ಮನೋರಂಜನೆ

ಈ ಚಿತ್ರದಲ್ಲಿ 15 ನಿರ್ದೇಶಕರ ನಟನೆ

Pinterest LinkedIn Tumblr

neha-final‘ಪ್ರೀತಿಯ ಅಮಲಿನಲ್ಲಿ ಗುರಿಯ ಮರೆಯದಿರು’ – ಈ ಸಾಲುಗಳೇ ‘ಒನ್‌ ಟೈಮ್’ ಚಿತ್ರ ಮಾಡಲು ನನಗೆ ಪ್ರೇರಣೆ ಎನ್ನುತ್ತ ನಿರ್ದೇಶಕ ಬಿ.ಎನ್. ರಾಜು ತಮ್ಮ ಚಿತ್ರದ ತಿರುಳನ್ನು ಬಿಡಿಸಿಟ್ಟರು.

‘ಹರೆಯದಲ್ಲಿ ಪ್ರೀತಿ ಸಹಜ. ಆದರೆ, ಹೆತ್ತವರನ್ನು ಧಿಕ್ಕರಿಸಿ ಪ್ರೀತಿಯ ಬೆನ್ನೇರುವುದು ಸರಿಯಲ್ಲ. ಪ್ರೀತಿಗೆ ಅವರ ಒಪ್ಪಿಗೆಯೂ ಅಗತ್ಯ. ಪ್ರೀತಿಯ ಗುಂಗಲ್ಲಿ ಗುರಿ ಮಸುಕಾಗಬಾರದು’ ಎಂದು ಚಿತ್ರದ ಕಥಾಹಂದರವನ್ನು ಅವರು ಬಣ್ಣಿಸಿದರು. ಚಿತ್ರದ ಶೀರ್ಷಿಕೆಗೆ ಅವರು ಕೊಟ್ಟಿರುವ ಅಡಿಬರಹ – ‘ಮಿಸ್ ಮಾಡ್ಕೊಬೇಡಿ’.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಿಂದ ಹಿಡಿದು ಕಿರಿಯರವರೆಗೆ 15 ಮಂದಿ ‘ಒನ್‌ಟೈಮ್‌’ನಲ್ಲಿ ನಟಿಸಿರುವುದು ವಿಶೇಷ. ಎಸ್.ಕೆ. ಭಗವಾನ್, ಕೆ.ಎಸ್.ಎಲ್. ಸ್ವಾಮಿ, ನಾಗೇಂದ್ರಪ್ರಸಾದ್, ವಿಜಯಲಕ್ಷ್ಮೀಸಿಂಗ್, ಪಲ್ಲಕ್ಕಿ ರಾಧಾಕೃಷ್ಣ, ನಾಗೇಂದ್ರ ಅರಸ್, ಟಿ.ಎಸ್. ನಾಗಾಭರಣ, ಮಳವಳ್ಳಿ ಸಾಯಿಕೃಷ್ಣ, ಶರಣ್ ಕಬ್ಬೂರು, ನಾಗನಾಥ್ ಜೋಷಿ, ಚಂದ್ರಕಲಾ, ವಿಕ್ಟರಿ ವಾಸು, ಪಿ.ಎನ್. ಸತ್ಯ, ಗಡ್ಡ ವಿಜಯ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಇಂತಹದ್ದೊಂದು ಕಥೆಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. 15 ನಿರ್ದೇಶಕರನ್ನು ಒಂದೆಡೆ ಸೇರಿಸಿ, ಎಲ್ಲರಿಂದಲೂ ಪಾತ್ರ ಮಾಡಿಸಿರುವುದು ಸಾಧನೆ. ಕಿರಿಯ ನಿರ್ದೇಶಕರ ಇಂತಹ ಸಾಹಸ ನಿಜಕ್ಕೂ ಶ್ಲಾಘನೀಯ’ ಎಂದು ಭಗವಾನ್ ಬೆನ್ನು ತಟ್ಟಿದರು. ‘ಈ ಚಿತ್ರಕ್ಕಾಗಿ 20 ವರ್ಷದ ಬಳಿಕ ಬಣ್ಣ ಹಚ್ಚಿದ್ದೇನೆ. ನಿಜ ನೀವನದಲ್ಲಿ ನನಗೆ ಡಾಕ್ಟರೇಟ್ ಬರದಿದ್ದರೂ, ಈ ಚಿತ್ರದಲ್ಲಿ ಡಾಕ್ಟರ್ ಆಗಿದ್ದೇನೆ’ ಎಂದರು. ಮತ್ತೊಬ್ಬ ನಿರ್ದೇಶಕ ವಾಸು ಚಿತ್ರತಂಡಕ್ಕೆ ಶುಭ ಕೋರಿದರು.

