ಮನೋರಂಜನೆ

ಪ್ರಿಯಾಂಕಾ ಚೋಪ್ರಾರ ಟೀ ಶರ್ಟ್ ವಿರುದ್ಧ ಕಾವೇರಿದ ಚರ್ಚೆ

Pinterest LinkedIn Tumblr

priಹಾಲಿವುಡ್‌ಗೆ ಹೆಜ್ಜೆ ಇರಿಸಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ಪ್ರವಾಸಿ ನಿಯತಕಾಲಿಕೆ ‘ಕಾಂಡೆ ನ್ಯಾಸ್ಟ್‌ ಟ್ರಾವೆಲರ್ ಇಂಡಿಯಾ’ದ ಅಕ್ಟೋಬರ್‌ ಸಂಚಿಕೆಯ ಮುಖಪುಟ ಫೋಟೊದಲ್ಲಿ ಧರಿಸಿದ್ದ ಟೀಶರ್ಟ್‌ ಇದೀಗ ವಿವಾದದ ಕೇಂದ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಿಯಾಂಕಾ ಪರ– ವಿರುದ್ಧದ ಚರ್ಚೆ ಕಾವೇರಿದೆ.

‘ಪ್ರಿಯಾಂಕಾ ನೀನು ನೋಡೋಕೆ ಸೂಪರ್‌ ಆಗಿದ್ದೀಯಾ. ಅಷ್ಟು ಸುಂದರ ಮುಖಕ್ಕೆ ಒಪ್ಪುವ ತಲೆ ಕೊಡುವುದನ್ನೇ ದೇವರು ಮರೆತಂತಿದೆ. ಇನ್ನಾದರೂ ಮಾನವೀಯತೆ ರೂಢಿಸಿಕೋ’ ಎಂದು ಟ್ವೀಟ್‌ ಮಾಡುತ್ತಿರುವ ಅನೇಕರು ತಮ್ಮ ಅಭಿಮಾನವನ್ನೂ– ಆಕ್ರೋಶವನ್ನೂ ಒಟ್ಟಿಗೆ ತೋಡಿಕೊಳ್ಳುತ್ತಿದ್ದಾರೆ.

‘ಇದ್ದ ಊರು– ದೇಶ ಬಿಟ್ಟು ನಿರಾಶ್ರಿತರಾಗಿ ಅಲೆಯಬೇಕೆಂದು ಯಾರಾದರೂ ಬಯಸುತ್ತಾರೆಯೇ? ಪ್ರಿಯಾಂಕಾ, ನಿರಾಶ್ರಿತರಾಗುವುದು ಒಂದು ಆಯ್ಕೆಯೇ? ನಿಮ್ಮ ಅಸ್ತಿತ್ವದ ಬಗ್ಗೆ ನಿಮಕೇಕೆ ಕೀಳರಿಮೆ?’ ಎಂದು ಹಲವು ಅಭಿಮಾನಿಗಳು @priyankachopra ಟ್ಯಾಗ್ ಹಾಕಿ ಪ್ರಶ್ನಿಸುತ್ತಿದ್ದಾರೆ.

ಅಭಿಮಾನಿಗಳ ಆಕ್ರೋಶವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿರುವ ಪ್ರಿಯಾಂಕಾ, ‘ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಯಾರದಾದರೂ ಮನಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವೆ’ ಎಂದು ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

ಏನಿದು ವಿವಾದ?
‘ಕಾಂಡೆ ನ್ಯಾಸ್ಟ್‌’ನ ಮುಖಪುಟದಲ್ಲಿ ಪ್ರಿಯಾಂಕಾ ಬಿಳಿಬಣ್ಣದ ಟೀಶರ್ಟ್‌ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಶರ್ಟ್‌ ಮೇಲೆ ರೆಫ್ಯೂಜಿ (ನಿರಾಶ್ರಿತ), ಇಮಿಗ್ರೆಂಟ್ (ವಲಸಿಗ), ಔಟ್‌ಸೈಡರ್‌ (ಪರದೇಶಿ) ಮತ್ತು ಟ್ರಾವೆಲ್ಲರ್ (ಪ್ರವಾಸಿ) ಎಂಬ ಪದಗಳು ಅನುಕ್ರವಾಗಿವೆ. ಇದರಲ್ಲಿ ಮೊದಲ ಮೂರು ಪದಗಳ ಮೇಲೆ ಕೆಂಪು ಶಾಯಿಯಿಂದ ಗೆರೆ ಎಳೆಯಲಾಗಿದೆ.

‘ನಾವೇಕೆ ಸಂಚರಿಸುತ್ತೇವೆ? ಎಂಬ ಪ್ರಶ್ನೆಗೆ ಬೋಲ್ಡ್‌ ಹುಡುಗಿ ಪ್ರಿಯಾಂಕಾ ನೀಡಿದ ಉತ್ತರ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ‘ಕಾಂಡೆ ನ್ಯಾಸ್ಟ್‌ ಟ್ರಾವೆಲ್ಲರ್’ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿತ್ತು.

‘ಜನರು ತಮ್ಮ ಮನೆಗಳನ್ನು ಬಿಟ್ಟು ಹೊರಬರಲು ಕಾರಣವೇನು ಎಂಬುದನ್ನು ಗಮನಿಸದ, ಕೀಳು ಅಭಿರುಚಿಯ ವಿವರಣೆ ಪ್ರಿಯಾಂಕಾ ತೊಟ್ಟ ಟೀಶರ್ಟ್‌ ಮೇಲೆ ಇದೆ’ ಎಂಬ ಟೀಕೆಗಳು ತಕ್ಷಣ ಎಂಬಂತೆ ಟ್ವೀಟ್‌ ಆಗಲು ಶುರುವಾದವು.

ಪ್ರಿಯಾಂಕಾ ಹೇಳಿದ್ದೇನು?
‘ಜನಾಂಗೀಯ ವಾದವನ್ನು ಖಂಡಿಸುವುದು ಮತ್ತು ಅಪರಿಚಿತ ಪ್ರದೇಶದಲ್ಲಿ ಸಂಚರಿಸುವಾಗ ಉಂಟಾಗುವ ಭಯವನ್ನು ಹೋಗಲಾಡಿಸುವುದು ಈ ಟೀಶರ್ಟ್‌ ಮೇಲಿನ ಅಕ್ಷರಗಳ ಉದ್ದೇಶವಾಗಿತ್ತು. ಅದನ್ನು ಜನರು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ನಾನು ಉದ್ಧಟತನವಾಗಿ ಮಾತನಾಡುತ್ತಿಲ್ಲ. ನಾನು ಮಾಡಿದ ಕೆಲಸದ ಬಗ್ಗೆ ಸ್ಪಷ್ಟತೆ ಇದೆ’ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು.

‘ಟೀಶರ್ಟ್‌ ಸಂದೇಶದಿಂದ ಯಾರಿಗಾದರೂ ನೋವಾಗಿದ್ದರೆ ಖಂಡಿತಾ ಕ್ಷಮೆ ಯಾಚಿಸುತ್ತೇನೆ. ಸಮಾಜಕ್ಕೆ ಒಳಿತಾಗಬೇಕೆನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದು ಪ್ರಿಯಾಂಕಾ ನಂತರ ಖಾಸಗಿ ಟೀವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿ ಅಭಿಮಾನಿಗಳ ಕೋಪ ಶಮನ ಮಾಡಲು ಯತ್ನಿಸಿದ್ದರು.

‘ಗಡಿಗಳನ್ನು ಮುಕ್ತವಾಗಿರಿಸುವುದು ಮತ್ತು ಗೋಡೆಗಳನ್ನು ಕೆಡವುದರಿಂದ ಜಗತ್ತು ನೋಡಲು ಸಾಧ್ಯ ಎನ್ನುವುದು ನಮ್ಮ ಭಾವನೆ’ ಎಂದು ಪ್ರಿಯಾಂಕಾಳ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದ್ದ ನಿಯತಕಾಲಿಕೆಯೂ ಸ್ಪಷ್ಟನೆ ನೀಡಿತ್ತು.

ಪ್ರಿಯಾಂಕಾ ಅಂದ್ರೆ ಸುಮ್ನೆ ಅಲ್ಲ
ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿರುವ ಪ್ರಿಯಾಂಕಾ ಯೂನಿಸೆಫ್‌ (ವಿಶ್ವಸಂಸ್ಥೆಯ ಮಕ್ಕಳ ನಿಧಿ) ರಾಯಭಾರಿಯೂ ಹೌದು. ಹಾಲಿವುಡ್‌ ಮುಖ್ಯಧಾರೆಯ ಸಿನಿಮಾಗಳಲ್ಲಿ ಮಿಂಚಿದ ಅಪರೂಪದ ನಟಿಯೂ ಹೌದು.

ಇಸ್ಲಾಮಿಕ್ ಸ್ಟೇಟ್ ಉಗ್ರರ ಹಾವಳಿ ಮತ್ತು ಸಿರಿಯಾ ಬಿಕ್ಕಿಟ್ಟಿನಿಂದಾಗಿ 13 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿ ಇತರ ದೇಶಗಳ ಆಶ್ರಯ ಬಯಸಿ ವಲಸೆ ಹೊರಟಿದ್ದಾರೆ. ಕಳ್ಳ ಮಾರ್ಗಗಳಲ್ಲಿ ಗಡಿದಾಟಲು ಯತ್ನಿಸಿದ ಸಾವಿರಾರು ಮಂದಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹೀಗಾಗಿಯೇ ಪ್ರಿಯಾಂಕಾ ಅವರ ಟೀಶರ್ಟ್‌ ಸಂದೇಶ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Comments are closed.