ತ್ರಿಪುರ: ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ತಮಗೆ ಉಡುಗೊರೆಯಾಗಿ ಬಂದಿರುವ ಬಿಎಂಡಬ್ಲ್ಯು ಕಾರನ್ನು ವಾಪಸು ನೀಡಲು ತೀರ್ಮಾನಿಸಿದ್ದರ ಕಾರಣ ಎಲ್ಲರಿಗೂ ಗೊತ್ತೇ ಇದೆ.
ದುಬಾರಿ ಮತ್ತು ಐಷಾರಾಮಿ ಕಾರಿನ ನಿರ್ವಹಣೆ ಮಾಡುವುದು ಕಷ್ಟ. ಅಷ್ಟೇ ಅಲ್ಲ ನಮ್ಮೂರಿನ ರಸ್ತೆಗಳು ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ, ಕಾರಿನ ಸರ್ವೀಸ್ ಸೆಂಟರ್ ಕೂಡಾ ಇಲ್ಲ ಆದ್ದರಿಂದ ನಾನು ಕಾರನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂದು ದೀಪಾ ಹೇಳಿದ್ದು ಸುದ್ದಿಯಾಗಿತ್ತು.
ದೀಪಾ ಅವರ ಈ ಹೇಳಿಕೆ ತ್ರಿಪುರ ಸಚಿವ ಸಂಪುಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಮಾತ್ರವಲ್ಲದೆ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.
ಇಷ್ಟೆಲ್ಲಾ ಆದ ನಂತರ ಇದೀಗ ತ್ರಿಪುರಾ ಸರ್ಕಾರವು ದೀಪಾ ಅವರು ಕಾರು ಓಡಿಸಲು ಅನುಕೂಲವಾಗುವಂತೆ ಅಲ್ಲಿನ ರಸ್ತೆಗಳನ್ನು ದುರಸ್ತಿಗೊಳಿಸಲು ತೀರ್ಮಾನಿಸಿವೆ.
ದೀಪಾ ಅವರ ಮನೆಯ ಸುತ್ತಲಿನ ರಸ್ತೆಗಳನ್ನು ದುರಸ್ತಿಗೊಳಿಸಲು ತೀರ್ಮಾನಿಸಿದ್ದು, ಮುಂದಿನ ತಿಂಗಳು ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಇಂಜಿನಿಯರ್ (ರಸ್ತೆ ಮತ್ತು ಕಟ್ಟಡ) ಸೋಮೇಶ್ ಚಂದ್ರ ದಾಸ್ ಅವರು ಹೇಳಿದ್ದಾರೆ.
‘ಅಗರ್ತಲಾದ ರಸ್ತೆಗಳು ತುಂಬಾ ಕಿರಿದಾಗಿವೆ. ಅವುಗಳ ಮೇಲೆ ಬಿಎಂಡಬ್ಲ್ಯು ಕಾರು ಓಡಿಸುವುದು ಕಷ್ಟ. ಜೊತೆಗೆ ನಗರದಲ್ಲಿ ಬಿಎಂಡಬ್ಲ್ಯು ಷೋ ರೂಂ ಮತ್ತು ಸರ್ವೀಸ್ ಕೇಂದ್ರಗಳೂ ಇಲ್ಲ. ಕಾರಿನ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಕಾರಿನ ಬದಲಾಗಿ ಅದಕ್ಕೆ ಎಷ್ಟು ಬೆಲೆ ಇದೆಯೊ ಅಷ್ಟು ಹಣವನ್ನು ಬಹುಮಾನ ರೂಪದಲ್ಲಿ ನೀಡಿದರೆ ಅನುಕೂಲವಾಗುತಿತ್ತು ಎಂದು ದೀಪಾ ಹೇಳಿದ್ದರು.
ಒಲಿಂಪಿಕ್ಸ್ ಸಾಧನೆ ಮಾಡಿದ ದೀಪಾ ಅವರಿಗೆ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದೀಪಾ ಅವರಿಗೆ ಹಸ್ತಾಂತರಿಸಿದ್ದರು.
Comments are closed.