“ಅಕಿರ’ ಸಿನಿಮಾ ಮೂಲಕ ಒಂದಷ್ಟು ಸುದ್ದಿಯಾದ ಹೀರೋ ಅನೀಶ್ ತೇಜಶ್ವರ್, ಅದಾದ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಅವರೀಗ ಮತ್ತೂಂದು ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಹಿಂದೆ ಯಶ್ ಅಭಿನಯದ “ಲಕ್ಕಿ’ ಸಿನಿಮಾ ನಿರ್ದೇಶಿಸಿದ್ದ ಸೂರಿ, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು, “ಅಕಿರ’ ಚಿತ್ರ ನಿರ್ಮಿಸಿದ್ದ ನಿರ್ಮಾಪಕರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ. “ಅಕಿರ’ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಸೆಟ್ಟೇರಲಿರುವ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ ಎನ್ನುವುದು ಅನೀಶ್ ತೇಜಶ್ವರ್ ಮಾತು.
ಅನೀಶ್ ತೇಜಶ್ವರ್ “ಅಕಿರ’ ಬಳಿಕ ಕೇಳಿದ್ದು ಬರೋಬ್ಬರಿ 45 ಕಥೆಗಳಂತೆ. ಆದರೆ, ಮೊದಲು ಕಥೆ ಕೇಳಿದ್ದು “ಲಕ್ಕಿ’ ಸೂರಿ ಅವರದ್ದಂತೆ. ಅವರು ಕಥೆ ಹೇಳಿದ ಕೂಡಲೇ ಒಪ್ಪಿಕೊಂಡಿದ್ದ, ಅನೀಶ್‌ಗೆ ಉಳಿದ ಅಷ್ಟೂ ಕಥೆಗಳು ಯಾಕೋ ಇಷ್ಟವಾಗಲಿಲ್ಲವಂತೆ. ಕೊನೆಗೆ, ಅವರು ಯು ಟರ್ನ್ ತೆಗೆದುಕೊಂಡು “ಲಕ್ಕಿ’ ಡೈರೆಕ್ಟರ್ ಜತೆ ಕೆಲಸ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗ ಎಲ್ಲವೂ ರೆಡಿಯಾಗಿದ್ದು, ಇನ್ನು ಹತ್ತು ದಿನಗಳಲ್ಲಿ, ಚಿತ್ರದ ನಾಯಕಿ ಮತ್ತು ಚಿತ್ರದ ಶೀರ್ಷಿಕೆ ಅಂತಿಮಗೊಳ್ಳಲಿದೆ ಎಂಬುದು ಅನೀಶ್ ಹೇಳಿಕೆ.
ಅನೀಶ್ ಇಲ್ಲಿ ಇನ್ನೊಂದು ವಿಷಯ ಹೇಳುವುದನ್ನು ಮರೆಯುವುದಿಲ್ಲ. ಅದೇನೆಂದರೆ, ಈ ಚಿತ್ರ ಮಾಡೋಕೆ ಕಾರಣ, ಯಶ್ ಅವರಂತೆ. ಯಾಕೆಂದರೆ, “ಅಕಿರ’ ಸಿನಿಮಾದ ಮೊದಲ ಪ್ರದರ್ಶನ ಬಳಿಕವೇ ಯಶ್ ಅವರು ಅನೀಶ್‌ಗೆ ಫೋನ್ ಮಾಡಿ, ಸೂರಿ ಅವರ ಬಳಿ ಒಂದು ಕಥೆ ಇದೆ. ಅದನ್ನು ಕೇಳು ಅಂದಿದ್ದರಂತೆ. ಅವರು ಹೇಳಿದ ಮೇಲೆ ಮಿಸ್ ಮಾಡಿಕೊಳ್ಳಬಾರದು ಅಂತ ಆ ಕಥೆ ಕೇಳಿ ಖುಷಿಪಟ್ಟು, ಈಗ ಸಿನಿಮಾ ಸೆಟ್ಟೇರುವ ಲೆವೆಲ್‌ಗೆ ಬಂದಿದೆ. ಹೀಗಾಗಿ ಯಶ್‌ಗೊಂದು ದೊಡ್ಡ ಥ್ಯಾಂಕ್ಸ್ ಅನ್ನುತ್ತಾರೆ ಅನೀಶ್.
ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. “ಇದೊಂದು ಲವ್, ಆ್ಯಕ್ಷನ್ ಕಾಮಿಡಿ ಸಿನಿಮಾ. ಇಲ್ಲಿ ಕಾಮಿಡಿಗೆ ಹೆಚ್ಚು ಒತ್ತು ಕೊಡಲಾಗಿದೆ. ಇಡೀ ಸಿನಿಮಾ ಪಕ್ಕಾ ಮನರಂಜನೆಯಾಗಿರಲಿದೆ. ಅಜನೀಶ್ ಲೋಕನಾಥ್ ಅವರು ನಾಲ್ಕು ಹಾಡು ಮತ್ತು ಒಂದು ಬಿಟ್‌ಗೆ ಸಂಗೀತ ನೀಡಲಿದ್ದಾರೆ. ರಸೂಲ್ ಎಲ್ಲೂರ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಹೈದರಾಬಾದ್ ಮೂಲದ ರಸೂಲ್ ಎಲ್ಲೂರ್‌ಗೆ ಇದು ಕನ್ನಡದ ಮೊದಲ ಸಿನಿಮಾ. ಬಹುತೇಕ ಬೆಂಗಳೂರು ಹಾಗು ಮೈಸೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. ಒಳ್ಳೇ ತಂಡವಿದೆ. ನನಗೆ “ಅಕಿರ’ ಬಳಿಕ ಒಂದೊಳ್ಳೆಯ ಕಥೆ ಮತ್ತು ಪಾತ್ರ ಇರುವಂತಹ ಚಿತ್ರವೇ ಸಿಕ್ಕಿದೆ. ಇದು ಕೂಡ ಯೂತ್ಸ್ಗೆ ಹೊಸತನದ ಚಿತ್ರವಾಗಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ಅನೀಶ್ ತೇಜಶ್ವರ್.
ಅಂದಹಾಗೆ, ಅನೀಶ್ ತೇಜಶ್ವರ್, ಈ ಚಿತ್ರಕ್ಕಾಗಿಯೇ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ರೆಗ್ಯುಲರ್ ಆಗಿ, ಜಿಮ್‌ಗೆ ಹೋಗುತ್ತಿದ್ದು, ಡ್ಯಾನ್ಸ್ ಮತ್ತು ಫೈಟ್ಸ್‌ನಲ್ಲಿ ಇನ್ನಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಶುರುವಾಗಿ, ನವೆಂಬರ್‌ನಲ್ಲಿ ಮುಗಿಯಲಿದ್ದು, ಜನವರಿಯಲ್ಲಿ ಹೊಸದೊಂದು ಸಿನಿಮಾ ಶುರುಮಾಡುವ ಬಗ್ಗೆ ಹೇಳಿ ಸುಮ್ಮನಾಗುತ್ತಾರೆ ಅನೀಶ್.
-ಉದಯವಾಣಿ
Comments are closed.