ಇಷ್ಟರಲ್ಲೇ ಪುನಃ ಕಿರುತೆರೆಗೂ ಎಂಟ್ರಿಕೊಡುವುದಾಗಿ ಹೇಳಿಕೊಂಡಿದ್ದರು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಅವರೀಗ ಜೀ ಕನ್ನಡ ವಾಹಿನಿಯಲ್ಲೊಂದು ಹೊಸ ಧಾರಾವಾಹಿ ನಿರ್ಮಿಸಲು ಹೊರಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿರುವ ರಾಕ್‌ಲೈನ್ ವೆಂಕಟೇಶ್, ಕನ್ನಡ, ತೆಲುಗು, ತಮಿಳು ಹಾಗು ಹಿಂದಿಯ ಬಹುತೇಕ ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿದವರು. ಈಗ ಮತ್ತೂಮ್ಮೆ ಕಿರುತೆರೆಗೆ ಕಾಲಿಡುತ್ತಿರುವ ಅವರು, ಜೀ ಕನ್ನಡ ವಾಹಿನಿಯಲ್ಲೊಂದು ಧಾರಾವಾಹಿ ನಿರ್ಮಿಸಲು ಮುಂದಾಗಿದ್ದಾರೆ. ಆ ಧಾರಾವಾಹಿ ಹೆಸರು “ಜನುಮದ ಜೋಡಿ’. ಆಗಸ್ಟ್ 8 ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ.
ಇದೊಂದು ಸಾಮಾಜಿಕ ಕಥಾಕಲ್ಪನೆಯೊಂದಿಗೆ ಪ್ರೀತಿ, ಮಮತೆಯ ದಾರಿಯೊಳಗೆ ನಡೆಯುವ ಕಥೆ, ಕಾವೇರಿ ಎಂಬ ಮುಗ್ಧ ಯುವತಿಯ ಸುತ್ತ ಸಾಗುವ ಈ ಕಥೆಯಲ್ಲಿ, ಸ್ವತಂತ್ರ ಹಕ್ಕಿಯಂತೆ ಹಾರಬೇಕಿದ್ದ ಕಾವೇರಿಯ ಕನಸುಗಳೆಲ್ಲಾ ಒಮ್ಮೆ ಬೆಂಕಿಗೆ ಬಿದ್ದು ಕಮರುತ್ತವೆ. ನಂತರ, ಆಕೆ ಮತ್ತೆ ಮರುಭೂಮಿಯಲ್ಲಿ ಹುಟ್ಟಿ ವಸುಂಧರೆಯಾಗಿ ಬೆಳೆದು ನಿಲ್ಲುತ್ತಾಳೆ. ಕಾವೇರಿಯ ಕನಸುಗಳಿಗೆಲ್ಲಾ ಪ್ರೀತಿಯ ಸುಧೆ ಹರಿಸುತ್ತಾ ಆಕೆಯ ಜೊತೆಗಿರುತ್ತೇನೆಂದು ಬಂದ ಆದಿತ್ಯವರ್ಮ ಕೂಡ ಬೆಂಕಿಗೆ ಬಿದ್ದು ಮರಣ ಹೊಂದಿ ಪುನರ್ಜನ್ಮದಲ್ಲಿ ಸಂಜು ಆಗಿ ಹುಟ್ಟಿ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಬದುಕುತ್ತಿರುತ್ತಾನೆ. ಹೀಗೆ ಪ್ರೀತಿಯ ಫ್ರೆàಮಿನೊಳಗೆ ಅಡಗಿ ಕುಳಿತಿದ್ದ, ಈ ಜೋಡಿ ಹಕ್ಕಿಗಳು ಪುನರ್ಜನ್ಮ ತಳೆದು ಬಂದ ನಂತರ ಮತ್ತೆ ಒಂದಾಗುತ್ತಾರಾ, ಇಲ್ಲವಾ ಅನ್ನೋದು “ಜನುಮದ ಜೋಡಿ’ ಧಾರಾವಾಹಿ ಕಥಾಹಂದರ.
ರಾಕ್‌ಲೈನ್ ಸಂಸ್ಥೆ ಎಂದಮೇಲೆ ಅಲ್ಲಿ ಅದ್ದೂರಿತನಕ್ಕೇನೂ ಕೊರತೆ ಇರಲ್ಲ. ಇದೊಂದು ಪುನರ್ಜನ್ಮದ ಕಥೆ. ಧಾರಾವಾಹಿಯಾಗಿದ್ದರೂ, ದೊಡ್ಡ ಬಜೆಟ್‌ನ ಸಿನಿಮಾದಂತೆಯೇ ನಿರ್ಮಾಣವಾಗಲಿದೆ. ಈಗಾಗಲೇ ಈ ಧಾರಾವಾಹಿ ತಂಡ, ರಾಜಸ್ಥಾನದ ಜೈಪುರ ಸೇರಿದಂತೆ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿದೆ.
ಧಾರಾವಾಹಿಯಲ್ಲಿ ವಿವೇಕ್ ಸಿಂಹ ನಾಯಕರಾದರೆ, ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರದಲ್ಲಿ ದೊಡ್ಡಣ್ಣ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಧಾರಾವಾಹಿಯಲ್ಲಿ ನಾಗೇಂದ್ರ ಶಾ, ನಿಶ್ಚಿತಾ ಗೌಡ, ವಿದ್ಯಾಮೂರ್ತಿ ನಟಿಸುತ್ತಿದ್ದಾರೆ. ಅಂದಹಾಗೆ, ರಘುಚರಣ ಈ ಧಾರಾವಾಹಿಯನ್ನು ರಚಿಸಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶಿಸುತ್ತಿದ್ದಾರೆ.
-ಉದಯವಾಣಿ
Comments are closed.