ಮನೋರಂಜನೆ

ತ್ರಿಮೂರ್ತಿಗಳ ಭ್ರಾಂತಿ ಕ್ರಾಂತಿ ಶಾಂತಿ

Pinterest LinkedIn Tumblr

4_2
ಚಿತ್ರ: ಬ್ರಹ್ಮ ವಿಷ್ಣು ಮಹೇಶ್ವರ
ನಿರ್ದೇಶನ : ಸ್ವರೂಪ್‌
ನಿರ್ಮಾಣ : ಹರೀಶ್‌ ಜಿ. ಶಂಕರ್‌
ತಾರಾಗಣ : ಅಂಜನ್‌, ಸುನೀಲ್‌, ಪ್ರೀತಮ್‌, ಜೈ ಜಗದೀಶ್‌, ವಿನಯಾ
ಪ್ರಸಾದ್‌, ಕೀರ್ತಿಲಕ್ಷ್ಮೀ, ಜೀವಿತಾ, ಐಶ್ವರ್ಯ ಇತರರು.

ಒಬ್ಬನಿಗೆ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ನಿರ್ದೇಶಿಸುವ ಆಸೆ. ಇನ್ನೊಬ್ಬನದು ಮನಸೊಳಗೆ ನೋವಿದ್ದರೂ ಗೆಳೆಯರೊಂದಿಗೆ ನಗು ನಗುತ್ತಾ ಇರುವ ಕ್ಯಾರೆಕ್ಟರ್‌. ಮತ್ತೂಬ್ಬ ಸಿಕ್ಕ ಸಿಕ್ಕ ಹುಡುಗಿಯರ ಜತೆ ಕಾಲ ಕಳೆಯೋ ಕಲರ್‌ಫ‌ುಲ್‌ ಹುಡುಗ. ಹೆಸರು “ಬ್ರಹ್ಮ ವಿಷ್ಣು ಮಹೇಶ್ವರ’. ಇದು ಅವರವರೇ ಇಟ್ಟುಕೊಂಡಿರೋ ಹೆಸ್ರು. ಇಷ್ಟು ಹೇಳಿದ ಮೇಲೆ ಇದು ಮೂವರು ಹುಡುಗರ ಸುತ್ತ ನಡೆಯೋ ಚಿತ್ರ ಅನ್ನೋದನ್ನ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಲ್ಲಿ ಇರೋರೆಲ್ಲರೂ ಹೊಸಬರೇ. ಆದರೆ, ಕಥೆಯಲ್ಲಿ ಮಾತ್ರ ಹೊಸತನವಿಲ್ಲ. ಹಾಗಂತ, ಇಡೀ ಚಿತ್ರವನ್ನು ತೆಗಳಂಗಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ,ಕನ್ನಡಕ್ಕೆ ಇದು ಹೊಸದಂತೂ ಅಲ್ಲ.

ಈಗಾಗಲೇ ನಿರ್ದೇಶಕನಾಗಬೇಕು ಅಂತ ಹೋರಾಡುವ, ಕಲರ್‌ಫ‌ುಲ್‌ ಆಗಿ ಲೈಫ್ ಎಂಜಾಯ್‌ ಮಾಡುವ, ರೆಬೆಲ್‌ ಆಗಿಯೇ ಬದುಕು ಸವೆಸುವ ಹುಡುಗರ ಕಥೆಯುಳ್ಳ ಚಿತ್ರಗಳು ಬಂದಿವೆ. ಹಾಗಂತ, ಇದೂ ಅವುಗಳ ಸಾಲಿಗೆ ಸೇರುವ ಚಿತ್ರ ಅಂದುಕೊಳ್ಳುವಂತಿಲ್ಲ. ಹೊಸಬರ ಚಿತ್ರವಾದರೂ ಇಲ್ಲಿ ಮೇಕಿಂಗ್‌ ವಿಷಯದ ಬಗ್ಗೆ ಕೊಂಚ ಖುಷಿಪಡಬಹುದು. ಒಂಚೂರು ಹೊಸ ಅಂಶಗಳು ಕಾಣಿಸುವುದರಿಂದ ಸಮಾಧಾನಗೊಳ್ಳಬಹುದು. ಮೊದಲರ್ಧ ಮಂದಗತಿ ಎನಿಸುತ್ತಿದ್ದಂತೆಯೇ, ಕಾಣಿಸಿಕೊಳ್ಳುವ ಹಾಡುಗಳು ಚಿತ್ರದ ವೇಗವನ್ನು ಎತ್ತಿ ಹಿಡಿಯುತ್ತವೆ. ಕಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ನಿರೂಪಣೆಯನ್ನು ಚುರುಕುಗೊಳಿಸಿದ್ದರೆ, “ಬ್ರಹ್ಮ ವಿಷ್ಣು ಮಹೇಶ್ವರ’ರ ಹರಸಾಹಸದ ಸಾಧನೆಗೆ ಜೈ ಅನ್ನಬಹುದಿತ್ತು. ನಿರ್ದೇಶಕರು ಅಂತಹ ಅವಕಾಶವನ್ನು ಮಿಸ್‌ ಮಾಡಿಕೊಂಡಿದ್ದಾರೆ.

