ಚಿತ್ರ:ಜಗ್ಗು ದಾದಾ
ನಿರ್ದೇಶನ: ರಾಘವೇಂದ್ರ ಹೆಗಡೆ
ನಿರ್ಮಾಣ: ರಾಘವೇಂದ್ರ ಹೆಗಡೆ
ತಾರಾಗಣ: ದರ್ಶನ್, ದೀಕ್ಷಾ ಸೇಠ್, ರವಿಶಂಕರ್, ಅನಂತ್‌ನಾಗ್, ರಜತ್‌ಬೇಡಿ, ಊರ್ವಶಿ, ಸೃಜನ್ ಲೋಕೇಶ್ ಮುಂತಾದವರು
ಮೊಮ್ಮಗ ಜಗ್ಗು ಸಂಪ್ರದಾಯಸ್ಥ ಮನೆತನದ ಸುಗುಣಶೀಲ, ಸುಶೀಲೆ, ಸರ್ವಗುಣಸಂಪನ್ನೆ, ದೇವೀಸ್ವರೂಪಿ ಹೆಣ್ಣನ್ನು ಮದುವೆ ಆಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿ ತಾತ ಕಣ್ಮುಚ್ಚುತ್ತಾನೆ. ರೌಡಿ ಜಗ್ಗು ಅಬ್ಬರಿಸಿದರೆ ಕೋಟಿ ಕೋಟಿ ಕಾಲಕೆಳಗೆ ಬಂದು ಬೀಳುತ್ತದೆಯೇ ಹೊರತು, ಮದುವೆಯಾಗಲು ಸಂಪ್ರದಾಯಸ್ಥ ಹೆಣ್ಣು ಸಿಗುವುದಿಲ್ಲ. ಅಲ್ಲಿಗೆ ಹೆಣ್ಣು ಸಿಗದವರ ಪಟ್ಟಿಯಲ್ಲಿ ಪತ್ರಕರ್ತರು, ಸಿನಿಮಾ ಪೋಷಕ ನಟರು,ರೈತರು , ಮೇಷ್ಟ್ರುಗಳು, ಅಡುಗೆಯವರ ಜೊತೆಗೆ ರೌಡಿಯೂ ಸೇರ್ಪಡೆಯಾದಂತಾಯಿತು.
ತಾತ ಇಂಥದ್ದೊಂದು ಡೀಲ್ ಕೊಟ್ಟು ಅಬೇಸ್ ಆದ ಮೇಲೆ ಜಗ್ಗುವಿನ ವಧು ಅನ್ವೇಷಣೆ ಶುರುವಾಗುತ್ತದೆ. ಆತನಿಗೆ ನೆರವಾಗಲು ನಾಲ್ವರು ಜೀವದ ಗೆಳೆಯರೂ ಇರುತ್ತಾರೆ. ಇವೆರೆಲ್ಲ ಮುಂಬೈ ಸೇರಿ ಕಲಿಯುಗದಲ್ಲೂ ಕಾಲುಂಗುರ ಹಾಕಿಕೊಂಡು ಪತಿಪರಾಯಣೆ ಆಗಬಲ್ಲ ಹೆಣ್ಣನ್ನು ಹುಡುಕಿ ತರುತ್ತಾರೋ ಇಲ್ಲವೋ ಎಂಬುದನ್ನು ರಾಘವೇಂದ್ರ ಎರಡು ಗಂಟೆ ಮೂವತ್ತು ನಿಮಿಷದಲ್ಲಿ ಕ್ವಚಿತ್ತಾಗಿ ಹೇಳುವುದನ್ನು ಬ್ರಹ್ಮಚಾರಿಗಳೂ ಹುಡುಗಿ ಹುಡುಕುವವರೂ ಮದುವೆ ಆದವರೂ ಮಕ್ಕಳೂ ಥೇಟ್ ರವಿಶಂಕರ್ ಥರ ಇಷ್ಟರಲ್ಲೇ ಪ್ರೇತಾತ್ಮ ಆಗುವವರೂ ಪರಮಾನಂದದಿಂದ ನೋಡಬಹುದು. ಕನ್ನಡ ಸಿನಿಮಾಗಳು ಟಾಸ್ಕ್ ಓರಿಯೆಂಟೆಡ್ ಆದ ನಂತರ, ಕತೆ ಬರೆಯುವುದೂ ಸಿನಿಮಾ ಮಾಡುವುದೂ ಸುಲಭವಾಗಿದೆ. ತಾತ ಕೊಟ್ಟ ಸುಪಾರಿಯೇ ಜಗ್ಗುವನ್ನು ಸರಿದಾರಿಯಲ್ಲಿ ನಡೆಸುತ್ತದೆ. ಆ ಸುಪಾರಿ ತೆಗೆದುಕೊಂಡು ತಾಂಬೂಲ ಬದಲಾಯಿಸುವ ತನಕದ ಕತೆಯೊಳಗೆ ಏನೇನೇನು ತಿರುವುಗಳನ್ನು ತರಬಹುದೋ ಅವನ್ನು ರಾಘವೇಂದ್ರ ಹೆಗಡೆ ಅತ್ಯಂತ ಪ್ರಾಮಾಣಿಕ ಪ್ರತಿಭೆಯಿಂದ ತಂದಿದ್ದಾರೆ. ಎರಡೂವರೆ ಗಂಟೆಯೊಳಗೆ ಜಗ್ಗು ಜಗತ್ತಿನೊಳಗೆ ಯಾರೆಲ್ಲ ಬಂದುಹೋಗಬಹುದೋ ಅವರೆಲ್ಲ ಬಂದುಹೋಗುತ್ತಾರೆ. ನೀವು ನೋಡಲೇಬೇಕಾದ ಅವತಾರದಲ್ಲಿ ಸಾಧು ಕೋಕಿಲಾ, ಬೇಡವೆಂದರೂ ಕಣ್ಣಿಗೆ ಬೀಳುವ ವೇಷದಲ್ಲಿ ಬುಲೆಟ್ ಪ್ರಕಾಶ್, ನೋಡಿಸಿಕೊಳ್ಳಲಿಕ್ಕೆಂದೇ ಬರುವ ದೀಪಿಕಾ ಕಾಮಯ್ಯ, ರಚಿತಾ ರಾಮ್, ಭಜನಾಮಂಡಳಿ ಸದಸ್ಯ ಅನಂತ್‌ನಾಗ್, ಕಾಮಿಡಿ ಪೀಸ್ ಖಳಸೋದರ, ಕತ್ತು ತಿರುಗಿಸುತ್ತಾ ಕನ್ನಡ ಮಾತಾಡುವ ಕನ್ನಡ ಕತ್ತೂರಿ ವಸೂಲ್‌ಬಾಯ್, ನೆಕ್‌ಟೈ ತೊಟ್ಟ ಅಚ್ಯುತ- ಹೀಗೆ ಮೆರವಣಿಗೆ ಮುಂದುವರಿಯುತ್ತದೆ. ಹೊಟ್ಟೆ ತುಂಬಾ ನಗಿಸಲಿಕ್ಕೆ ಊರ್ವಶಿ ಇದ್ದಾರೆ.
