ಲಖನೌ, ಅ. ೨೪- ಹೊಸ ಪಕ್ಷ ರಚಿಸುವ ಪ್ರಸ್ತಾಪವನ್ನು ಇಂದು ಇಲ್ಲಿ ತಳ್ಳಿ ಹಾಕಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಪಕ್ಷದ ನಾಯಕ ಹಾಗೂ ತಮ್ಮ ತಂದೆ ಬಯಸಿದಲ್ಲಿ ಮುಖ್ಯಮಂತ್ರಿ ಸ್ಥಾನ ತೆರವು ಮಾಡುವುದಾಗಿ ಘೋಷಿಸಿದರು.
ಸಮಾಜವಾದೀ ಪಕ್ಷದ ಅಲ್ಲಿನ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಶಾಸಕರು, ಮಂತ್ರಿಗಳು ಹಾಗೂ ಸಂಸತ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾದ ಮುಖ್ಯಮಂತ್ರಿಗಳು ಕಣ್ಣೀರು ಹಾಕಿದರು.
ಸಭೆ ನಡೆಯುತ್ತಿದ್ದ ತಾಣದ ಹೊರಗೆ ಅಪ್ಪ- ಮಗನ ಬಣಗಳ ಕಾರ್ಯಕರ್ತರು ಪರಸ್ಪರ ವಿರೋಧಿ ಘೋಷಣೆಗಳನ್ನು ಹಾಕುತ್ತಿದ್ದರು. ಪರಸ್ಪರ ಕಾದಾಟ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಉಭಯ ಬಣಗಳ ಬೆಂಬಲಿಗರನ್ನು ತಹಬಂದಿಗೆ ತರಲು ಹೆಣಗಬೇಕಾಯಿತು.
ತಮ್ಮ ಯುವ ಬೆಂಬಲಿಗರ ಪ್ರತಿಭಟನೆ ನಡುವೆಯೆ, ಪಕ್ಷದ ಹಾಗೂ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಬಯಸಿದಲ್ಲಿ ಮುಖ್ಯಮಂತ್ರಿ ಕುರ್ಚಿ ಬಿಡಲು ಸಿದ್ಧ ಎಂದು ಹೇಳಿಬಿಟ್ಟರು.
ತಮಗೆ ಯಾರು ಪ್ರಾಮಾಣಿಕರು ಎಂದೆನಿಸುವುದೊ ಅಂತಹವರನ್ನು ನೇತಾಜಿ (ಮುಲಾಯಂ ಸಿಂಗ್ ಯಾದವ್) ಮುಖ್ಯಮಂತ್ರಿ ಮಾಡಲಿ ಎಂದು ಆಶಿಸಿದರು.
ಹೊಸ ಪಕ್ಷ ಏಕೆ?
ಭಾವಪರವಶಗೊಂಡ ಅವರು, `ನಾನೇಕೆ ಹೊಸ ಪಕ್ಷ ಆರಂಭಿಸಲಿ’ ಎಂದು ತಮ್ಮನ್ನೇ ಪ್ರಶ್ನಿಸಿಕೊಂಡರು.
ಇಷ್ಟು ವರ್ಷ ಕಾಲ ಅವರು ಜನರ ಕಲ್ಯಾಣಕ್ಕಾಗಿ ಹೆಣಗಿದ್ದಾರೆ. ಅವರು ನನ್ನ ತಂದೆ ಹಾಗೂ ನನ್ನ ಗುರು ಎಂದು ಬಣ್ಣಿಸಿದರು.
ನಾನಾ ತಂತ್ರಗಳನ್ನು ಬಳಸಿ ತಮ್ಮ ಕುಟುಂಬದಲ್ಲಿ ಕಲಹ ಉಂಟು ಮಾಡಲು ಕೆಲವು ಜನ ವ್ಯಕ್ತಿಗಳು ಕುತಂತ್ರ ನಡೆಸುತ್ತಿದ್ದಾರೆ. ಆದರೆ ಯಾರೇ ತಪ್ಪು ಎಸಗಿದಾಗ ಅದನ್ನು ಸರಿಪಡಿಸುವುದನ್ನೂ ತಾವು ಕಲಿತುಕೊಂಡಿರುವುದಾಗಿ ಅವರು ಹೇಳಿಕೊಂಡರು.
ಅಖಿಲೇಶ್ ಅವರ ಚಿಕ್ಕಪ್ಪ ಹಾಗೂ ಅವರ ಮಂತ್ರಿಮಂಡಳದಿಂದ ವಜಾಗೊಂಡಿರುವ ಎಸ್.ಪಿ. ಧುರೀಣ ಶಿವಲಾಲ್ ಯಾದವ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಆರಂಭಕ್ಕೆ ಮೊದಲು ಯುವ ಬೆಂಬಲಿಗರು ಅಖಿಲೇಖ್ ಪರವಾಗಿ ಒತ್ತಡ ಹೇರಲಾರಂಭಿಸಿದ್ದರಿಂದ ಕೆಲ ಕಾಲ ಸಭಾ ಸ್ಥಳದಲ್ಲಿ ಆತಂಕದ ಕಾರ್ಮೋಡ ಕವಿದಂತೆ ಕಂಡು ಬಂದಿತು.
ಅಖಿಲೇಶ್ ಹಾಗೂ ಮುಲಾಯಂಸಿಂಗ್ ಯಾದವ್ ಅವರು ಪರಸ್ಪರ ಬೆಂಬಲಿಗರನ್ನು ಉಚ್ಛಾಟಿಸಿದ ಮಾರನೇ ದಿನವೇ ನಡೆದ ಇಂದಿನ ಸಭೆಗೆ ಎಲ್ಲಿಲ್ಲದ ಮಹತ್ವ ಬಂದಿತ್ತು.
Comments are closed.