ಮನೋರಂಜನೆ

ನಾನು ಜವಾಬ್ದಾರಿ ನಟ: ಯಶ್

Pinterest LinkedIn Tumblr

yashಬೆಂಗಳೂರು, ನ. ೫- `ಚಿತ್ರರಂಗದಲ್ಲಿ ಬೇಜವಾಬ್ದಾರಿ ನಟರಿರಬಹುದು. ಆದರೆ ನಾನು ಹಾಗಲ್ಲ. ಇಡೀ ಚಿತ್ರರಂಗದವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬೇಡಿ. ರೈತ ಪರ ಕಾಳಜಿ ಇದೆ. ಪೇಪರ್‌ನಲ್ಲಿ ಬಿಕಿನಿ ಹಾಕಿರುವ ಫೋಟೊ ಹಾಕ್ತೀರಾ, ಸಿನಿಮಾ ಪುಟಗಳಲ್ಲಿ ಸೆಕ್ಸ್ ಕಾಲಂ ಬರೀತೀರಾ, ಹಿಂಸೆ ಇರುತ್ತದೆ. ಚಿತ್ರಗಳಲ್ಲಿ ಹೇಳುವ ಡೈಲಾಗ್‌ಗಳನ್ನು ಹೈಲೈಟ್ ಮಾಡುತ್ತೀರಿ. ಆದರೆ ಅದರ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ.’

ಸಿನಿಮಾಗಳಲ್ಲಿ ಸಂಭಾಷಣೆಗಳ ಮೂಲಕವೇ ಇತರ ನಟರಿಗೆ ಟಾಂಗ್ ನೀಡಿ ಹಲವು ನಟರ ಕೆಂಗಣ್ಣಿಗೆ ಗುರಿಯಾಗಿರುವ ನಟ ಯಶ್, ಇದೀಗ ಮಾಧ್ಯಮಗಳ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಜೊತೆಗೆ ಚಿತ್ರರಂಗದಲ್ಲಿ ಬೇಜವಾಬ್ದಾರಿ ನಟರಿದ್ದಾರೆ ಎನ್ನುವ ಮೂಲಕ ವಿವಾದದ ಕಿಡಿ ಹಚ್ಚಿದ್ದಾರೆ.

3 – 4 ವರ್ಷಗಳ ಬಳಿಕ ಸಿನಿಮಾ ಪತ್ರಿಕಾ ಗೋಷ್ಠಿಗೆ ಹಾಜರಾಗಿದ್ದ ನಟ ಯಶ್, ಚಿತ್ರದ ಬಗ್ಗೆ ಹೇಳಿಕೊಂಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ಮೇಲಿದ್ದ ಆರೋಪಗಳಿಗೆ ಸಮಜಾಯಿಷಿ ನೀಡಿದರು.

ಮಾಧ್ಯಮ ಸರಿಯಿಲ್ಲ ಎಂದರೆ, ಇಡೀ ಮಾಧ್ಯಮದವರೆಲ್ಲಾ ಒಂದಾಗುತ್ತೀರಿ. ಚಿತ್ರರಂಗ ಸರಿಯಿಲ್ಲ ಅಂತ ಎಷ್ಟು ಬಾರಿ ಮಾತನಾಡುತ್ತೀರ. ವಾಹಿನಿಗಳಲ್ಲಿ ರೈತರ ವಿಷಯಕ್ಕೆ ಸೂಕ್ತ ಪ್ರಚಾರ ನೀಡುವುದಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದ್ದನ್ನೇ ದೊಡ್ಡದು ಮಾಡುತ್ತೀರಿ. ಆ ಮೂಲಕ ಕೆಲವರು ತಮ್ಮ ಬಣ್ಣಗಳನ್ನು ಜನರ ಮುಂದೆ ಅನಾವರಣ ಮಾಡಿಕೊಂಡಿದ್ದಾರೆ. ಜನರ ನಂಬಿಕೆ, ವಿಶ್ವಾಸಕ್ಕಿಂತ ಯಾವುದೂ ದೊಡ್ಡದಲ್ಲ. ಯಶ್ ಬದುಕಿರುವುದೇ ಜನರಿಂದ. ಹೀಗಾಗಿಯೇ ರೈತರ ಬಗ್ಗೆ ಮಾತನಾಡಿದ್ದೆ ಎಂದು ಹೇಳಿಕೊಂಡರು.

ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಆಹ್ವಾನ ನೀಡಿದ್ದೇನೆ. ಎಲ್ಲರೂ ಒಂದೆಡೆ ಬನ್ನಿ, ಚರ್ಚೆ ಮಾಡಲು ಈಗಲೂ ಸಿದ್ಧನಿದ್ದೇನೆ. ಚಿತ್ರರಂಗದಲ್ಲಿ ಬೇಜವಾಬ್ದಾರಿ ನಟರಿದ್ದಾರೆ. ಆದರೆ ಯಶ್ ಹಾಗಲ್ಲ. ನನಗೂ ಕಾಳಜಿ, ಕಳಕಳಿ ಇದೆ ಎಂದರು.

ಡೈಲಾಗ್ ಇಲ್ಲದೆ ಸಿನಿಮಾ ಮಾಡಲು ಹೇಗೆ ಸಾಧ್ಯ? ಅಭಿಮಾನಿಗಳಿಗಾಗಿ ಸಿನಿಮಾ ಮಾಡೋದು. ಅದನ್ನು ಮುಂದೆಯೂ ಮುಂದುವರೆಸುತ್ತೇವೆ. ಮಾಧ್ಯಮ ಅಂದರೆ ಅಸಡ್ಡೆ, ಪತ್ರಿಕಾ ಗೋಷ್ಠಿಗಳಿಗೆ ಬರುವುದಿಲ್ಲ, ವರ್ತನೆ ಸರಿಯಿಲ್ಲ ಎಂದು ನೆಗೆಟೀವ್ ಅಂಶಗಳಿಗೇ ಹೆಚ್ಚು ಆದ್ಯತೆ ನೀಡುತ್ತೀರಿ. ವಿವಾದಗಳಿಗೆ ಆಸ್ಪದ ನೀಡುವ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಎನ್ನುತ್ತೀರಿ. ಮಾತನಾಡಿದರೆ ಅದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆ.

ಹೀಗಾಗಿ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗದೆ ದೂರ ಉಳಿದಿದ್ದೆ. ಹಾಗಂತ ಮಾಧ್ಯಮದವರನ್ನು ದೂರ ಇಟ್ಟಿರಲಿಲ್ಲ. ಪ್ರತಿಕ್ರಿಯೆ ಕೇಳಿದವರಿಗೆ ಉತ್ತರಿಸುತ್ತಿದ್ದೆ. ಮಾಧ್ಯಮ ಹಾಗೂ ಜನರಿಂದಲೇ ಬೆಳೆದಿರುವುದು ಅದು ಗೊತ್ತಿದೆ. ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ತಪ್ಪು ಅಭಿಪ್ರಾಯದಿಂದಾಗಿ ವಿವಾದಕ್ಕೆ ಕಾರಣವಾಗಿದೆ ಎಂದರು.