ತೇಜಸ್ ಹಾಗೂ ನೇಹಾ ಸಕ್ಸೇನಾ ‘ಒನ್‌ ಟೈಮ್‌’ನ ನಾಯಕ–ನಾಯಕಿ. ‘ಹೆದರಿ ಓಡಿ ಹೋಗದೆ, ತಂದೆ–ತಾಯಿಯನ್ನು ಒಪ್ಪಿಸಿ ಮದುವೆಯಾಗಬೇಕು. ಪ್ರೀತಿಯ ಜೊತೆ ಬದುಕಿನಲ್ಲಿ ಸಾಧನೆಯೂ ಅತಿ ಮುಖ್ಯ’ ಎಂಬ ಸಂದೇಶ ಚಿತ್ರದಲ್ಲಿದೆ ಎಂದರು ತೇಜಸ್.

‘ಕನ್ನಡದಲ್ಲಿ ನನಗಿದು ನಾಲ್ಕನೇ ಚಿತ್ರ. ಅಮ್ಮನ ಮುದ್ದಿನ ಮಗಳಾಗಿ, ಪ್ರೀತಿಸುವ ಹುಡುಗನ ಪ್ರೇಮಿಯಾಗಿ ಎರಡು ಬಗೆಯ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದ ನೇಹಾ, ‘ಇತರ ಚಿತ್ರರಂಗಗಳಿಗೆ ಹೋಲಿಸಿದರೆ, ಹೊಸಮುಖಗಳಿಗೆ ಮಣೆ ಹಾಕುವ ಕನ್ನಡ ಚಿತ್ರರಂಗ ದಿ ಬೆಸ್ಟ್’ ಎಂದು ಕೃತಜ್ಞತೆ ಸಲ್ಲಿಸಿದರು.

‘ವಿಲನ್ ಶೇಡ್ ಇರುವ ನಾಯಕಿಯ ಅಣ್ಣನಾಗಿ ನನ್ನ ಪಾತ್ರ ವಿಭಿನ್ನವಾಗಿದೆ’ ಎಂದರು ನಟ ನಾರಾಯಣ ಸ್ವಾಮಿ. ಸಾಫ್ಟ್‌ವೇರ್ ಉದ್ಯಮಿ ಕಿರಣ್ ವಾಸುದೇವ್ ಚಿತ್ರದ ನಿರ್ಮಾಪಕರು. ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ ಚಿತ್ರದ ಹೈಲೈಟ್‌ಗಳಲ್ಲೊಂದು. ಅದಕ್ಕಾಗಿ ಚಿತ್ರತಂಡ ಪುಣೆಯಲ್ಲಿ ಚಿತ್ರೀಕರಣ ನಡೆಸಿದೆ.

ಅಭಿಮಾನ್ ರಾಯ್ ಸಂಯೋಜನೆಯಲ್ಲಿ ಏಳು ಹಾಡುಗಳಿವೆ. ‘ಜಯಲಕ್ಷ್ಮೀ ಮೂವೀಸ್‌’ನ ರಾಜು ಅವರು ಚಿತ್ರ ವಿತರಣೆಯ ಹೊಣೆ ಹೊತ್ತಿದ್ದು, ರಾಜ್ಯದಾದ್ಯಂತ ಸುಮಾರು 60 ಚಿತ್ರಮಂದಿರಗಳಲ್ಲಿ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.

Comments are closed.