ಕರ್ನಾಟಕ

ಕ್ರೆಡಿಟ್ ಕಾರ್ಡ್‌ಗಳ ನಕಲು

Pinterest LinkedIn Tumblr

ATM-debit-cardಬೆಂಗಳೂರು, ನ. ೫- ವಿವಿಧ ಬ್ಯಾಂಕ್‌ಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ನಕಲು ಸೃಷ್ಟಿ ಮಾಡಿ ಬ್ಯಾಂಕುಗಳಿಗೂ ಹಾಗೂ ಸಾರ್ವಜನಿಕರನ್ನು ವಂಚಿಸಿ ಮೋಜು ಮಾಡುತ್ತಿದ್ದ ಇಬ್ಬರು ಐನಾತಿ ವಂಚಕರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿ, 10 ಲಕ್ಷ, 15 ಸಾವಿರ ರೂ. ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಪಿ. ಅಗ್ರಹಾರದ ಇಟಿಎ ಅಪಾರ್ಟ್‌ಮೆಂಟ್ ವಾಸಿ ನದೀಂ ಶರೀಫ್ (30), ಕೆ.ಹೆಚ್.ಬಿ. ಕಾಲೋನಿಯ ಅಪ್ಸರ್ ರೆಹಮಾನ್ (33) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಅನುಚೇತು ಅವರು ತಿಳಿಸಿದ್ದಾರೆ.
ಆರೋಪಿಗಳಿಂದ 10 ಲಕ್ಷ 15 ಸಾವಿರ ರೂ. ನಗದು, 2 ಲ್ಯಾಪ್‌ಟಾಪ್, ಬ್ಲಾಂಕ್ ಕಾರ್ಡ್‌ಗಳು, ರೈಟರ್ ಮಿಷಿನ್‌ಗಳು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋವಾ ಮೂಲದ ಆರೋಪಿಗಳು ದೇಶಾದ್ಯಂತ ವಿವಿಧ ಬ್ಯಾಂಕುಗಳ ಖಾತೆದಾರರಿಗೆ ಬ್ಯಾಂಕಿನ ವ್ಯವಸ್ಥಾಪಕರ ಹೆಸರಿನಲ್ಲಿ ಕರೆ ಮಾಡಿ ಅವರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ರಹಸ್ಯ ನಂಬರ್‌ಗಳನ್ನು ತಿಳಿದುಕೊಂಡು ನಕಲಿ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದರು.
ಸೃಷ್ಟಿಸಿದ ನಕಲಿ ಕಾರ್ಡ್‌ಗಳಿಂದ ಆನ್ ಲೈನ್ ಮೂಲಕ ಹಣ ಡ್ರಾ ಮಾಡಿಕೊಂಡು ವಂಚಿಸುವುದು ಅಲ್ಲದೆ, ವಿದೇಶಿಯರ ಕ್ರೆಡಿಟ್ ಕಾರ್ಡ್‌ಗಳ ಡಾಟಾ ಪಡೆದುಕೊಂಡು ತಾವು ಖರೀದಿಸಿದ ಕಾರ್ಡ್ ರೀಡರ್ ಮೂಲಕ ಬ್ಲಾಂಕ್ ಕಾರ್ಡ್‌ಗೆ ರೈಡ್ ಮಾಡಿಕೊಂಡು ಕಮರ್ಷಿಯಲ್ ಸ್ಟ್ರೀಟ್‌ನ ಅಂಗಡಿ ಮಾಲೀಕರುಗಳ ಜೊತೆ ಶಾಮೀಲಾಗಿ ಅವರುಗಳಿಂದ ಪಿಎಸ್ಒ ಮಿಷಿನ್‌ಗಳನ್ನು ತಂದು ಸ್ವೈಪ್ ಮಾಡಿ ವಿದೇಶಿಯರನ್ನು ವಂಚಿಸಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ದೇಶದ ವಿವಿಧ ಪ್ರವಾಸಿ ತಾಣಗಳಾದ ಮುಂಬೈ, ಗೋವಾ, ಜಮ್ಮು – ಕಾಶ್ಮೀರ, ಬೆಂಗಳೂರು ಇನ್ನಿತರ ಕಡೆಗಳಲ್ಲಿ ವಿವಿಧ ಬ್ಯಾಂಕ್‌ಗಳ ಖಾತೆದಾರರನ್ನು ವಂಚಿಸಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಕಾಟನ್ ಪೇಟೆಯ ಲಾಡ್ಜ್‌ವೊಂದರಲ್ಲಿ ವಾಸ್ತವ್ಯ ಹೂಡಿ ವಂಚನಾ ಜಾಲ ನಡೆಸಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ವಂಚಿಸಿದ ಹಣದಿಂದ ಆರೋಪಿಗಳು ಮೋಜು ಮಾಡುತ್ತಾ,ದುಶ್ಚಟಗಳಿಗೆ ವಿನಿಯೋಗಿಸುತ್ತಿದ್ದರು.
ಕಾಟನ್ ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ ಸ್ವಾಮಿ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Comments are closed.