ಮನೋರಂಜನೆ

ಹಳ್ಳಿ ಸೊಗಡಿನೊಂದಿಗೆ ರಂಜನೆ ‘ಹ್ಯಾಪಿ ಬರ್ತ್ ಡೇ’

Pinterest LinkedIn Tumblr

ಆನಂದತೀರ್ಥ ಪ್ಯಾಟಿ

happy‘ಹ್ಯಾಪಿ ಬರ್ತ್ ಡೇ’
ನಿರ್ಮಾಪಕರು: ಧನಲಕ್ಷ್ಮೀ ಚೆಲುವರಾಯ ಸ್ವಾಮಿ, ಭಾಗ್ಯ ಸುಖಧರೆ
ನಿರ್ದೇಶಕ: ಕೆ. ಮಹೇಶ ಸುಖಧರೆ
ತಾರಾಗಣ: ಸಚಿನ್, ಸಂಸ್ಕೃತಿ ಶೆಣೈ, ಚಿಕ್ಕಣ್ಣ, ಅಚ್ಯುತಕುಮಾರ್, ಅಂಬರೀಷ್

‘ಹ್ಯಾಪಿ ಬರ್ತ್ ಡೇ’ ಅಂದರೆ ಜನ್ಮದಿನದ ಶುಭಾಶಯಗಳು ಎಂದರ್ಥ. ಆದರೆ ಮಂಡ್ಯ ಕಡೆ ಅದಕ್ಕೆ ‘ಹೊಗೆ ಹಾಕಿಸಿಕೊಳ್ಳೋದು’ ಎಂಬ ಎರಡನೇ ಅರ್ಥವೂ ಇದೆ! ಕೆ. ಮಹೇಶ್ ಸುಖಧರೆ ನಿರ್ದೇಶನದ ‘ಹ್ಯಾಪಿ ಬರ್ತ್ ಡೇ’ ಸಿನಿಮಾದಲ್ಲಿ ನಾಯಕನ ಪ್ರಿಯತಮೆಯ ತಂದೆ ‘ಹ್ಯಾಪಿ ಬರ್ತ್ ಡೇ’ ದಿನಕ್ಕೆ ಸಮೀಪ ಬರುತ್ತಿರುತ್ತಾನೆ. ಆತನ ಕೊನೆಯ ಆಸೆಯನ್ನು ಈಡೇರಿಸುವುದೇ ನಾಯಕನ ಗುರಿ. ಅದರಲ್ಲಿ ಆತ ಯಶಸ್ವಿಯಾಗುತ್ತಾನೆಯೇ ಎಂಬ ಅರ್ಥಹೀನ ಪ್ರಶ್ನೆಗೆ ಇಲ್ಲಿ ಅವಕಾಶವಿಲ್ಲ!

ಮಂಡ್ಯ ಪರಿಸರದ ಕಥೆಯೊಂದನ್ನು ಆಯ್ದುಕೊಂಡಿರುವ ಸುಖಧರೆ, ಯಾವುದೇ ಹಳ್ಳಿಯಲ್ಲೂ ನಡೆಯಬಹುದಾದ ಸನ್ನಿವೇಶಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರೆ. ತರ್ಕವಿಲ್ಲದ ಕೆಲವು ಹೊಡೆದಾಟಗಳನ್ನು ಹೊರತುಪಡಿಸಿದರೆ ಸಿನಿಮಾದಲ್ಲಿ ಇರುವುದು ಅಪ್ಪಟ ಹಳ್ಳಿಗಾಡಿನ ಚಿತ್ರಣ. ಉಳಿದಂತೆ ಸೇಡು ತೀರಿಸಿಕೊಳ್ಳುವ ಬಗೆ, ಪ್ರೇಯಸಿಯಿಂದ ನಾಯಕ ದೂರವಾಗುವುದು, ಕೊನೆಗೆ ಸತ್ಯ ಗೊತ್ತಾದಾಗ ಎಲ್ಲರೂ ಒಂದಾಗುವುದು ಇಂಥವೇ ಮಾಮೂಲಿ ಅಂಶಗಳು ‘…ಬರ್ತ್ ಡೇ’ಯಲ್ಲಿವೆ.

ಯಾವುದೇ ಉದ್ಯೋಗದಲ್ಲೂ ಸರಿಯಾಗಿ ಕೆಲಸ ಮಾಡದ ಬಿಸಿರಕ್ತದ ಯುವಕ ಸಚಿನ್ (ಸಚಿನ್) ಸುತ್ತ ಸುತ್ತುವ ಕಥೆಯಿದು. ಆಕಸ್ಮಿಕವಾಗಿ ಭೇಟಿಯಾಗುವ ‘ಎಣ್ಣೆ ಪಾರ್ಟಿ’ ವೀರಸ್ವಾಮಿಯನ್ನು ಮನೆಗೆ ಕಳಿಸಲು ಹೋಗುವ ಸಚಿನ್, ಆತನ ಮಗಳು ಅಂಜಲಿ (ಸಂಸ್ಕೃತಿ ಶೆಣೈ) ಹೃದಯವನ್ನು ಕದಿಯುತ್ತಾನೆ. ಒಂದೆಡೆ ಆಕೆಗೆ ನೀಡಿದ ವಚನ, ಇನ್ನೊಂದೆಡೆ ವೀರಸ್ವಾಮಿಗೆ ಕೊಟ್ಟ ವಚನ – ಇವೆರಡರ ನಡುವಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಸತ್ಯವನ್ನು ಹೇಳಲಾಗದೇ ಅಂಜಲಿಯಿಂದ ಸಚಿನ್ ದೂರವಾಗುತ್ತಾನೆ. ಮೇಲ್ನೋಟಕ್ಕೆ ಬಹು ಕಷ್ಟ ಎಂಬಂತೆ ಕಾಣುವ ಬಿಕ್ಕಟ್ಟನ್ನು ನಿರ್ದೇಶಕರು ಕೊನೆಯ ಹತ್ತು ನಿಮಿಷಗಳಲ್ಲಿ ಸುಲಭವಾಗಿ ಪರಿಹರಿಸುತ್ತಾರೆ.

ಸರಳ ಕಥೆಯೊಂದನ್ನು ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುವಂತೆ ಕ್ಲಿಷ್ಟಗೊಳಿಸಿದ್ದರ ನಿರ್ದೇಶಕರ ಉದ್ದೇಶ ಅರ್ಥವಾಗದು. ಫ್ಲ್ಯಾಶ್ ಬ್ಯಾಕ್ ಹಿನ್ನೆಲೆ ಇಟ್ಟಿಕೊಂಡೇ ಕಥೆ ಓಡುತ್ತದೆ. ಅದರೊಳಗೆ ಮತ್ತೊಂದು ಫ್ಲ್ಯಾಶ್ ಬ್ಯಾಕ್! ಮೈಸೂರು ಪ್ರಾಂತ್ಯದ ದೇಸಿ ಕಲೆಗಳ ಸ್ಪರ್ಶ ಇದರಲ್ಲಿದೆ. ಆದರೆ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳುವ ದೊಣ್ಣೆ ವರಸೆಗೆ ಇನ್ನೊಂದಷ್ಟು ಅವಕಾಶ ಕೊಡಬೇಕಿತ್ತು. ಅದಿಲ್ಲಿ ವ್ಯಕ್ತಿಗತ ಸೇಡು ತೀರಿಸಿಕೊಳ್ಳುವ ಸಾಧನವಾಗಿ ಮಾತ್ರ ಬಳಕೆಯಾಗಿದೆ. ಅಷ್ಟಿದ್ದರೂ ವೀರಾಸ್ವಾಮಿ–ಜಂಬೂರ ಮತ್ತು ಜಂಬೂರ–ಸಚಿನ್ ನಡುವಿನ ಕದನವಂತೂ ರೋಚಕ.

ಸಚಿನ್‌ಗಿಂತ ಸಂಸ್ಕೃತಿ ಶೆಣೈ ಅಭಿನಯದಲ್ಲಿ ಮೇಲುಗೈ ಸಾಧಿಸಿದ್ದಾರೆ. ಸದಾ ಬಾಟಲಿ ಹಿಡಿದು ತೂರಾಡುವ ಅಚ್ಯುತಕುಮಾರ್ ಸಿನಿಮಾದ ಜೀವಾಳವೂ ಹೌದು. ಖಳನಾಯಕ ಜಂಬೂರನಾಗಿ ರವಿ ಕಾಳೆಗೆ ಪ್ರಾಮುಖ್ಯವೇ ಇಲ್ಲ. ದಸರಾ ಸಂಭ್ರಮದಲ್ಲಿ ಅಂಬರೀಷ್ ಪ್ರತ್ಯಕ್ಷರಾಗಿ, ಪ್ರೇಕ್ಷಕರ ಸಂಭ್ರಮವನ್ನೂ ಹೆಚ್ಚಿಸುತ್ತಾರೆ. ವಿ. ಹರಿಕೃಷ್ಣ ಸಂಗೀತ ಹೊಸೆದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಸುರೇಶ ಜಯಕೃಷ್ಣ ಕ್ಯಾಮೆರಾ ಅಷ್ಟಕ್ಕಷ್ಟೇ.

ಸುಮ್ಮನೇ ‘ಬಿಲ್ಡಪ್’ ಕೊಡುತ್ತ, ನಾಯಕನ ವರ್ಚಸ್ಸನ್ನು ವೃದ್ಧಿಸುವ ಪ್ರಯತ್ನ ಇಲ್ಲಿಲ್ಲ ಎಂಬುದು ಸಿನಿಮಾದ ಹೆಚ್ಚುಗಾರಿಕೆ. ಮನರಂಜನೆ ಸೂತ್ರದೊಂದಿಗೆ ಹಳ್ಳಿ ಸೊಗಡನ್ನು ನೀಡಲು ಸುಖಧರೆ ಯತ್ನಿಸಿದ್ದಾರೆ.

Comments are closed.