ಮನೋರಂಜನೆ

ಲೈಫು ಸೂಪರ್: ಬದುಕು ದುರ್ಭರ!

Pinterest LinkedIn Tumblr

ಗಣೇಶ ವೈದ್ಯ

Lifu-super2ಲೈಫು ಸೂಪರ್
ನಿರ್ಮಾಪಕ: ವಿ. ಸಿ. ತಿಮ್ಮ ರೆಡ್ಡಿ
ನಿರ್ದೇಶನ: ವಿನೋದ್ ಕುಮಾರ್ ಆರ್.
ತಾರಾಗಣ: ಲಿಖಿತ್ ಸೂರ್ಯ, ಮೇಘನಾ ಅಯ್ಯಪ್ಪ, ನಿರಂತ್, ಅನು ಪೂವಯ್ಯ

ನಾವು ಅಂದುಕೊಳ್ಳುವಂತೆ ಎಲ್ಲವೂ ಆದರೆ ಜೀವನ ತುಂಬಾ ಚೆನ್ನಾಗಿರುತ್ತದೆ. ಅದು ಪ್ರೀತಿಯಿರಬಹುದು ಅಥವಾ ವ್ಯವಹಾರ ಆಗಬಹುದು. ಆದರೆ ಅಂದುಕೊಂಡಂತೆಯೇ ಎಲ್ಲವೂ ಆಗುತ್ತಾ ಹೋದರೆ ಅದಕ್ಕೆ ಕೊನೆಯಾದರೂ ಎಲ್ಲಿದೆ. ಮನುಷ್ಯನಿಗೆ ಒಂದು ಆಸೆ ಈಡೇರುತ್ತಿದ್ದಂತೆ ಮತ್ತೊಂದು ಆಸೆ ಧುತ್ತೆಂದು ಎದ್ದು ನಿಲ್ಲುತ್ತದೆ. ಇಂಥದ್ದೇ ಕಥೆಯನ್ನಿಟ್ಟುಕೊಂಡು ‘ಲೈಫು ಸೂಪರ್’ ಸಿನಿಮಾ ನಿರ್ದೇಶಿಸಿದ್ದಾರೆ ವಿನೋದ್ ಕುಮಾರ್.

ಪತ್ರಕರ್ತನಾಗುವ ಆಸೆಗೆ ಗುರು (ಲಿಖಿತ್ ಸೂರ್ಯ) ಎಂಜಿನಿಯರಿಂಗ್ ತೊರೆದು ಪತ್ರಿಕೆಯೊಂದನ್ನು ಸೇರುತ್ತಾನೆ. ‘ಎಕ್ಸ್‌ಕ್ಲೂಸಿವ್’ ಸುದ್ದಿ ಕೊಟ್ಟು ಪತ್ರಿಕೆಯ ಪ್ರಸಾರ ಹೆಚ್ಚುವಂತೆ ಮಾಡುತ್ತಾನೆ. ಆದರೆ ಆತನ ಸಂಬಳ ಮಾತ್ರ ಆರಕ್ಕೇರುವುದಿಲ್ಲ. ಕಡಿಮೆ ಆದಾಯಕ್ಕೆ ಮನೆಯಲ್ಲಿ ತಂದೆಯ ಬೈಗುಳ.

ತೀರಿಕೊಂಡ ತಾಯಿಯ ಕನಸನ್ನು ನನಸಾಗಿಸಲು ರಾಜು (ನಿರಂತ್‍) ಬೆಂಗಳೂರಿಗೆ ಬರುತ್ತಾನೆ. ಮಗ ನಟನಾಗಬೇಕು ಎಂಬುದು ಆಕೆಯ ಹೆಬ್ಬಯಕೆ. ಗಾಂಧೀನಗರದ ನಡವಳಿಕೆಗೆ ಬೇಸತ್ತ ಆತ ವಾಪಸ್ ಊರಿಗೆ ಹೊರಡಲು ನಿರ್ಧರಿಸುತ್ತಾನೆ. ಇಲ್ಲಿ ಇಬ್ಬರ ಅವಶ್ಯಕತೆಯೂ ಒಂದೇ. ಅದು ಹಣ ಮಾತ್ರ. ಹಣವೊಂದಿದ್ದರೆ ಏನನ್ನಾದರೂ ಮಾಡಬಹುದು, ಲೈಫು ಸೂಪರ್ ಆಗಿರುತ್ತದೆ ಎಂಬ ಭ್ರಮೆ ಅವರದು.

ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕಪ್ಪುಹಣ ಬರುವ ಮಾಹಿತಿ ಪಡೆದುಕೊಳ್ಳುವ ಗುರು ಮತ್ತು ರಾಜು ಪುಡಿ ರೌಡಿಗಳೊಂದಿಗೆ ಸೇರಿ ಅದನ್ನು ದೋಚುವ ಹುನ್ನಾರ ನಡೆಸುತ್ತಾರೆ. ಶಾಸಕನ ಜೊತೆಗಿದ್ದುಕೊಂಡು ಆತನದೇ ಹಣ ಲೂಟಿ ಮಾಡುವ ಸಂಚಿನಲ್ಲಿ ಇವರಿಬ್ಬರು ಏನೆಲ್ಲ ಸಾಹಸ ಮಾಡುತ್ತಾರೆ, ಯಶಸ್ವಿಯಾಗುತ್ತಾರಾ, ಲೈಫು ಸೂಪರ್ ಆಗುತ್ತಾ ಇಲ್ಲವಾ – ಇವೆಲ್ಲ ಕೊನೆ ಹಂತದ ಕುತೂಹಲ.

ಕಥೆಗೆ ಸಂಬಂಧಿಸಿದ ಯಾವುದಾದರೂ ಅಂಶ ಮೊದಲರ್ಧದಲ್ಲಿ ಸಿಗುತ್ತದೆಯೇ ಎಂದು ಹುಡುಕುವುದೇ ವ್ಯರ್ಥ. ಕಥೆ ಮುಂದೆ ಕದಲುವುದೇ ಇಲ್ಲ. ಆರಂಭದಿಂದಲೂ ಜಾಳು ಜಾಳಾಗಿಯೇ ಸಾಗುವ ನಿರೂಪಣೆಯಲ್ಲಿ ವಿರಾಮದ ನಂತರ ಲೂಟಿಯ ತಂತ್ರಗಳಾದರೂ ರೋಚಕತೆ ನೀಡುತ್ತದೆಂದು ನಿರೀಕ್ಷಿಸಿದರೆ ಅಲ್ಲೂ ನಿರಾಸೆಯೇ. ಕಥೆ ಟೊಳ್ಳು, ಚಿತ್ರಕಥೆ ಸಪ್ಪೆ, ಆಶಯವೂ ಒಳ್ಳೆಯದೇನಲ್ಲ. ಚರ್ವಿತ ಚರ್ವಣ ಸಂದೇಶಗಳನ್ನೇ ಪಾತ್ರಗಳ ಬಾಯಿಂದ ದಾಟಿಸಲಾಗಿದೆ.

‘ಲೈಫು ಸೂಪರ್ ಮಾಡಿಕೊಳ್ಳುವ’ ದಾರಿಯಲ್ಲಿ ಪ್ರೀತಿಗೆ ಬೆಲೆ ಇಲ್ಲದ ಕಾರಣ ನಾಯಕಿಯರು ಅತಿಥಿ ಪಾತ್ರಧಾರಿಗಳಾಗಿದ್ದಾರೆ. ರಂಗಾಯಣ ರಘು ಅತಿರೇಕದ ನಟನೆಯನ್ನು ಮತ್ತೊಮ್ಮೆ ನೋಡಬಹುದು. ಹಿನ್ನೆಲೆ ಸಂಗೀತ ಕಿವಿಗೆ ಅಪ್ಪಳಿಸಿದರೆ ಹಾಡುಗಳೂ (ಸಂಗೀತ ಜೂಡಾ ಸ್ಯಾಂಡಿ) ಅದನ್ನು ಶಮನಗೊಳಿಸಲು ವಿಫಲವಾಗಿವೆ.

ಛಾಯಾಗ್ರಹಣದಲ್ಲಿ ಚೇಸಿಂಗ್ ದೃಶ್ಯಗಳನ್ನು ಚೆನ್ನಾಗಿ ತೋರಿಸುವ ಅವಕಾಶವನ್ನು ಸುಜಯ್ ಕುಮಾರ್ ಕೈಚೆಲ್ಲಿದ್ದಾರೆ. ನವೀನ್ ರಾಜ್ ಸಂಕಲನದ ಸುಧಾರಣೆಗೆ ಇನ್ನಷ್ಟು ಅವಕಾಶಗಳಿದ್ದವು.

Comments are closed.