ಕನ್ನಡದಲ್ಲಿ ಯೋಧನ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಹೊಸಬರೆಲ್ಲ ಸೇರಿ ಹೊಸದೊಂದು ಸಿನಿಮಾ ಮಾಡಿದ್ದಾರೆ. ಆ ಚಿತ್ರಕ್ಕೆ “ಮುಕ್ತಿ’ ಎಂದು ನಾಮಕರಣ ಮಾಡಿದ್ದಾರೆ. ಕೆ.ಶಂಕರ್ ಈ ಚಿತ್ರದ ನಿರ್ದೇಶಕರು. ರಾಮಮೂರ್ತಿ ಹಾಗೂ ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರಿಗೆ ಇದು ಮೊದಲ ಸಿನಿಮಾ. ನಕುಲ್ ಗೋವಿಂದ್ ಮತ್ತು ರಘುರಂಜನ್ ಚಿತ್ರದ ನಾಯಕರು. ಉಳಿದಂತೆ ಚಿತ್ರದಲ್ಲಿ ಗಾನ, ಬೇಬಿ ಪವಿತ್ರ ಸೇರಿದಂತೆ ಇತರೆ ಹೊಸ ಪ್ರತಿಭೆಗಳಿವೆ.
ಇದೊಂದು ವೀರಯೋಧನ ಕುರಿತಾದ ಕಥೆ. ಒಬ್ಬ ಯೋಧನ ಕುಟುಂಬ ಹಾಗು ಅವನ ದೇಶಪ್ರೇಮದ ಕುರಿತಾಗಿ ಚಿತ್ರ ಸಾಗಲಿದೆಯಂತೆ. ಇತ್ತೀಚೆಗೆ ವೀರಮರಣ ಹೊಂದಿದ ಹನುಮಂತಪ್ಪ ಕೊಪ್ಪದ್ ಅವರಿಗೆ ಗೌರವ ಸಲ್ಲಿಸುವುದರೊಂದಿಗೆ ಚಿತ್ರವನ್ನು ಶುರುಮಾಡಿದ್ದಾರಂತೆ ನಿರ್ದೇಶಕ ಕೆ.ಶಂಕರ್. ಯೋಧನೊಬ್ಬ ರಜಾದಿನ ಕಳೆಯಲು ತನ್ನ ಹುಟ್ಟೂರಿಗೆ ಬಂದು ತನ್ನ ತಂದೆಯ ಜತೆಯಲ್ಲಿ ಒಂದಷ್ಟು ಮಾತುಕತೆ ನಡೆಸಿಹೋಗಿರುತ್ತಾನೆ. ಆ ಯೋಧ ತನ್ನ ತಂದೆ ಬಳಿ ಹೇಳಿಕೊಂಡ ವಿಷಯವೇನು, ಅವನು ವೀರಮರಣದ ಮುನ್ನ ತೆರೆದಿಟ್ಟಂತಹ ವಿಷಯಗಳೇನು ಎಂಬುದು ಚಿತ್ರದ ಎಳೆ ಎನ್ನುತ್ತಾರೆ ನಿರ್ದೇಶಕ ಶಂಕರ್.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಶಂಕರ್, ತಮ್ಮ ಚಿತ್ರತಂಡದೊಂದಿಗೆ ಯೋಧ ಹನುಮಂತಪ್ಪ ಕೊಪ್ಪದ್ ಅವರ ಹುಟ್ಟೂರಾದ ಧಾರವಾಡ ಜಿಲ್ಲೆಯ ಬೆಟ್ಟದೂರಿಗೆ ತೆರಳಿ, ಯೋಧ ಹನುಮಂತಪ್ಪ ಕೊಪ್ಪದ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಬಳಿಕ ಅವರ ಮನೆಗೆ ಹೋಗಿ, ಅಲ್ಲಿ ಹನುಮಂತಪ್ಪ ಕೊಪ್ಪದ್ ಅವರ ತಾಯಿ ಹಾಗು ಪತ್ನಿ ಜತೆ ಚರ್ಚೆ ನಡೆಸಿ, ಚಿತ್ರದಲ್ಲಿ ಕೊಪ್ಪದ್ ಅವರ ಭಾವಚಿತ್ರ ಬಳಸಿಕೊಳ್ಳುವುದಾಗಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಕೊಪ್ಪದ್ ಕುಟುಂಬ ಸಮ್ಮತಿಯನ್ನೂ ನೀಡಿದೆ. ಚಿತ್ರದಲ್ಲಿ ಯಾರೋ ಒಬ್ಬನ ಭಾವಚಿತ್ರ ತೋರಿಸಿ, ಯೋಧ ಅನ್ನುವುದಕ್ಕಿಂತ ನಿಜವಾಗಿಯೂ ವೀರಮರಣ ಹೊಂದಿದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಭಾವಚಿತ್ರವನ್ನೇಕೆ ಬಳಸಿಕೊಳ್ಳಬಾರದು ಎಂಬ ಉದ್ದೇಶದಿಂದ ಅಲ್ಲಿಯವರೆಗೆ ಹೋಗಿ ಒಪ್ಪಿಗೆ ಪಡೆದು ಬಂದಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಸಿದ್ಧಾರ್ಥ್ ಕ್ಯಾಮೆರಾ ಹಿಡಿದಿದ್ದಾರೆ. ಮಲೆಮಹದೇಶ್ವರ ಬೆಟ್ಟ, ಮಾಗಡಿ ಹಾಗೂ ಸಾವನದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ್ದು, ಇಷ್ಟರಲ್ಲೇ ಚಿತ್ರಕ್ಕೆ ಕುಂಬಳಕಾಯಿ ಎನ್ನುತ್ತಾರೆ ನಿರ್ದೇಶಕರು.
-ಉದಯವಾಣಿ
Comments are closed.