ಮನೋರಂಜನೆ

ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ಉದಯ್ ಅಕ್ಕನ ಆಕ್ರೋಶ

Pinterest LinkedIn Tumblr

mastigudiಬೆಂಗಳೂರು,ನ.೮-ಈಜು ಬಾರದ ಸಹನಟ ಉದಯ್‌ನನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿಸಿ ಮಾಸ್ತಿಗುಡಿ ಚಿತ್ರತಂಡವೇ ಸಾಯಿಸಿದೆ ಎಂದು ಉದಯ್ ಅಕ್ಕ ಸುಧಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಾಶಯಕ್ಕೆ ಜಿಗಿದು ಸಾಯುವ ಅವಘಡ ಉದಯ್ ತಾನಾಗಿಯೇ ಮಾಡಿಕೊಂಡಿದ್ದಲ್ಲ. ಉದಯ್‌ಗೆ ಈಜು ಬರೋದಿಲ್ಲ ಎನ್ನುವುದು ದುನಿಯಾ ವಿಜಿ, ಸಾಹಸ ನಿರ್ದೇಶಕ ರವಿವರ್ಮಾ ಸೇರಿ ಚಿತ್ರತಂಡದ ಎಲ್ಲರಿಗೂ ಗೊತ್ತಿದ್ದರೂ ಜಲಾಶಯದ ಆಳಕ್ಕೆ ಜಿಗಿಸಲಾಗಿದೆ ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ಮೂಲಕ ಕೆಳಗೆ ಒಂದು ಹಗ್ಗ ಹಾಕಿದ್ರೂ ನನ್ನ ತಮ್ಮ ಬದುಕುಳಿಯುತ್ತಿದ್ದ. ನಾಯಕನಿಗೆ ಇರುವ ಸೌಕರ್ಯ ಅವನಿಗೆ ಕೊಟ್ಟಿರಲಿಲ್ಲ. ಒಂದು ಲೈಫ್ ಜಾಕೆಟ್, ಬೋಟ್, ಕೊನೆಪಕ್ಷ ಅಲ್ಲೇ ಸುತ್ತಮುತ್ತಲ ಹಳ್ಳಿಯವರಿಗೆ ಹೇಳಿ ನಾಲ್ಕು ಜನರನ್ನು ನಿಲ್ಲಿಸಿದ್ದರೂ ಯಾರಾದರು ಈಜಿ ಇವನನ್ನು ಬದುಕಿಸಿಕೊಳ್ಳುತ್ತಿದ್ದರು.
ಯಾರೂ ಆ ಪ್ರಯತ್ನ ಕೂಡ ಮಾಡದೇ ನನ್ನ ತಮ್ಮನ ಜೀವಕ್ಕೆ ಎರವಾಗಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಗೃಹ ಸಚಿವರ ಸೂಚನೆ
ಬೆಂಗಳೂರು, ನ.೮- ತಿಪ್ಪನಗೊಂಡಹಳ್ಳಿಯ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿರುವ ಕಲಾವಿದರಾದ ಅನಿಲ್ ಹಾಗೂ ರಾಘವ್ ಉದಯ್ ಅವರ ಮೃತದೇಹಗಳನ್ನು ಮೇಲೆತ್ತಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ.
ಪಣಂಬೂರು ಸೇರಿದಂತೆ ಇತರ ಬಂದರುಗಳಲ್ಲಿರುವ ನುರಿತ ಈಜುಗಾರರನ್ನು ಕರೆಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ಮೃತದೇಹಗಳ ಜಲಾಶಯದಿಂದ ಮೇಲೆತ್ತಲು ಕ್ರಮಕೈಗೊಳ್ಳುವಂತೆ ಪರಮೇಶ್ವರ್ ಅವರು ಸೂಚಿಸಿದ್ದಾರೆ.

