ಮನೋರಂಜನೆ

ರೈಲಿನಲ್ಲಿ ರಯಿಸ್‌ ಚಿತ್ರ ಪ್ರಚಾರ ಮಾಡಿದ ಶಾರುಖ್‌:ಒರ್ವ ಸಾವು

Pinterest LinkedIn Tumblr


ವಡೋದರಾ: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಬಹು ನಿರೀಕ್ಷಿತ ರಯಿಸ್‌ ಚಿತ್ರ ಪ್ರಚಾರದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.

ಅಗಸ್ಟ್‌ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬೈನಿಂದ ದೆಹಲಿಗೆ ಚಿತ್ರದ ಪ್ರಚಾರಕ್ಕೆ ತೆರಳಿರುವ ಶಾರುಖ್‌ ಸೋಮವಾರ ವಡೋದರಾ ತಲುಪಿದ್ದಾರೆ. ಈ ಸಮಯದಲ್ಲಿ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದ ಭಾರಿ ಜನಸಂಖ್ಯೆಯಿಂದ ಉಸಿರಾಟ ಸಮಸ್ಯೆಗೆ ತುತ್ತಾಗಿ ಒಬ್ಬರು ಅಸುನೀಗಿದ್ದಾರೆ ಎನ್ನಲಾಗಿದೆ. ಮೃತರನ್ನು ವಡೋದರಾ ಹಥಿಕಾನ್‌ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಫರಿದ್‌ ಖಾನ್‌ ಪಠಾಣ್‌ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ತನಿಖೆಗೆ ಆದೇಶಿಸಿದ್ದಾರೆ. ಸಮಗ್ರ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ವಿಭಾಗೀಯ ರೈಲ್ವೆ ಪ್ರಬಂಧಕ (ಆರ್‌ಪಿಎಫ್‌) ಅಮಿತ್‌ ಕುಮಾರ್‌ ಸಿಂಗ್‌ ಅವರಿಗೆ ಸೂಚನೆ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಶಾರುಖ್‌ ಸಂತಸ

ಚಿತ್ರ ಪ್ರಚಾರಕ್ಕೆ ರೈಲು ಯಾನ ಆರಂಭಿಸಿರುವ ಶಾರುಖ್‌ ಅಭಿಮಾನಿಗಳ ಮಹಾಪೂರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ವಡೋದರಾ, ವಾಪಿ, ಸೂರತ್‌, ವಾಲ್ಸಾದ್‌, ಕೋಟಾ ನಗರಗಳ ಮೂಲಕ ರೈಲಿನಲ್ಲಿ ಸಂಚರಿಸಿ ಚಿತ್ರ ಪ್ರಚಾರ ನಡೆಸಿದ್ದಾರೆ.

ಕೆಲ ರೈಲು ನಿಲ್ದಾಣಗಳಲ್ಲಿ ಭಾರಿ ಜನಜಂಗುಳಿಯಿಂದ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರವು ಬುಧವಾರ ವಿಶ್ವದಾದ್ಯಂತ ತೆರೆ ಕಾಣಲಿದೆ.

Comments are closed.