ರಾಘವೇಂದ್ರ ಕೂಡ ಈ ಕಾಲದ ತರುಣರು. ಅವರಿಗೆ ಕತೆಯಿಂದಾಚೆ ಈಚೆ ಹೋಗುವ ಯಾವ ಆಸಕ್ತಿಯೂ ಇಲ್ಲ. ಹೀಗಾಗಿ ಅವರು ಅನೇಕ ಟ್ರ್ಯಾಕುಗಳನ್ನು ತಂದು ದಾರಿತಪ್ಪಿಸುವುದಿಲ್ಲ. ಎಲ್ಲಾ ದಾರಿಗಳೂ ಜಗ್ಗು ದಾದಾನ ಕಡೆಗೇ ಸಾಗುತ್ತವೆ. ಏನು ನಡೆದರೂ ಅದು ದಾದಾನ ಬಣ್ಣ, ರುಚಿ ಮತ್ತು ಶಕ್ತಿಯನ್ನು ತೋರುವುದಕ್ಕೆಂದೇ ನಡೆಯುತ್ತವೆ. ಆದರೆ, ದರ್ಶನ್ ಅವರ ಹಿಂದಿನ ಚಿತ್ರಗಳಷ್ಟು ಅತಿಶಯೋಕ್ತಿ ಇಲ್ಲಿಲ್ಲ. ಅವರು ಆರಂಭದಲ್ಲಿ ಸೂಪರ್‌ಸ್ಟಾರ್ ಆಗಿ, ನಡುವೆ ಆ್ಯಕ್ಟರ್ ಆಗಿ, ಅಲ್ಲಲ್ಲಿ ಸ್ಟಾರ್ ಆಗಿ ಸರ್ವಾನುರಾಗಿ ಆಗುತ್ತಾ ಹೋಗುತ್ತಾರೆ. ಮಕ್ಕಳು ಈ ಸಿನಿಮಾವನ್ನು ಭಯಂಕರ ಎಂಜಾಯ್ ಮಾಡುವ ಎಲ್ಲಾ ಲಕ್ಷಣಗಳೂ ಇವೆ.
ರಾಘವೇಂದ್ರ ಈ ಕಾಲದ ವೇಗ ಮತ್ತು ಎಂಬತ್ತರ ದಶಕದ ವ್ಯವಧಾನ- ಎರಡನ್ನೂ ಬೆಸೆಯಲು ನೋಡುತ್ತಾರೆ. ಹೀಗಾಗಿ ರಭಸದಿಂದ ಆರಂಭವಾಗುವ ಸಿನಿಮಾ ಕ್ರಮೇಣ ನಿಧಾನವಾಗುತ್ತಾ ಬರುತ್ತದೆ. ಚಿತ್ರದ ಕೊನೆಯ ಹೊಡೆದಾಟವಂತೂ ಎಂಬತ್ತರ ದಶಕದ ಸಿನಿಮಾಗಳ ಕ್ಲೈಮ್ಯಾಕ್ಸನ್ನೇ ನೆನಪಿಸುತ್ತದೆ.
ಆ ಕಾಲದ ಚಿತ್ರಗಳಲ್ಲಿ ಆಗುವಂತೆ ಇಲ್ಲಿ ತಮಾಷೆಯ ಹೊಡೆದಾಟ ಇದೆ. ಪ್ರತಿಯೊಬ್ಬರೂ ವೈರಿಗಳೊಂದಿಗೆ ಭೀಕರವಾಗಿ ಭಯಂಕರವಾಗಿ ತಮಾಷೆಯಾಗಿ ಹೊಡೆದಾಡುತ್ತಾರೆ. ಪೊಲೀಸರನ್ನೇ ಬೆದರಿಸಿ ನಾಯಕನನ್ನು ಠಾಣೆಯಿಂದ ಬಿಡಿಸುವ ಜನಮುಖೀ ಕೆಲಸವಾಗುತ್ತದೆ. ಇದ್ದಕ್ಕಿದ್ದ ಹಾಗೆ ಪೊಲೀಸ್ ಕಮಿಷನರ್‌ಗೆ ಎಲ್ಲವೂ ಅರಿವಾಗುವ ಪವಾಡಸದೃಶ ದೃಶ್ಯಗಳನ್ನೂ ಹೆಗಡೆ ಹೆಣೆದಿದ್ದಾರೆ.
ಪ್ರೇಕ್ಷಕರಿಗೆ ತುಂಬ ಕಷ್ಟಕೊಡಬಾರದು. ಸರಳವಾದ ಕತೆಯನ್ನು ಅಷ್ಟೇ ಸರಳವಾಗಿ ಆದರೆ ಶ್ರೀಮಂತವಾಗಿ ಹೇಳಬೇಕು ಎಂದು ರಾಘವೇಂದ್ರ ಹೆಗಡೆ ತೀರ್ಮಾನಿಸಿಕೊಂಡು ಜಗ್ಗುದಾದ ಚಿತ್ರವನ್ನು ನಿರ್ದೇಶಿಸಿಬಹುದು. ಆ ಯತ್ನದಲ್ಲಿ ಅವರು ಸಫಲರಾಗಿದ್ದಾರೆ. ಚಿತ್ರ ಮುಗಿಯುತ್ತಿದ್ದಂತೆ ಸತ್ತರೂ ಮುಕ್ತಿಯಿಲ್ಲದೇ ಸುತ್ತಾಡಿಕೊಂಡಿದ್ದ ತಾತನ ಪ್ರೇತಾತ್ಮಕ್ಕೆ ಮುಕ್ತಿ ಸಿಗುತ್ತದೆ. ಅಂಥ ಮುಕ್ತಿಗಾಗಿ ಎಲ್ಲರೂ ಹಂಬಲಿಸುತ್ತಾರೆ ಎನ್ನುವುದನ್ನು ಭಾರತೀಯ ಕರ್ಮಸಿದ್ಧಾಂತ ಬಲ್ಲವರೆಲ್ಲ ನಂಬರಬಹುದು.
ದರ್ಶನ್ ಮತ್ತು ಮಜಾ ಟಾಕೀಸ್ ತಂಡ ಖುಷಿಕೊಡುತ್ತದೆ. ಪಾತ್ರವನ್ನು ಮೈಗೆ ಆವಾಹಿಸಿಕೊಂಡು ನಟಿಸಿದವರು ಊರ್ವಶಿ. ದೀಕ್ಷಾ ಸೇಠ್ ದರ್ಶನ್ ಎತ್ತರಕ್ಕೆ ಸರಿಯಾದ ಜೋಡಿ. ಹರಿಕೃಷ್ಣ ಕುಣಿತಕ್ಕೆ ಒಪ್ಪುವಂಥ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಯೋಗರಾಜ ಭಟ್ಟರು ಆ ಸಂಗೀತಕ್ಕೆ ಒಪ್ಪುವಂಥ ಹಾಡುಗಳನ್ನು ಬರೆದಿದ್ದಾರೆ. ಬಹಳ ದಿನಗಳ ನಂತರ ಕಾಣಿಸಿಕೊಂಡಿರುವ ವೇಣು ತಮ್ಮ ಹಳೆಯ ಶೈಲಿಯಿಂದ ಹೊರಬಂದು, ಹೊಸ ಛಾಯಾಗ್ರಹಣ ಶೈಲಿಯನ್ನು ರೂಢಿಸಿಕೊಂಡಂತಿದೆ.
ರಾಘವೇಂದ್ರ ಹೆಗಡೆ ಅವರ ಮುಗ್ಧಸಂತೋಷ ಪ್ರೇಕ್ಷಕರನ್ನೂ ತಲುಪುತ್ತದೆ. ಅವರು ಅಲ್ಲಲ್ಲಿ ಭಾವುಕರಾಗಿ, ಕೆಲವೊಮ್ಮೆ ಕತೆಯೊಳಗೆ ಕಳೆದುಹೋಗಿ, ಮಗದೊಮ್ಮೆ ದರ್ಶನ್ ಅಭಿಮಾನಿಗಳಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿಂತನ್ ಸಂಭಾಷಣೆಯಲ್ಲಿ ಹೊಗಳುವಿಕೆಗೆ ಶೇಕಡಾ 50 ಕಡಿತ ಸಿಕ್ಕಿದೆ. ಗೀತರಚನೆಯಲ್ಲಿ ನಾಗೇಂದ್ರ ಪ್ರಸಾದ್ ಮುಂದೆ, ಮಿಕ್ಕೋರು ಹಿಂದೆ.
ಜೋಗಿ
-ಉದಯವಾಣಿ
Comments are closed.