ಅಮೂಲ್ಯ ಕೊಡುಗೆ ಕಣ್ಮರೆ
ಬೆಂಗಳೂರು, ನ. ೮ – ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಜಿಗಿದು ಇಬ್ಬರು ಕಲಾವಿದರು ಮೃತಪಟ್ಟಿರುವುದು ಮಾಸ್ತಿಗುಡಿ ಚಿತ್ರತಂಡಕ್ಕೆ ಆದ ಅವಮಾನ ಎಂದು ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ.
ಈ ದುರಂತ ನಾವೇ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಲೈಫ್ ಜಾಕೆಟ್ ಹಾಕಿಕೊಂಡಿದ್ದರೆ ಈ ದುರಂತ ಆಗುತ್ತಿರಲಿಲ್ಲ. ಇಬ್ಬರು ಒಳ್ಳೆ ನಟರನ್ನು ಕಳೆದುಕೊಂಡಿದ್ದೇವೆ. ಈಜು ಬಾರದವರನ್ನು ಹೇಗೆ ನದಿಗೆ ಧುಮುಕಿಸಿದರೋ ಗೊತ್ತಿಲ್ಲ. ತರಬೇತಿ ಇದ್ದರೆ ಮಾತ್ರ ಇಂತಹ ಸಾಹಸಕ್ಕೆ ಕೈ ಹಾಕಬೇಕಿತ್ತು. ಮುಂಜಾಗ್ರತೆ ಇಲ್ಲದೆ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು. ಕಲಾವಿದರ ಜೀವನದ ಜೊತೆ ಆಟವಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಡೀ ಚಿತ್ರರಂಗಕ್ಕೆ ಈ ದುರಂತ ಎಚ್ಚರಿಕೆ ಗಂಟೆಯಾಗುತ್ತೆ.ಭಗವಂತ ಕೊಟ್ಟ ಎರಡು ಅಮೂಲ್ಯ ಗಿಫ್ಟ್‌ಗಳನ್ನ ಕಳೆದುಕೊಂಡೆವು. ಇಬ್ಬರ ನಡುವೆ ನನಗೆ ತುಂಬ ಆತ್ಮೀಯತೆ ಇತ್ತು ಎಂದು ಭಾವುಕರಾಗಿ ಮಾತನಾಡಿದರು
ಸಾಹಸ ದೃಶ್ಯಕ್ಕೂ ಮುನ್ನ ಮುಂಜಾಗೃತ ಕ್ರಮ ಕೈಗೊಳ್ಳಬೇಕಾಗಿತ್ತು. ಈ ಹಿಂದೆಯೂ ನಾನು ಇಂತಹ ಸಾಹಸಮಯ ದೃಶ್ಯ ಮಾಡಿದ್ದೇವೆ. ಆಗ ಸಾಕಷ್ಟು ಸೇಫ್ಟಿ ಮಾಡಿಕೊಳ್ಳಲಾಗಿತ್ತು. ನಮ್ಮಿಂದ ಆಗುತ್ತಾ ಎಂದು ಯೋಚಿಸಿ ಮಾಡಬೇಕು. ಮೃತಕುಟುಂಬದವರಿಗೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಮಾಸ್ತಿಗುಡಿಯ ಜಾಮೀನು ಅರ್ಜಿ
ಬೆಂಗಳೂರು,ನ.೮-ಖಳನಟರಿಬ್ಬರ ದುರಂತ ಸಾವಿಗೆ ಕಾರಣವಾಗಿ ಬಂಧನದ ಭೀತಿಯಲ್ಲಿರುವ ಮಾಸ್ತಿಗುಡಿ ಚಿತ್ರ ತಂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದೆ.
ಮಾಸ್ತಿಗುಡಿ ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ, ಸೆಕ್ಷನ್ ೧೮೮, ೩೦೪ ರ ಅನ್ವಯ ಕೇಸ್‌ದಾಖಲಿಸಿಕೊಳ್ಳಲಾಗಿದೆ.
ಸೆಕ್ಷನ್ ೧೮೮ ಷರತ್ತುಗಳನ್ನು ಉಲ್ಲಂಘಿಸಿದ ಆರೋಪವಾಗಿದ್ದು,ಅನುಮತಿ ಪತ್ರದಲ್ಲಿ ನಮೂದಿಸಿದ್ದ ಷರತ್ತುಗಳು ಚಿತ್ರತಂಡ ಉಲ್ಲಂಘಿಸಿದೆ.
ಸೆಕ್ಷನ್೩೦೪ ಉದ್ದೇಶವಿಲ್ಲದೆ ಕೊಲೆಗೈದ ಪ್ರಕರಣವಾಗಿದ್ದು, ಸೆಕ್ಷನ್ ೩೦೪ರ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಬಂಧನದ ಭೀತಿಯಲ್ಲಿರುವ ಚಿತ್ರ ತಂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದೆ.

Comments are closed.