ಗುಳಿಕೆನ್ನೆ, ಸುಂದರ ನಗೆಯ ಚೆಲುವೆ ನಟಿ ಗುಲ್ಪನಾಗ್, ರಾಜಕಾರಣ ಪ್ರವೇಶಿಸಿದ್ದು ಹಳೆಯ ಸುದ್ದಿ. ಆದರೆ, ಈಗ ಗುಲ್ಪನಾಗ್ ಮತ್ತೊಮ್ಮೆ ಸುದ್ದಿಯಲ್ಲಿರುವುದು ಪೈಲಟ್ ಪ್ರಮಾಣಪತ್ರ ಪಡೆಯುವ ಮೂಲಕ.
ಹೌದು. ಗುಳಿಕೆನ್ನೆಯ ಚೆಲುವೆ ಈಗ ಬಾನಿನಲ್ಲಿ ಹಾರಲು ಅಧಿಕೃತವಾಗಿ ಚಾಲನಾ ಪ್ರಮಾಣಪತ್ರ ಪಡೆದಿದ್ದಾರೆ. ನ.10ರಂದು ಈ ಪ್ರಮಾಣಪತ್ರ ಪಡೆದಿರುವ ಗುಲ್, ತಾವು ಪೈಲಟ್ ಉಡುಪಿನಲ್ಲಿರುವ ಹಲವು ಫೋಟೊಗಳನ್ನೂ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ.
‘ಕಾಲೇಜಿನ ದಿನಗಳಲ್ಲಿ ಪ್ರತಿದಿನವೂ ಪಟಿಯಾಲಾದ ವಾಯುಯಾನ ತರಬೇತಿ ಕೇಂದ್ರದ ಮುಂದೆಯೇ ಹಾದುಹೋಗುತ್ತಿದೆ. ಅಗೆಲ್ಲಾ ನಾನೂ ಪೈಲಟ್ ಆದರೆ ಎಷ್ಟು ಚೆಂದ ಎಂದು ಅಂದುಕೊಳ್ಳುತ್ತಿದ್ದೆ. ಆದರೆ, ಆಗ ಪೈಲಟ್ ತರಬೇತಿ ಪಡೆಯುವುದು ನನ್ನ ತಂದೆತಾಯಿಗೆ ಆರ್ಥಿಕವಾಗಿ ಹೊರೆ ಆಗಬಹುದು ಎನ್ನುವ ಕಾರಣಕ್ಕಾಗಿ ತರಬೇತಿ ಪಡೆದಿರಲಿಲ್ಲ. ಆದರೆ, ಮದುವೆಯಾದ ಬಳಿಕ ಪತಿ ಬಳಿ ರಿಷಿ ಅತ್ತರಿ ಅವರ ಬಳಿ ನನ್ನಾಸೆ ಹೇಳಿಕೊಂಡಾಗ ಅವರು ಬೆಂಬಲಿಸಿದರು’ ಎಂದೂ ಗುಲ್ಪನಾಗ್ ಪೈಲಟ್ ತರಬೇತಿ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ತಾವು ಪೈಲಟ್ ಆಗಬೇಕೆನ್ನುವ ಕನಸನ್ನು ಗುಲ್ಪನಾಗ್ ಕೊನೆಗೂ ಈಡೇರಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಲಿವುಡ್ನಿಂದ ಕಾಣೆಯಾಗಿದ್ದ ಗುಲ್ಪನಾಗ್, ಈಗ ಪೈಲಟ್ ಆಗಿ ಕಾಣಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆಯಂತೆ.