ಕರ್ನಾಟಕ

ರೆಡ್ಡಿ ಮಗಳ ಮದುವೆಗೆ 180 ಕೋಟಿ

Pinterest LinkedIn Tumblr

reddyಬೆಂಗಳೂರು(ಅ.11): ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ಕಲ್ಯಾಣದ ವೈಭೋಗ ಕರುನಾಡಿನ ಮಂದಿಯನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ ಅಷ್ಟು ಆಡಂಬರದಲ್ಲಿ ಮಗಳ ಮದುವೆ ಮಾಡಲು ಮುಂದಾಗಿದ್ದಾರೆ. ಬ್ರಹ್ಮಿಣಿ ಮದುವೆಯ ವೈಭೋಗ ಬೆಂಗಳೂರಿನಲ್ಲಿ ಮೇಳೈಸಿದೆ. ಆಹ್ವಾನ ಪತ್ರಿಕೆಯೊಂದಕ್ಕೆ 6 ಸಾವಿರ ಖರ್ಚು ಮಾಡಿರುವ ಗಣಿಧಣಿಯ ಗ್ರ್ಯಾಂಡ್ ಮ್ಯಾರೇಜ್ ಊಹಿಸಲೂ ಸಾಧ್ಯವಿಲ್ಲ.
ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆಯ ಕರೆಯೋಲೆ ಈಗಾಗಲೇ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಕನ್ನಡದಲ್ಲಿ ಮೂಡಿಬಂದ ರೆಡ್ಡಿ ಆಮಂತ್ರಣ ಪತ್ರಿಕೆಯ ಅದ್ದೂರಿತನ ಕಂಡು ಅನೇಕರಲ್ಲಿ ಅನೇಕ ರೀತಿಯ ಪ್ರಶ್ನೆಗಳು ಮೂಡಿದವು. ಅಲ್ಲದೆ ರೆಡ್ಡಿಯವರು ಈ ಮದುವೆ ಮೂಲಕ ತನ್ನಲ್ಲಿರುವ ಸಂಪತ್ತಿನ ಅಶ್ಲೀಲ ಪ್ರದರ್ಶನ ಮಾಡಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು. ಯಾಕೆಂದರೆ ನನ್ನ ಅದೃಷ್ಟದ ಬಾಗಿಲೇ ತೆರೆದವಳು ಬ್ರಹ್ಮಿಣಿ. ಇವಳು ಹುಟ್ಟಿದ ಮೇಲೆ ನನ್ನ ಜೀವನ ಶೈಲಿಯೇ ಬದಲಾಯಿತು ಅಂತ ಆಪ್ತರ ಬಳಿ ಗಾಲಿ ರೆಡ್ಡಿ ಹೇಳಿಕೊಂಡಿದ್ದಾರಂತೆ. ಹೀಗಾಗಿ ಏಕೈಕ ಮಗಳ ಮದುವೆಗೆ ಜನಾರ್ದನ ರೆಡ್ಡಿ ಸುಮಾರು 180 ಕೋಟಿಗೂ ಹೆಚ್ಚು ಖರ್ಚು ಮಾಡಲಿದ್ದಾರಂತೆ. ಬಳ್ಳಾರಿ ಮತ್ತು ಹೈದ್ರಾಬಾದ್ ಟಾಕ್ ಪ್ರಕಾರ ಮದುವೆಯ ಒಟ್ಟು ಖರ್ಚು ಇನ್ನೂ ಜಾಸ್ತಿ ಆದರೂ ಆಗಬಹುದು.