ಮೂವರು ಹುಡುಗರ ಸಿಂಪಲ್‌ ಕಥೆಯಲ್ಲಿ ಛಲವಿದೆ, ನೋವಿದೆ, ನಲಿವಿದೆ, ಅರಿವಿದೆ, ಕಣ್‌ “ಕುಕ್ಕು’ವಂತಹ ಹುಡುಗಿಯರೂ ಇದ್ದಾರೆ. ಇವೆಲ್ಲವನ್ನೂ ಒಂದೇ ಸಮನಾಗಿ ಹದಗೊಳಿಸುವಲ್ಲಿ ನಿರ್ದೇಶಕರು ಸಾಕಷ್ಟು ಹೆಣಗಾಡಿದ್ದಾರೆ. ಕೆಲವೆಡೆ ತಪ್ಪುಗಳು ಹೇರಳವಾಗಿದ್ದರೂ, ಅದನ್ನು ಕ್ಯಾಮೆರಾದ ಕಲರ್‌ಫ‌ುಲ್‌ ಕಣ್ಣುಗಳು ಮುಚ್ಚಿ ಹಾಕಿವೆ. ಇಲ್ಲಿ ಹೆಚ್ಚು ಮನರಂಜನೆ ನಿರೀಕ್ಷಿಸುವಂತಿಲ್ಲ. ಹಾಸ್ಯದ ಮಾತಂತೂ ಬಲು ದೂರ. ಹಾಗಂತ ಸಿನಿಮಾ ಹೆಚ್ಚು ಬೋರು ಹೊಡೆಸಲ್ಲ. ಮೊದಲರ್ಧ ನಿಧಾನ ಎನ್ನುವುದು ಬಿಟ್ಟರೆ, ದ್ವಿತಿಯಾರ್ಧ ಒಂದಷ್ಟು ಗಂಭೀರವಾಗುತ್ತೆ. ಅದಷ್ಟೇ ಸಿನಿಮಾದ ತಾಕತ್ತು ಎನ್ನಬಹುದು.

ಮೊದಲೇ ಹೇಳಿದಂತೆ, ಇದು ಮೂವರು ಹುಡುಗರ ಲೈಫ್ನಲ್ಲಿ ನಡೆಯೋ ಕಥೆ. ಮಧ್ಯೆ ಮಧ್ಯೆ ಅವರ ಲೈಫ್ನಲ್ಲಿ ಏರಿಳಿತಗಳಾದಂತೆ, ನೋವು, ಸಂಕಟಗಳು ಅನುಭವಿಸಿದಂತೆ, ನೋಡುಗರಿಗೂ ಅಲ್ಲಲ್ಲಿ ಆಗುವ ಅಂಥದ್ದೊಂದು ಅನುಭವ ಕಟ್ಟಿಕೊಟ್ಟನಿರ್ದೇಶಕರದು ಹೆಚ್ಚುಗಾರಿಕೆಯೇ ಸರಿ! ಸಿನಿಮಾದಲ್ಲಿ ಅದ್ಧೂರಿತನ ಕಾಣುತ್ತೆ ಅದು ಪ್ಲಸ್‌. ಆದರೆ, ಕಥೆ, ಚಿತ್ರಕಥೆ ಕಾಡೋದಿಲ್ಲ ಅದೇ ಮೈನಸ್‌. ಇಲ್ಲಿ ಮೂವರಿಗೂ ಒಂದೊಂದು ಆಸೆಗಳಿವೆ. ಅವು ಈಡೇರುತ್ತವೋ, ಇಲ್ಲವೋ ಅನ್ನೋದೇ ಸಿನಿಮಾದ ಸಸ್ಪೆನ್ಸ್‌. ಆ ಬಗ್ಗೆ ಕುತೂಹಲವಿದ್ದರೆ, “ಬ್ರಹ್ಮ ವಿಷ್ಣು ಮಹೇಶ್ವರ’ರ ನೋವು ನಲಿವು, ಸಂಕಟದೊಳಗೆ ಮಿಂದೆದ್ದು ಒಂದಷ್ಟು ಅನುಭವಿಸಿಯೂ ಬರಬಹುದು. ಈಗಿನ ಯೂಥ್ಸ್ಗೆ ಪ್ರಭಾವ ಬೀರುವಂಥದಲ್ಲದಿದ್ದರೂ ಸಣ್ಣದ್ದೊಂದು ಸಂದೇಶವಿದೆ. ಅದನ್ನು ಮನಗಾಣಲು ಸಿನಿಮಾವನ್ನೊಮ್ಮೆ ನೋಡಲ್ಲಡ್ಡಿಯಿಲ್ಲ.

ಅಂಜನ್‌ ನಿರ್ದೇಶಕನ ಪಾತ್ರಕ್ಕೆ ತಕ್ಕಮಟ್ಟಿಗೆ ಜೀವ ತುಂಬಿದ್ದಾರೆ. ಆದರೆ, ಅವರ ನಟನೆ ಹೆಚ್ಚು ಪ್ರಭಾವ ಬೀರೋದಿಲ್ಲ. ಪ್ರೀತಮ್‌ ಸಿಕ್ಕ ಪಾತ್ರದಲ್ಲಿ ಇನ್ನಷ್ಟು ಮಿಂಚಲು ಅವಕಾಶವಿತ್ತು. ಕೆಲ ದೃಶ್ಯಗಳಲ್ಲಿ ಗಮನ ಸೆಳೆದಿರುವುದೇ ಖುಷಿಯ ವಿಷಯ. ಇನ್ನು, ಸುನೀಲ್‌ ಸಿಕ್ಕ ಪಾತ್ರವನ್ನು “ಎಂಜಾಯ್‌’ ಮಾಡಿದ್ದಾರೆ. ನೋಡುಗರೂ ಎಂಜಾಯ್‌ ಮಾಡ್ತಾರೆ. ಉಳಿದಂತೆ ಕೀರ್ತಿ, ಜೀವಿತಾ, ಐಶ್ವರ್ಯ ಇವರ್ಯಾರೂ ಹೆಚ್ಚು ನೆನಪಲ್ಲುಳಿಯೋದಿಲ್ಲ. ಚಿಕ್ಕಣ್ಣನಂತಹ ಹಾಸ್ಯ ನಟ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಿಕ್ಕ ಅವಕಾಶದಲ್ಲಿ ಚಿಕ್ಕಣ್ಣ ನಗಿಸಲು ಬಲು ಕಷ್ಟಪಟ್ಟಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತದಲ್ಲಿ ಎರಡು ಹಾಡು ಓಕೆ, ಮಿಕ್ಕದ್ದೆಲ್ಲಾ ಯಾಕೆ ಅನ್ನುವಂತಿದೆ. ಹಿನ್ನೆಲೆ ಸಂಗೀತದಲ್ಲಿನ್ನೂ ಧಮ್‌ ಇರಬೇಕಿತ್ತು. ಹರಿ ಬಿ.ನಾಯಕ್‌, ತಮ್ಮ ಕ್ಯಾಮೆರಾ ಕಣ್ಣಲ್ಲಿ “ಬ್ರಹ್ಮ ವಿಷ್ಣು ಮಹೇಶ್ವರ’ರನ್ನು ಅಂದಗಾಣಿಸಿದ್ದಾರೆ.
„ ವಿಜಯ್‌ ಭರಮಸಾಗರ

-ಉದಯವಾಣಿ

Comments are closed.