ಕರ್ನಾಟಕ

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Pinterest LinkedIn Tumblr

bjpಬೆಂಗಳೂರು, ನ. ೮- ರಾಜ್ಯ ಸರ್ಕಾರ ನಾಡಿದ್ದು (ನ. 10) ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿಯನ್ನು ವಿರೋಧಿಸಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬೀದಿಗಿಳಿದಿರುವ ಬಿಜೆಪಿ, ಜಯಂತಿಯಂದು ಎದುರಾಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಟಿಪ್ಪು ಜಯಂತಿಯನ್ನು ವಿರೋಧಿಸಿ ನ. 10 ರಂದು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ನಿರ್ಧರಿಸಿರುವ ಬಿಜೆಪಿ ನಾಯಕರು, ಅಂದು ಜೈಲಿಗೆ ಹೋಗಲು ಸಿದ್ಧ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಮೌರ್ಯ ಸರ್ಕಲ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಹಿರಿಯ ಮುಖಂಡರಾದ ಆರ್.ಅಶೋಕ್, ಅರವಿಂದಲಿಂಬಾವಳಿ, ಶೋಭಾಕರಂದ್ಲಾಜೆ, ಎಸ್. ಸುರೇಶ್‌ಕುಮಾರ್, ರಾಮಚಂದ್ರಗೌಡ, ಕಟ್ಟಾಸುಬ್ರಹ್ಮಣ್ಯನಾಯ್ಡು ಸೇರಿದಂತೆ ಹಲವು ನಾಯಕರು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿ, ದೇವಸ್ಥಾನಗಳನ್ನು ಧ್ವಂಸ ಮಾಡಿದ, ಅಮಾಯಕರನ್ನು ಮತಾಂತರಗೊಳಿಸಿದ, ಜನರನ್ನು ಕಗ್ಗೊಲೆ ಮಾಡಿದ ಮಂತಾಂಧ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯನ್ನು ಮಾಡಬೇಡಿ. ಒಂದು ವೇಳೆ ಮಾಡಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
24 ಗಂಟೆಯಲ್ಲಿ ರದ್ದು
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಟಿಪ್ಪು ಜಯಂತಿಯನ್ನು ರದ್ದು ಮಾಡುವ ಜತೆಗೆ ಭಯೋತ್ಪಾದಕ ಸಂಘಟನೆಗಳಾದ ಕೆಡಿಎಫ್, ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದರು.
ನ. 10 ರಂದು ಆಚರಿಸಲಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು. ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಜೈಲ್‌ಬರೋ ನಡೆಸಲಾಗುವುದು. ಅಲ್ಲದೆ, ಅಂದು ಸಂಭವಿಸಬಹುದಾದ ಎಲ್ಲ ಅನಾಹುತ, ಅವಘಡಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಂತ್ಯ ಕಾಲ ಸಮೀಪಿಸಿದೆ. ಹಿರಿಯ ಸಾಹಿತಿ ಚಂದ್ರಶೇಖರ್‌ಕಂಬಾರ, ಸಂಶೋಧಕ ಚಿದಾನಂದಮೂರ್ತಿ ಸೇರಿದಂತೆ ಅನೇಕರು ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ. ಆಗಿದ್ದರೂ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಹಿಂದು-ಮುಸ್ಲಿಂರ ನಡುವೆ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ನಡೆಸುತ್ತಿದೆ ಎಂದು ಆರೋಪಿಸಿದರು.
ಮಲ್ಯ, ಖಾನ್‌ಗೆ ಆದ ಗತಿ ಸಿಎಂಗೆ
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಆರ್. ಅಶೋಕ್ ಮಾತನಾಡಿ, ಟಿಪ್ಪು ಖಡ್ಗ ತಂದ ವಿಜಯಮಲ್ಯ ದೇಶ ಬಿಟ್ಟು ಹೋಗಿದ್ದಾನೆ. ಟಿಪ್ಪು ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಮುಂದಾದ ಸಂಜಯ್‌ಖಾನ್ ಮುಖಕ್ಕೆ ಬೆಂಕಿ ಬಿದ್ದು ಕುರೂಪಿಯಾಗುವಂತಾಗಿದೆ. ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದ್ದಾರೆ. ಅವರಿಗಾದ ಗತಿ ಸಿದ್ಧರಾಮಯ್ಯನವರಿಗೂ ಆಗಲಿದೆ. ರಾಜ್ಯದ ಜನತೆ ಸಿದ್ದರಾಮಯ್ಯ ಅವರ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವ ಕಾಲ ದೂರವಿಲ್ಲ ಎಂದರು.

Comments are closed.