
Deewar
ಮುಂಬೈ: ಬಾಲಿವುಡ್ ಬಾದ್‌ಷಾ ಅಮಿತಾಭ್ ಬಚ್ಚನ್ ಬಾಲಿವುಡ್‌ಗೆ ಕಾಲಿಟ್ಟು 47 ವರ್ಷವಾಯಿತಂತೆ.
ಈ ವಿಚಾರವನ್ನು ಮಂಗಳವಾರ ಸ್ವತಃ ಅಮಿತಾಭ್ ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರ ‘ಸಾತ್ ಹಿಂದೂಸ್ತಾನಿ’ (1969) ಯ ಫೋಟೊವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಕೆಳಗೆ ‘ಚಿತ್ರರಂಗಕ್ಕೆ ಬಂದು ಇಂದಿಗೆ 47 ವರುಷವಾಯಿತು’ ಎಂಬ ಅಡಿಬರಹವನ್ನೂ ಬಿಗ್‌ಬಿ ಬರೆದಿದ್ದಾರೆ.
‘47 ವರ್ಷಗಳಲ್ಲಿ ಈ ದೇಶ ನನ್ನನ್ನು ರೂಪಿಸಿದೆ. ನನಗೆ ಬೆಚ್ಚನೆಯ ಸೂರು, ಉನ್ನತ ಹಂತದ ಸ್ಥಾನಗಳನ್ನು ನೀಡುವ ಜತೆಗೆ ಅನೇಕ ಪಾಠಗಳನ್ನೂ ಮುಂಬೈ ಕಲಿಸಿದೆ. ನನ್ನ ಮೊದಲ ಚಿತ್ರಪ್ರವೇಶಕ್ಕೆ ಅವಕಾಶ ನೀಡಿರುವ ಜತೆಗೆ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಹ ಈ ನಗರ ಅವಕಾಶ ಕಲ್ಪಿಸಿದೆ’ ಎಂದು ಅಮಿತಾಭ್ ಭಾವುಕವಾಗಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಆಧುನಿಕ ತಂತ್ರಜ್ಞಾನವು ಚಿತ್ರೀಕರಣದ ವೇಗವನ್ನು ಹೆಚ್ಚಿಸಿದೆ ಎಂದು ಸಿನಿ ರಂಗದ ಬಗ್ಗೆ ಮೆಚ್ಚುಗೆ ಸೂಚಿಸಿರುವ ಅಮಿತಾಭ್, ತಮ್ಮ ಮುಂಬರುವ ‘ಸರ್ಕಾರ್–3’ ಚಿತ್ರೀಕರಣ ನಿಗದಿತ ಅವಧಿಗಿಂತ ಮುನ್ನವೇ ಮುಗಿಯುವ ಮುನ್ಸೂಚನೆಯನ್ನೂ ನೀಡಿದ್ದಾರೆ.
47 ವರುಷಗಳ ಸುದೀರ್ಘ ಅವಧಿಯಲ್ಲಿ ಅಮಿತಾಭ್ ಅಭಿನಯದ ‘ಗುಡ್ಡಿ’, ‘ಬಾಂಬೆ ಟು ಗೋವಾ’, ‘ಜಂಜೀರ್’, ‘ಸಿಲ್‌ಸಿಲಾ’, ‘ಅಭಿಮಾನ್’, ‘ದೀವಾರ್’, ‘ಡಾನ್’, ಮುಖದ್ದರ್ ಕಾ ಸಿಕಂದರ್’, ‘ಬ್ಲ್ಯಾಕ್’, ‘ಪಾ’, ‘ಪೀಕೂ’ ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿರುವುದು ವಿಶೇಷ.