ಮನೋರಂಜನೆ

ಸ್ಕೂಟರ್ ನಲ್ಲಿ ಬ್ಯಾಂಕಿಗೆ ಆಗಮಿಸಿದ ನಟಿ ರಮ್ಯ

Pinterest LinkedIn Tumblr

ramyaಮಂಡ್ಯ (ನ.11): ಪ್ರಧಾನಿ ಮೋದಿ 500, 1000 ಮುಖ ಬೆಲೆ ನೋಟ್‌ಗಳ ಚಲಾವಣೆಯನ್ನು ರದ್ದು ಮಾಡಿರುವ ಕ್ರಮ ಒಳ್ಳೆಯದ್ದು. ಇದು ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಹೊರಟಿರುವುದು ಸ್ವಾಗತಾರ್ಹ ನಿರ್ಧಾರ ಎಂದು ಮಾಜಿ ಸಂಸದೆ ರಮ್ಯಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಇರುವ ಹಣವೆಲ್ಲವೂ ವೈಟ್. ಹೇಗೆ ಗೊತ್ತಾ? ನನ್ನ ಎಲ್ಲಾ ವ್ಯವಹಾರವನ್ನೂ ನಾನು ಡೆಬಿಟ್ ಕಾರ್ಟ್‌ನೊಂದಿಗೆ ಮಾಡುತ್ತೇನೆ. ನಗದು ಪ್ರಶ್ನೆ ಬರುವುದಿಲ್ಲ. ದಿಢೀರ್ ಆಗಿ 500, 1000 ರೂಗಳ ನೋಟ್‌ಗಳನ್ನು ರದ್ದು ಮಾಡಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗಿದೆ. ಆದರೆ ಇದರ ಹಿಂದಿನ ಉದ್ದೇಶ ಮಾತ್ರ ಒಳ್ಳೆಯದಾಗಿದೆ. ಸ್ವಲ್ಪ ತೊಂದರೆಯಾದರೂ ಅನುಸರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಹಳೇ ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಜನ ಸಾಮಾನ್ಯರಿಗೆ ತುಂಬಾ ತೊಂದರೆ ಆಗಿದೆ. ಜನರು ಸಾಕಷ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿದ್ದೇನೆ ಎಂದರು.
ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ನೀಲಿ ಚಿತ್ರ ವೀಕ್ಷಣೆ ಮಾಡಿದ ಪ್ರಸಂಗ ಕುರಿತು ಉತ್ತರಿಸಿದ ರಮ್ಯಾ, ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ನಾನು ನೋಡಿಲ್ಲ. ಅಲ್ಲದೇ ಸಚಿವರೇ ಈ ಕುರಿತು ವಿವರಣೆ ನೀಡಬೇಕು. ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ರಾತ್ರಿ ಮುಖ್ಯಮಂತ್ರಿಗಳನ್ನು ನಾನು ಭೇಟಿ ಮಾಡಿದ್ದು ನಿಜ. ಚರ್ಚೆಯ ವಿವರಗಳು ಬೇಡ. ಆದರೆ ನೋಟು ಬದಲಾವಣೆಯ ವಿಚಾರದಲ್ಲಿ ಜನ ಸಾಮಾನ್ಯರಿಗೆ ಆಗಿರುವ ಸಮಸ್ಯೆಗಳನ್ನು ವಿವರಿಸಿದ್ದೇನೆ ಎಂದರು.
ಸ್ಕೂಟರ್‌ನಲ್ಲಿ ಆಗಮಿಸಿದ ರಮ್ಯಾ:
ಮಂಡ್ಯದ ಕೆ.ಆರ್. ರಸ್ತೆಯಲ್ಲಿರುವ ನಿವಾಸದಿಂದ ಸ್ಕೂಟರ್‌ನಲ್ಲಿ ವಿವಿ ರಸ್ತೆಯಲ್ಲಿ ಎಸ್‌ಬಿಎಂ ಶಾಖೆಗೆ ರಮ್ಯಾ ಆಗಮಿಸಿದರು. ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಜನರು ಯಾವ ತೊಂದರೆಗಳನ್ನು ಎದುರಿಸುತ್ತಿದ್ದಾರೆಂಬುದನ್ನು ಖುದ್ದು ವೀಕ್ಷಣೆ ಮಾಡುವ ಉದ್ದೇಶ ರಮ್ಯಾ ಅವರದ್ದಾಗಿತ್ತು. ಆದರೆ ರಮ್ಯಾ ಸ್ಕೂಟರ್ ನಲ್ಲಿ ಮಂಡ್ಯದ ವಿವಿ ರಸ್ತೆಯ ಎಸ್‌ಬಿಎಂ ಶಾಖೆಗೆ ಆಗಮಿಸಿರುವ ಸುದ್ದಿ ತಿಳಿದು ಅವರನ್ನು ನೋಡಲು ಜನರು ಮುಗಿ ಬಿದ್ದರು. ಈ ಸಮಯದಲ್ಲಿ ಉಂಟಾದ ನೂಕು ನುಗ್ಗಲು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಲು ಪೊಲೀಸರು ರಮ್ಯಾಗೆ ಮನವಿ ಮಾಡಿ ಶೀಘ್ರ ಕೆಲಸ ಮುಗಿಸಿ ಇಲ್ಲಿಂದ ತೆರಳುವಂತೆ ಕೋರಿದರು.

Comments are closed.