ಎಲೆಕ್ಟ್ರಾನಿಕ್ ಮೀಡಿಯಾಗಳು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡುತ್ತಾರೆ. ಏನಾದರೂ ಸಣ್ಣ ಪುಟ್ಟ ಸಮಸ್ಯೆಯಾದರೆ ಟಿವಿ ಮುಂದೆ ಹೋಗುತ್ತೇವೆ ಎಂದು ಮನೆಯ ಕೆಲಸ ಮಾಡುವವರಿಂದ ಹಿಡಿದು ವಸ್ತುಗಳನ್ನು ರಿಪೇರಿ ಮಾಡುವವರು ಹೇಳುತ್ತಾರೆ. ಇಂತಹ ವಿಷಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುವುದು. ಇಂತಹ ವಿಷಯಗಳನ್ನು ಟಿವಿಗಳಲ್ಲಿ ಪ್ರಸಾರ ಮಾಡುವುದಿಲ್ಲ ಎನ್ನುವ ಗ್ಯಾರಂಟಿ ಕೊಡಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಎಲ್ಲವೂ ಗಿಮಿಕ್ ಆಗುತ್ತಿದೆ. ಅದು ಆಗಬಾರದು, ಸತ್ಯ ಗೆಲ್ಲಬೇಕು. ರೈತನ ಬಗ್ಗೆ ನಾಟಕ ಆಡುತ್ತಾರೆ ಅಂದರೆ ಯಾರಿಗೆ ಕೋಪ ಬರುವುದಿಲ್ಲ, ರೈತನಿಗಿಂದ ದುಡ್ಡು ದೊಡ್ಡದಲ್ಲ. ರೈತರ ಬಗ್ಗೆ ಕಾಳಜಿ ಇರುವುದರಿಂದಲೇ ರೈತ ಮುಖಂಡರು, ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ. ಕೆಲ ವಾಹಿನಿಗಳು ಟಿಆರ್‌ಪಿಗಾಗಿ ಇಲ್ಲಸಲ್ಲದ್ದನ್ನು ಬಿತ್ತರಿಸುತ್ತವೆ. ಎಲ್ಲರೂ ಜವಾಬ್ದಾರಿಯನ್ನು ಅರಿತು ಕೆಲಸ ಮಾಡೋಣ. ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ. ರೈತರಿಗಾಗಿ ಹೋರಾಡೋಣ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಕಾವೇರಿ ವಿಷಯವಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಲಿಲ್ಲ. ಹಾಗಂತ ಅದನ್ನೇ ಕೆಲವರು ದೊಡ್ಡದಾಗಿ ಬಿಂಬಿಸಿದರು. ವಿದೇಶಕ್ಕೆ ಮೋಜು ಮಾಡಲು ಹೋಗಿದ್ದಾರೆ ಎಂದು ಆರೋಪ ಮಾಡಿದರು, ರೈತರ ಬಗ್ಗೆ ಕಾಳಜಿ ಇದೆ, ಅವರ ಪರವಾಗಿ ಸಿನಿಮಾ ಮಾಡಲು ಸಿದ್ಧನಿದ್ದೇನೆ. ರೈತರ ಬಗ್ಗೆ ಚರ್ಚೆ ನಡೆಸಲು ನಾನಂತೂ ಸಿದ್ಧನಿದ್ದೇನೆ. ಎಲ್ಲರೂ ಒಂದೆಡೆ ಬನ್ನಿ ಚರ್ಚೆ ಮಾಡೋಣ ಎಂದು ಹೇಳಿದರು.

* ಚಿತ್ರರಂಗದವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ.
* ರೈತಪರ ಕಾಳಜಿ ಇದೆ, ಅರ್ಥ ಮಾಡಿಕೊಳ್ಳಿ.
* ಅನಗತ್ಯ ವಿವಾದ ಬೇಡ. ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ.
* ಬೇಜವಾಬ್ದಾರಿ ನಟರಿರಬಹುದು, ಆದರೆ ನಾನು ಹಾಗಲ್ಲ.
* ಮಾಧ್ಯಮದಿಂದ ದೂರ ಉಳಿಯಲು ನನ್ನದೇ ಆದ ನೋವು, ವೈಯಕ್ತಿಕ ಕಾರಣಗಳಿವೆ.
* ರೈತರ ಬಗ್ಗೆ ಚರ್ಚೆ ಮಾಡಲೂ ಈಗಲೂ ಸಿದ್ಧ, ಒಂದೆಡೆ ಬನ್ನಿ.
* ಗಿಮಿಕ್‌ನಿಂದ ಏನೂ ಆಗಲ್ಲ, ಸತ್ಯ ಗೆಲ್ಲಬೇಕು.
* ಮಾಧ್ಯಮ ಹಾಗೂ ಜನರಿಂದ ಬೆಳೆದಿದ್ದೇನೆ. ಅದರ ಅರಿವಿದೆ.

Comments are closed.