
ವಿಟ್ಲ : ಸಮಾಜ ಸೇವೆ ಮಾಡಲು ರಾಜಕೀಯ ಕ್ಷೇತ್ರ ಒಂದೇ ಅಲ್ಲ. ಸಂಘ ಸಂಸ್ಥೆಗಳ ಮೂಲಕ ಪ್ರಮಾಣಿಕ ಸೇವೆಗಳನ್ನು ಜನರಿಗೆ ನೀಡಬಹುದು. ಸೇವೆ ಮಾಡುವ ಚಿಂತನೆಗಳನ್ನು ಹೊಂದಿ ನಾಯಕತ್ವದ ಗುಣ ಹೊಂದಿದಾಗ ಸಮುದಾಯದಲ್ಲಿ ನಾಯಕತ್ವ ಉಂಟಾಗುತ್ತದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಹೇಳಿದರು.
ಅವರು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯಕ್ಕೆ ಬೇಟಿ ನೀಡಿ ಬಲಿಪೂಜೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕಷ್ಟಜೀವಿಗಳ ಭಕ್ತಿಯ ಕಾರಣದಿಂದಾಗಿ ಇಲ್ಲಿ ಧರ್ಮ ಕ್ಷೇತ್ರ ಉಳಿದಿದೆ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಸರ್ಕಾರ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆರ್ಥಿಕವಾಗಿ ಅಭಿವೃದ್ಧಿಪಡಿಸಿಕೊಂಡು ಅನುದಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಹೆತ್ತವರು ಮಕ್ಕಳಿಗೆ ಶಿಕ್ಷಣ ಪಡೆದ ಕೂಡಲೇ ವಿದೇಶಕ್ಕೆ ತೆರಳಲು ಪ್ರೋತ್ಸಾಹಿಸಬಾರದು.ದೇಶದಲ್ಲಿಯೇ ನಾಯಕರಾಗಿ ಸಮಾಜ ಸೇವೆ ಮಾಡುವ ಚಿಂತನೆ ನಡೆಸಬೇಕು ಎಂದರು. ಉನ್ನತ ಕೆಲಸಕ್ಕಾಗಿ ಯಾರ ಬಳಿಯೂ ಹೋಗುವ ಅವಶ್ಯಕತೆಯಿಲ್ಲ. ದೇವರ ಅನುಗ್ರಹ ಹಾಗೂ ನಮ್ಮ ಪ್ರಯತ್ನವಿದ್ದರೆ ದೇಶದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. ನಾವು ಕೂಡಾ ಸೇವೆ ನೀಡುವ ಮಿಷನರಿಗಳಾಗಬೇಕು ಎಂದು ತಿಳಿಸಿದರು.

ಚರ್ಚ್‌ನ ಧರ್ಮ ಗುರು ವಿನೋದ್ ಲೊಬೋ ಮಾತನಾಡಿ ಮೃದು ಸ್ವಾಭಾವ, ಬಡವರ ಬಗ್ಗೆ ವಿಶೇಷ ಕಾಳಜಿ ಇರುವ ಪ್ರಚಾರ ಬಯಸದ ವ್ಯಕ್ತಿ ರಾಜ್ಯಕ್ಕೆ ಸಿಕ್ಕಿದ್ದು, ನಮ್ಮ ಭಾಗ್ಯ ಇಂತಹ ರಾಜಕಾರಣಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ, ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೆಲ್ವಿನ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.
ವಿಕ್ಟರ್ ಡಿಸೋಜ ಸ್ವಾಗತಿಸಿದರು. ಡೆನ್ಜಿಲ್ ನಿರೂಪಿಸಿದರು. ಸಂತೋಷ್ ಸನ್ಮಾನ ಪತ್ರ ಓದಿದರು. ಪ್ರವೀಣ್ ಕುಟ್ಯಿನು ಧನ್ಯವಾದ ಹೇಳಿದರು.
Comments are closed.