳಿಂದ ಚಾನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. “ನೀವೆಲ್ಲಾ ನನ್ನ ಸಿನೆಮಾಗಳನ್ನು ನೋಡುತ್ತಾ ಬೆಳೆದಿದ್ದೀರಿ. ನಿಮ್ಮ ತಂದೆ ನನ್ನ ಸಿನೆಮಾ ನೋಡಲು ಕರೆದೊಯ್ಯುತ್ತಿದ್ದರು. ಈಗ ನೀವು ನಿಮ್ಮ ಪೋಷಕರನ್ನು ನನ್ನ ಸಿನೆಮಾ ನೋಡಲು ಕರೆದೊಯ್ಯಬೇಕು” ಎಂದು ಚಾನ್ ಹೇಳಿದ್ದಾರೆ.
ಭಾರತೀಯರ ಬಗ್ಗೆ ತಮಗೆ ಅಪಾರ ಪ್ರೀತಿ ಇದೆ ಎಂದು ತಿಳಿಸಿರುವ ಅವರು “ಭಾರತೀಯರು ನನ್ನನ್ನು ಪ್ರೀತಿಸುತ್ತಾರೆ ಎಂದು ತಿಳಿದಿದ್ದೇನೆ ಮತ್ತು ನಾನು ಅವರನ್ನು ಕೂಡ. ನಾನಿಲ್ಲಿಗೆ ಸಿನೆಮಾಗಳನ್ನು ಮಾಡಲು, ಧರ್ಮಾರ್ಥ ಕಾರ್ಯಗಳಿಗಾಗಿ ಮತ್ತು ಸಿನೆಮೋತ್ಸವಗಳಿಗಾಗಿ ಬರುತ್ತಿರುತ್ತೇನೆ ಏಕೆಂದರೆ ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ” ಎಂದಿದ್ದಾರೆ ಚಾನ್.
ಸ್ಟಾನ್ಲಿ ಟಾಂಗ್ ನಿರ್ದೇಶನದ ‘ಕುಂಗ್ ಫು ಯೋಗ’ ಸಿನೆಮಾದಲ್ಲಿ ಸೋನು ಸೂದ್, ದಿಶಾ ಪಠಾಣಿ ಮುಂತಾದವರು ನಟಿಸಿದ್ದು ಭಾರತದಲ್ಲಿ ಫೆಬ್ರವರಿ ೩ ಕ್ಕೆ ಮತ್ತು ಚೀನಾದಲ್ಲಿ ಜನವರಿ ೨೮ ಕ್ಕೆ ಬಿಡುಗಡೆಯಾಗಲಿದೆ.

Comments are closed.