ಬೆಂಗಳೂರು: ಬಹುನಿರೀಕ್ಷಿತ ನಾಗರಾಹಾವು ಚಿತ್ರ ತೆರೆಯ ಮೇಲೆ ಕಾಣಿಸಿಕೊಳ್ಳಲು ಸರ್ವಸನ್ನದ್ಧವಾಗಿದೆ. ಒಂದೆಡೆ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರನ್ನು ಕಣ್ತುಂಬಿಕೊಳ್ಳುವ ಕಾತರವಾದರೆ, ಇನ್ನೊಂದೆಡೆ ಸ್ಯಾಂಡಲ್ವುಡ್ ಕ್ವೀನ್ ಬರೋಬ್ಬರಿ ಎರಡು ವರ್ಷದ ನಂತರ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಮೂರು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಮ್ಯಾ ‘ನಾನು ಹಾವಿನ ಪಾತ್ರ ನಿರ್ವಹಿಸಿಲ್ಲ, ಹಾವೇ ನನ್ನನ್ನು ನಿರ್ವಹಿಸಿದೆ’ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ನಂತರ ರಮ್ಯಾ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಇದು ರಮ್ಯಾ ಅಭಿಮಾನಿಗಳಲ್ಲಿ ಭಾರೀ ಬೇಸರವನ್ನುಂಟುಮಾಡಿತ್ತು. ‘ಆರ್ಯನ್’ ರಮ್ಯಾ ಅವರ ಕೊನೆಯ ಚಿತ್ರ. ಇದೀಗ ರಮ್ಯಾ ಅವರು ಗ್ರ್ಯಾಂಡ್ ಕಮ್್ಯಾಕ್ ಮಾಡುತ್ತಿರುವುದು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ. ತಮ್ಮ ನಾಗರಹಾವು ಚಿತ್ರದ ಕುರಿತು ಪ್ರತಿಕ್ರಿಯಿಸಿದ ರಮ್ಯಾ, ಈ ಚಿತ್ರದಲ್ಲಿ ನಾನು ಮೂರು ಪಾತ್ರಗಳನ್ನು ನಿರ್ವಹಿಸಿರುವೆ. ಚಿತ್ರ ಇಷ್ಟೊಂದು ಅದ್ದೂರಿಯಾಗಿ ಮೂಡಿ ಬರಲು ನಿರ್ದೇಶಕ ಕೋಡಿ ರಾಮಕೃಷ್ಣ, ಮತ್ತು ವಿಎಫ್ಎಕ್ಸ್ ತಂಡವೇ ಮೂಲ ಕಾರಣ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕತೆ ಕೇಳಿದೊಡನೆಯೇ ರೋಮಾಂಚನವಾಯಿತು. ಚಿತ್ರದಲ್ಲಿ ಹಲವು ಹಾಸ್ಯಪ್ರಸಂಗಳಿವೆ. ಎಲ್ಲದಕ್ಕೂ ಮೀರಿ ವಿಷ್ಣು ಸರ್ ಚಿತ್ರದಲ್ಲಿರುವುದು ಕಥೆಗೆ ಇನ್ನಷ್ಟು ಬಲ ತುಂಬಿದಂತಾಗಿದೆ. ಚಿತ್ರದಲ್ಲಿನ ನನ್ನ ಪಾತ್ರ ವಿಭಿನ್ನವಾಗಿರುವುದರಿಂದ ಇದಕ್ಕಾಗಿ ತುಂಬಾ ಕಸರತ್ತು ನಡೆಸಿದ್ದೆ. ಇದೇ ಮೊದಲ ಬಾರಿ ಆಕ್ಷನ್ ಪಾತ್ರದಲ್ಲಿ ನನ್ನನ್ನು ತೋರಿಸಿರುವುದು ಚಿತ್ರದ ಮತ್ತೊಂದು ವಿಶೇಷ. ಮೂರೂ ಪಾತ್ರದಲ್ಲಿ ಬಹಳ ಅಂತರವಿದೆ. ಮೊದಲನೇ ಪಾತ್ರ ಹಳ್ಳಿಯೊಂದರ ಯುವತಿಯಾಗಿ, ಎರಡನೇ ಪಾತ್ರದಲ್ಲಿ ನಗರದ ಹುಡುಗಿಯಾಗಿ ತೋರಿಸಲಾಗಿದೆ. ಇನ್ನು ಕೊನೆಯ ಪಾತ್ರದಲ್ಲಿ ನಾಗಿಣಿಯಾಗಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದರು.
ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ನಾಗರಹಾವು ಚಿತ್ರವನ್ನು ವೀಕ್ಷಿಸಲಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ರಜನಿಕಾಂತ್ ಮತ್ತು ಡಾ. ವಿಷ್ಣುವರ್ಧನ ಆಪ್ತ ಸ್ನೇಹಿತರಾಗಿದ್ದರು. ಈ ಹಿಂದೆ ವಿಷ್ಣು ಅಭಿನಯದ ಆಪ್ತಮಿತ್ರ ಚಿತ್ರವನ್ನು ಮೆಚ್ಚಿದ ರಜನಿ ತೆಲಗು ಭಾಷೆಯಲ್ಲಿ ಚಂದ್ರಮುಖಿ ಎಂದು ನಾಮಕರಣ ಮಾಡಿ, ವಿಷ್ಣುವರ್ಧನ ನಿರ್ವಹಿಸಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.