ಶಿವರಾಜಕುಮಾರ್ ಹಾಗೂ ಕೋಮಲ್ ಮತ್ತೆ ಮುಖಾಮುಖಿ ಯಾಗಿದ್ದಾರೆ. ಇದು ಈ ವರ್ಷದಲ್ಲಿ ಎರಡನೇ ಬಾರಿ ಒಟ್ಟೊಟ್ಟಿಗೆ ಬರುತ್ತಿದ್ದಾರೆ! ನಾವು ಯಾವುದರ ಬಗ್ಗೆ ಹೇಳುತ್ತಿದ್ದೇವೆಂದು ನೀವು ಆಶ್ಚರ್ಯಪಡಬೇಡಿ. ಇದು ಕೋಮಲ್ ಅವರ ಸಿನಿಮಾ ಬಗ್ಗೆ. ಕೋಮಲ್ ನಾಯಕರಾಗಿ ನಟಿಸಿರುವ “ಡೀಲ್‌ರಾಜ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ವರ್ಷ ತೆರೆಕಾಣುತ್ತಿರುವ ಕೋಮಲ್ ಅವರ ಎರಡನೇ ಚಿತ್ರ. ಈ ವರ್ಷದ ಮೊದಲ ದಿನ ಅಂದರೆ ಜನವರಿ 1 ರಂದು ಕೋಮಲ್ ಅವರ “ಪುಟ್ಟಣ್ಣ’ ಚಿತ್ರ ತೆರೆಕಂಡಿತ್ತು. ಅದೇ ದಿನ ಶಿವರಾಜಕುಮಾರ್ ಅವರ “ಕಿಲ್ಲಿಂಗ್ ವೀರಪ್ಪನ್’ ಚಿತ್ರವೂ ಬಿಡುಗಡೆಯಾಗಿತ್ತು. ಎರಡೂ ಬೇರೆ ಬೇರೆ ಜಾನರ್‌ನ ಸಿನಿಮಾವಾಗಿದ್ದರಿಂದ ಜನ ಎರಡೂ ಸಿನಿಮಾವನ್ನು ಇಷ್ಟಪಟ್ಟರು. “ಪುಟ್ಟಣ್ಣ’ ಮೂಲಕ ಕೋಮಲ್‌ಗೆ ಒಂದು ಬ್ರೇಕ್ ಸಿಕ್ಕಿದ್ದು ಸುಳ್ಳಲ್ಲ.
ಈಗ ಕೋಮಲ್ “ಡೀಲ್ ರಾಜ’ ಮೇಲೆ ನಂಬಿಕೆ ಇಟ್ಟಿದ್ದಾರೆ. ಚಿತ್ರ ಜುಲೈ 29ಕ್ಕೆ ತೆರೆಕಾಣುತ್ತಿದೆ. ಅದೇ ದಿನ ಶಿವರಾಜಕುಮಾರ್ ಅವರ “ಕಬೀರ’ ಕೂಡಾ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಒಂದೇ ವರ್ಷದಲ್ಲಿ ಇಬ್ಬರು ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದಂತಾಗುತ್ತದೆ. ಹೆಸರಿಗೆ ತಕ್ಕಂತೆ “ಡೀಲ್ ರಾಜ’ ಕೂಡಾ ಒಂದು ಕಾಮಿಡಿ ಚಿತ್ರ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬದುಕುತ್ತಿದ್ದ ವ್ಯಕ್ತಿಯ ಲೈಫನಲ್ಲಿ ಬರುವ ಟರ್ನಿಂಗ್ ಪಾಯಿಂಟ್ ಹಾಗೂ ಆ ನಂತರ ನಡೆಯುವ ಘಟನೆಗಳೇ ಈ ಚಿತ್ರದ ಕಥೆ. ಈಗಾಗಲೇ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಸಿನಿಮಾವನ್ನು ಜನ ಇಷ್ಟಪಡಬಹುದೆಂಬ ವಿಶ್ವಾಸ ಕೋಮಲ್‌ಗಿದೆ.
ಅಂದಹಾಗೆ, ಕೋಮಲ್ ಈಗ ಸ್ಲಿಮ್ ಆಗಿದ್ದಾರೆ. ಆದರೆ ಇದು ಅವರು ಸ್ಲಿಮ್ ಆಗುವ ಮುಂಚಿನ ಸಿನಿಮಾ. ಚಿತ್ರವನ್ನು ರಾಜ್‌ಗೊàಪಿ ನಿರ್ದೇಶನ ಮಾಡಿದ್ದು, ಮೇಘದೂತ್ ಮೂವೀಸ್ ನಿರ್ಮಾಣ ಮಾಡಿದೆ. “ಹಾಡುಗಳು ಚೆನ್ನಾಗಿ ಬಂದಿವೆ. ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಕೋಮಲ್. ಚಿತ್ರದಲ್ಲಿ ಭಾನುಶ್ರೀ ಮೆಹ್ತಾ ನಾಯಕಿಯಾಗಿ ನಟಿಸಿದ್ದಾರೆ.
-ಉದಯವಾಣಿ
Comments are closed.