ಮನೋರಂಜನೆ

ಬಿಗ್ ಬಾಸ್ ವಿರುದ್ಧ ಪ್ರತಿಭಟನೆ…ಏಕೆ ಎಂಬುದು ಮುಂದಿದೆ ಓದಿ…

Pinterest LinkedIn Tumblr

bigg

ಬೆಂಗಳೂರು: ಬಿಗ್ ಬಾಸ್ ಸೇರಿದಂತೆ ಕಿರುತೆರೆಯಲ್ಲಿ ಪ್ರಸಾರವಾಗುವ ಯಾವುದೇ ರಿಯಾಲಿಟಿ ಶೋಗಳಲ್ಲಿ ನಟ- ನಟಿಯರು, ತಂತ್ರಜ್ಞರು ಭಾಗವಹಿಸುವುದನ್ನು ಖಂಡಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ನಿರ್ಮಾಪಕರು, ವಿತರಕರು ಬಿಡದಿಯ ಇನೋವೆಟಿವ್ ಫಿಲಂ ಸಿಟಿಯ ಬಿಗ್‌ಬಾಸ್ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ರಿಯಾಲಿಟಿ ಶೋಗಳನ್ನು ನಡೆಸುವುದರಿಂದ ಚಲನಚಿತ್ರಗಳ ಪ್ರದರ್ಶನಗಳ ಮೇಲೆ ಹೊಡೆತ ಬೀಳಲಿದೆ. ಹೀಗಾಗಿ ನಟ- ನಟಿಯರು ಶೋಗಳಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಮನವರಿಕೆ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಸಾ.ರಾ. ಗೋವಿಂದು, ರಿಯಾಲಿಟಿ ಶೋಗಳನ್ನು ನಡೆಸುವುದರಿಂದ ಚಿತ್ರಮಂದಿರದ ಕಡೆ ಜನರು ಬರುವುದು ಕಡಿಮೆಯಾಗಲಿದೆ. ಇದರಿಂದ ನಿರ್ಮಾಪಕರು, ವಿತರಕರ ಮೇಲೆ ಹೊಡೆತ ಬೀಳಲಿದೆ. ಕೋಟ್ಯಾಂತರ ರೂ. ಬಂಡವಾಳ ಹಾಕಿದ ನಿರ್ಮಾಪಕರು ಬೀದಿಗೆ ಬರುವಂತಾಗಿದೆ. ಹೀಗಾಗಿ ಯಾವುದೇ ನಟ- ನಟಿಯರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು ಎಂದರು.

ಬಿಗ್‌ಬಾಸ್ ರಿಯಾಲಿಟಿ ಶೋ ಸಮಯವನ್ನು 9 ಗಂಟೆಗೆ ಬದಲಾಗಿ ರಾತ್ರಿ 10 ಗಂಟೆಯ ನಂತರ ಸಮಯ ನಿಗದಿ ಮಾಡಬೇಕು. ಅಲ್ಲದೆ ಒಮ್ಮೆ ಪ್ರಸಾರ ಮಾಡಿದ ಕಂತನ್ನು ಯಾವುದೇ ಕಾರಣಕ್ಕೂ ಪುನಃ ಮರು ಪ್ರಸಾರ ಮಾಡಬಾರದು. ಜೊತೆಗೆ ವಾಹಿನಿಗಳು ಕೂಡ ಶೋಗಳನ್ನು ಪ್ರಚಾರ ಮಾಡಬಾರದು ಎಂದು ಆಗ್ರಹಿಸಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ವಾಹಿನಿಯ ಮುಖ್ಯಸ್ಥರು ಎಲ್ಲಾ ವಾಹಿನಿಗಳಿಗೂ ಹೇಳಿ, ನಾವು ಅದನ್ನೇ ಅನುಸರಿಸುತ್ತೇವೆ ಎಂದಿದ್ದಾರೆ. ಅದಕ್ಕೆ ಮೊದಲು ನೀವು ನಿಯಂತ್ರಣ ಹಾಕಿಕೊಳ್ಳಿ, ಎಲ್ಲರೂ ಸರಿಹೋಗುತ್ತಾರೆ ಎಂದು ಹೇಳಿದ್ದೇವೆ ಎಂದರು.

ಇತ್ತೀಚೆಗೆ ವಾಹಿನಿಗಳು ಚಿತ್ರಗಳನ್ನು ಕೊಂಡುಕೊಳ್ಳುವುದು ಕಡಿಮೆಯಾಗಿದೆ. ಹೀಗಾಗಿ ಪ್ರತಿಯೊಂದು ವಾಹಿನಿಯೂ ಕನಿಷ್ಠ 50 ಚಿತ್ರಗಳನ್ನು ಕೊಂಡುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

ಬಿಗ್‌ಬಾಸ್ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳನ್ನು ನ‌ಡೆಸಿಕೊಡುವ ಸುದೀಪ್, ರವಿಚಂದ್ರನ್ ಸೇರಿದಂತೆ ನಟ- ನಟಿಯರ ಜೊತೆ ಮಾತುಕತೆ ನಡೆಸಿ ಮನವೊಲಿಸಲಾಗುವುದು ಎಂದರು.

ಸ್ಪರ್ಶ ರೇಖಾ ಭಾಗಿ
ನಿರ್ಮಾಪಕ ಭಾ.ಮಾ. ಹರೀಶ್ ಮಾತನಾಡಿ, ಸದ್ಯದಲ್ಲೇ ಬಿಡುಗಡೆಯಾಗಲಿರುವ ನಮ್ಮ ಚಿತ್ರದ ನಾಯಕಿ ಸ್ಪರ್ಶ ರೇಖಾ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದು, ಇದರಿಂದಾಗಿ ಚಿತ್ರದ ಪ್ರಚಾರಕ್ಕೆ ಒಡೆತ ಬಿದ್ದಿದೆ. ಈ ಬಗ್ಗೆ ಅವರ ಗಮನಕ್ಕೆ ತಂದಿದ್ದು, ಬಿಗ್‌ಬಾಸ್ ಮುಗಿದ ಬಳಿಕ ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೂ ಅವರು ಭಾಗಿಯಾಗಿರುವುದರಿಂದ ಚಿತ್ರದ ಪ್ರಚಾರಕ್ಕೆ ಅಡ್ಡಿಯಾಗಿದೆ. ಇದೇ ರೀತಿ ಹಲವು ನಟ- ನಟಿಯರು ಶೋ ನಲ್ಲಿ ಭಾಗವಹಿಸಿರುವುದರಿಂದ ನಿರ್ಮಾಪಕರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಂ.ಎನ್. ಸುರೇಶ್, ಭಾ.ಮ. ಗಿರೀಶ್, ಗಣೇಶ್, ಆರ್.ಎಸ್. ಗೌಡ, ನರಸಿಂಹಲು, ಜಯಣ್ಣ, ವಿ.ಆರ್. ಕೇಶವ್ ಮತ್ತಿತರರು ಭಾಗವಹಿಸಿದ್ದರು.

Comments are closed.