ಬೆಂಗಳೂರು, ನ. ೫- ಇತ್ತೀಚಿಗೆ ಜಾತಿವಾದಿಗಳು, ಯಥಾಸ್ಥಿತಿವಾದಿಗಳು ಅಂಬೇಡ್ಕರ್‌ರವರ ಹೆಸರು ಹೇಳಿಕೊಂಡು ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಬಗ್ಗೆ ಎಚ್ಚರವಹಿಸಬೇಕೆಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರನ್ನು ಭೂತಕನ್ನಡಿ ಹಿಡಿದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೆಲವರು ಎಸ್‌ಸಿ ಎಸ್‌ಟಿ ಮೋರ್ಚಾ ರಚಿಸಿ ಅಂಬೇಡ್ಕರ್ ಜಯಂತಿ, ದೊಡ್ಡ ಸಮ್ಮೇಳನ ಮಾಡಿ ವೀರಾವೇಶದ ಭಾಷಣ ಮಾಡುತ್ತಿದ್ದಾರೆ. ನಮ್ಮಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಲ್ಲಿಗೆ ಹೋಗುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ.
ಯಾರು ಸಾಮಾಜಿಕ ನ್ಯಾಯದ ಪರ ಇದ್ದಾರೆ, ಯಾರು ಯಥಾಸ್ಥಿತಿ ವಾದಿಗಳು ಎಂಬುದನ್ನು ದಲಿತ ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಎಚ್.ಎ.ಎಲ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕಾರ್ಮಿಕರ, ಅಧಿಕಾರಿಗಳ ಸಂಘ ನಗರದಲ್ಲಿಂದು ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತ್ಯೋತ್ಸವ ಹಾಗೂ ಜ್ಯೋತಿ ಬಾಪುಲೆ ಕೌಶಲ್ಯ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಕಷ್ಟ, ತೊಂದರೆ ಬಂದರೂ ತಾವು ಸಾಮಾಜಿಕ ನ್ಯಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಅದಕ್ಕಾಗಿಯೇ ಮೊದಲ ಬಾರಿಗೆ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದಲ್ಲಿ 19,542 ಕೋಟಿ ರೂ. ದಲಿತರಿಗಾಗಿ ಮೀಸಲಿಡಲಾಗಿದೆ. ಈ ಹಣವನ್ನು ಅಧಿಕಾರಿಗಳು ಕಡ್ಡಾಯವಾಗಿ ದಲಿತರ ಅಭಿವೃದ್ಧಿಗೆ ಖರ್ಚು ಮಾಡಬೇಕು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಮಹಾನ್ ದಾರ್ಶನಿಕ
ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಜಾತಿ ವ್ಯವಸ್ಥೆಯ ಕಾರಣಕ್ಕೆ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದ ಮಹಾನ್ ನಾಯಕ ನಮಗೆಲ್ಲಾ ಅಂಬೇಡ್ಕರ್ ಅವರೇ ಸ್ಪೂರ್ತಿಯಾಗಿದ್ದಾರೆ. ಅಂಬೇಡ್ಕರ್ ಅವರು ಹುಟ್ಟದೇ ಹೋಗಿದ್ದರೆ, ಭಾರತದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ.
ಎಚ್.ಎ.ಎಲ್‌ನಂತಹ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ದಲಿತ ನೌಕರರು ಇರಲಿಕ್ಕೆ ಸಾಧ್ಯವಿರುತ್ತಿರಲಿಲ್ಲ. ಸುವರ್ಣ ರಾಜು ಅವರು ಈ ಸಂಸ್ಥೆಯ ಅಧ್ಯಕ್ಷರಾಗಲು ಸಾಧ್ಯವಿರುತ್ತಿರಲಿಲ್ಲ. ಜಗತ್ತಿಗೆ ಅತ್ಯಂತ ಮಾದರಿಯಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರು ಇನ್ನಷ್ಟು ವರ್ಷಗಳ ಕಾಲ ಜೀವಿಸಿದ್ದರೆ, ಭಾರತ ಇನ್ನಷ್ಟು ಪರಿವರ್ತನೆಯಾಗುತ್ತಿತ್ತು ಎಂದು ಹೇಳಿದರು.
ಅಂಬೇಡ್ಕರ್ ಅವರು ಮಹಾನ್ ದಾರ್ಶನಿಕ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಭವಿಷ್ಯದ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸಿದ್ದರು. ಅವರ ವಾರಸುದಾರರಾದ ನಾವೆಲ್ಲಾ ಸಾಮಾಜಿಕ ನ್ಯಾಯದ ರಥವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕು. ಅವರ ಆಸೆಯ ಮತ್ತು ಅವರ ಕಸನುಗಳ ಜಾರಿಗೆ ಪ್ರಯತ್ನಿಸಬೇಕು. ಇದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.
ಜಾತಿ ವ್ಯವಸ್ಥೆ ಇನ್ನೂ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿದೆ. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮದ ಅನಾಚಾರದ ವಿರುದ್ಧ ಬೇಸತ್ತು ಮನಸ್ಮೃತಿ ಸುಟ್ಟುಹಾಕಿ ಬೌದ್ಧ ಧರ್ಮ ಸ್ವೀಕರಿಸಿದರು. ಕಾಂಗ್ರೆಸ್ ಸೇರಿದಂತೆ ಯಾರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಇಂದಿನ ವಿದ್ಯಾವಂತ ದಲಿತರು ಅಂಬೇಡ್ಕರ್ ಅವರ ಸಾಹಿತ್ಯವನ್ನು ಓದಿಕೊಂಡು ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಮಾತನಾಡಿ, ಎಲ್ಲ ಜನರಿಗೆ ಸಮಾನವಾದ ಅವಕಾಶ ಕಲ್ಪಿಸುವ ಸಂವಿಧಾನದಲ್ಲಿ ಆಶಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಅಧಿಕಾರ ನಡೆಸುತ್ತಿದೆ. ಎಲ್ಲಾ ಸಮಸ್ಯೆಗಳ ಕೀಲಿಕೈ ರಾಜಕೀಯ ಅಧಿಕಾರದಲ್ಲಿದೆ. ಈ ಅಧಿಕಾರ ಯೋಗ್ಯರ ಕೈಗೆ ಹೋಗುವಂತೆ ನಾವೆಲ್ಲಾ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಎನ್. ಮಹೇಶ್, ಎಚ್.ಎ.ಎಲ್ ಅಧ್ಯಕ್ಷ ಟಿ. ಸುವರ್ಣ ರಾಜು, ಸಂಸದ ಚಂದ್ರಪ್ಪ, ಶಾಸಕ ಬೈರತಿ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.