ಮನೋರಂಜನೆ

ಶಾರೂಖ್ ದಂಪತಿಗೆ ಬೆಳ್ಳಿ ಹಬ್ಬದ ಸಂಭ್ರಮ

Pinterest LinkedIn Tumblr

sharukhಬಾಲಿವುಡ್‌ನಲ್ಲಿ ಸ್ಟಾರ್ ದಂಪತಿ ಎಂದೇ ಖ್ಯಾತಿ ಪಡೆದಿರುವ ಶಾರೂಖ್ ಖಾನ್ ಹಾಗೂ ಗೌರಿ ಖಾನ್ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ಮದುವೆಯಾಗಿ ಇಂದಿಗೆ ಬರೋಬ್ಬರಿ 25 ವರ್ಷಗಳು ಪೂರೈಸಿದ್ದು ಬೆಳ್ಳಿಹಬ್ಬದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ.

1991ರ ಅಕ್ಟೋಬರ್ 25 ರಂದು ಗೌರಿ ಕುಟುಂಬದವರ ವಿರೋಧದ ನಡುವೆಯೂ ಗೌರಿಯನ್ನು ಮದುವೆಯಾದ ಶಾರೂಖ್ ಖಾನ್ ಎಲ್ಲಾ ವಿರೋಧವನ್ನು ಮರೆಸುಂತೆ 25 ವರ್ಷಗಳ ಕಾಲ ಜತೆಯಾಗಿ ಸಂಸಾರ ನಡೆಸಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದಾರೆ. ಗೌರಿ ಕುಟುಂಬದಿಂದ ಎದುರಾದ ಎಲ್ಲಾ ಅಡೆತಡೆಗಳನ್ನು ದೂರ ಮಾಡಿ ಸಂಸಾರ ನಡೆಸುತ್ತಿರುವುದು ಈಗ ಇತಿಹಾಸ. 25 ವರ್ಷಗಳ ಈ ಅವಧಿಯಲ್ಲಿ ದಂಪತಿಗಳು ಜತೆಯಾಗಿ ಸಂಸಾರ ಮಾಡುವ ಮೂಲಕ ಹಲವರೊಂದಿಗೆ ಮಾದರಿಯಾಗಿದ್ದಾರೆ.

ಶಾರೂಖ್ ಖಾನ್ ಲಿಸ್ಬೆನ್‌ನಲ್ಲಿ `ದಿ ರಿಂಗ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವುದಕ್ಕಾಗಿಯೇ ಚಿತ್ರೀಕರಣವನ್ನು ಮುಂದೂಡುವಂತೆ ತಂಡಕ್ಕೆ ಮನವಿ ಮಾಡಿಕೊಂಡು ಮುಂಬೈಗೆ ಆಗಮಿಸಿ ಸ್ನೇಹಿತರು, ಹಿತೈಶಿಗಳು ಹಾಗೂ ಕುಟುಂಬದ ಸದಸ್ಯರೊಂದಿಗೆ 25ನೇ ವರ್ಷದ ವಿವಾದ ವಾರ್ಷಿಕೋತ್ಸವವನ್ನು ಸಂಭ್ರಮ – ಸಡಗರದೊಂದಿಗೆ ಇಂದು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಮಕ್ಕಳಾದ ಆರ್ಯನ್, ಸುಹಾನ ಹಾಗೂ ಅಬ್‌ರಾಂ ಅವರು ಶಾರೂಖ್ ಹಾಗೂ ಗೌರಿಗೆ ವಿಶೇಷವಾಗಿ ಶುಭ ಕೋರಲು ಕೂಡ ನಿರ್ಧರಿಸಿದ್ದಾರೆ. ದಂಪತಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಅದೇ ರೀತಿ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ. ಈ ಬಾರಿಯ ದೀಪಾವಳಿಗೆ 25ನೇ ವಿವಾಹ ವಾರ್ಷಿಕೋತ್ಸವೂ ಕೂಡ ಬಂದಿರುವುದರಿಂದ ಅವರ ಸಂಭ್ರಮ ದ್ವಿಗುಣವಾಗಿದೆ.

ಇಬ್ಬರು ತಮ್ಮ ತಮ್ಮ ಸ್ನೇಹಿತರು, ಹಿತೈಷಿಗಳೊಂದಿಗೆ 25ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಕೂಡ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಪತ್ನಿ ಗೌರಿಗಾಗಿ ಶಾರೂಖ್ ಖಾನ್ ಪ್ರೀತಿಯ ದ್ಯೋತಕವಾಗಿ ವಿಶೇಷ ಉಡುಗೊರೆ ನೀಡಲು ಕೂಡ ನಿರ್ಧರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾರೂಖ್ ಖಾನ್ ಕಳೆದ 25 ವರ್ಷಗಳಿಂದ ಗೌರಿ ಜೊತೆ ಸಂಸಾರ ನಡೆಸಿದ್ದೇ ಗೊತ್ತಾಗಲಿಲ್ಲ. ಪ್ರತಿಯೊಂದು ವಿಷಯದಲ್ಲೂ ಆಕೆ ನನ್ನೊಂದಿಗೆ ತುಂಬಾನೆ ಸಹಕರಿಸುತ್ತಾರೆ. ಆಕೆಯೊಂದಿಗೆ ಇನ್ನೂ ಇಂತಹ ಹಲವಾರು 25 ವರ್ಷಗಳನ್ನು ಜೊತೆಯಾಗಿ ಕಳೆಯಲು ಇಷ್ಟಪಡುತ್ತೇನೆ. ನನ್ನ ಚಿತ್ರರಂಗದ ಏಳು-ಬೀಳುಗಳಲ್ಲಿ ಆಕೆ ಕೈಹಿಡಿದು ಮುನ್ನಡೆಸಿದ್ದಾರೆ. ಸೋತಾಗ ಧೈರ್ಯ ತುಂಬಿದ್ದಾರೆ ಗೆದ್ದಾಗ ಮತ್ತಷ್ಟು ಒಳ್ಳೆಯ ಚಿತ್ರಗಳನ್ನು ನೀಡುವಂತೆ ಹುರಿದುಂಬಿಸಿದ್ದಾರೆ. ನನ್ನೆಲ್ಲಾ ತಪ್ಪುಗಳನ್ನು 25 ವರ್ಷಗಳ ಕಾಲ ಮನ್ನಿಸಿಕೊಂಡು ಬಂದಿದ್ದಾರೆ. ಆಕೆಯೊಂದಿಗೆ ಸಂಸಾರ ಮಾಡುವುದು ಖುಷಿ ತರಲಿದೆ. ಹೀಗಾಗಿಯೇ ಚಿತ್ರಕರಣವನ್ನು ಬದಿಗೊತ್ತಿ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಆಗಮಿಸಿರುವುದಾಗಿ ಹೇಳಿದ್ದಾರೆ.

ಇಂತಹ ಶುಭ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ಹಿತೈಶಿಗಳೊಂದಿಗೆ ಕಾಲ ಕಳೆಯುವ ಮೂಲಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಾವಿಬ್ಬರೂ ನಿರ್ಧರಿಸಿದ್ದೇವೆ. ಜತೆಗೆ ಮಕ್ಕಳೂ ಕೂಡ ಕೈಜೋಡಿಸಿದ್ದಾರೆ ಎಂದು ಶಾರೂಖ್ ಹೇಳಿಕೊಂಡಿದ್ದಾರೆ.

Comments are closed.