ಬಳ್ಳಾರಿ ಜಿಲ್ಲೆಯ ಭೂತಾಯಿಯ ಒಡಲನ್ನೇ ಸೀಳಿ ಲಕ್ಷಾಂತರ ಕೋಟಿ ಸಂಪಾದಿಸಿದ್ದರು ಗಾಲಿ ಜನಾರ್ಧನ ರೆಡ್ಡಿ. ಶಾಸಕರಾಗಿ-ಸಚಿವರಾಗಿ ದಶಕ ಕಳೆದ ಜನಾರ್ದನ ರೆಡ್ಡಿ ಬಳ್ಳಾರಿ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಯಾವ ಕಾಣಿಕೆಯನ್ನೂ ನೀಡಿಲ್ಲ. ಮತ ಕೊಟ್ಟವರ ಸಾಮಾಜಿಕ ಜೀವನ, ಆರ್ಥಿಕ ಜೀವನ ಸುಧಾರಿಸಲು ಕ್ರಮ ತೆಗೆದುಕೊಂಡಿಲ್ಲ.
ದೇಶದ ಆಸ್ತಿ ಖನಿಜ ಸಂಪತ್ತನ್ನು ಮಾರಿಕೊಂಡು, ಥೇಟ್ ಪಾಳೆಗಾರನಂತೆ ಮೆರೆದ ಜನಾರ್ದನ ರೆಡ್ಡಿ ಆಳ್ವಿಕೆ ಪ್ರಜಾಪ್ರಭುತ್ವದಲ್ಲಿ ಜಾಸ್ತಿ ದಿನ ನಡೆಯಲಿಲ್ಲ. ಮನೆಯಲ್ಲಿ ಮಲಗಿದ್ದಾಗಲೇ ಸಿಬಿಐ ಪೊಲೀಸ್ರು ಬಾಗಿಲು ತಟ್ಟಿ ಜೈಲಿಗೆ ತಳ್ಳಿದ್ದರು.ಬಳಿಕ ನಡೆದದ್ದೆಲ್ಲಾ ಇತಿಹಾಸ. ಬೇಲ್ ಪಡೆದು ಹೊರಗಡೆಗೆ ಬರಲು ಯತ್ನಿಸಿ ಜಡ್ಜ್’ನ್ನೇ ಅವರನ್ನೇ ಬುಕ್ ಮಾಡಿಕೊಂಡು ಯಡವಟ್ಟು ಮಾಡಿಕೊಂಡಿದ್ದರು.
ಈಗ ಅದೇ ಹಳೇ ದರ್ಬಾರಿನಲ್ಲಿ ತನ್ನ ಪುತ್ರಿಯ ಕಲ್ಯಾಣಕ್ಕೂ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್’ನಲ್ಲಿ ಸಕಲ ಸಿದ್ಧತೆಯೂ ಬಿರುಸಾಗಿ ಸಾಗಿದೆ. ಹಂಪಿಯ ಐತಿಹಾಸಿಕ ವಿಜಯ ವಿಠಲನ ನಕಲಿ ಮಂಟಪವೇ ನಾಚುವಂತೆ ಮರುಸೃಷ್ಟಿ ಮಾಡಿ ಅದರಲ್ಲಿ ಬ್ರಹ್ಮಿಣಿಗೆ ಧಾರೆ ಎರೆದುಕೊಡಲಿದ್ದಾರೆ, ಜನಾರ್ದನ ರೆಡ್ಡಿ.
ಅಸಲಿಯನ್ನ ನಾಚಿಸುವ ನಕಲಿ ವಿಠಲನ ಸೃಷ್ಟಿ ಹೇಗಿದೆ? ಯಾರೆಲ್ಲಾ ಶ್ರಮಿಸುತ್ತಿದ್ದಾರೆ? ಮಗಳಿಗಾಗಿ ಗಣಿ ಧಣಿ ಖರ್ಚು ಮಾಡುತ್ತಿರುವ ಹಣ ಯಾವ ಪಾಲಿಕೆಯ ಬಜೆಟ್’ಗೆ ಸಮ ಅಂತಲ್ಲಾ, ನವೆಂಬರ್ 16 ಅಂದರೆ ಮುಂದಿನ ಬುಧವಾರ ನಡೆಯಲಿರುವ ಗ್ರ್ಯಾಂಡ್ ಮ್ಯಾರೇಜ್ ಫಿಲ್ಮೀ ಸ್ಟೈಲ್ನಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿವೆ.

Comments are closed.