ಮನೋರಂಜನೆ

ರುದ್ರತಾಂಡವದ ನಡುವೆ ಪ್ರೇಮ ಪಾಂಡವ

Pinterest LinkedIn Tumblr

ruಚಿತ್ರ: ತಾಂಡವ
ನಿರ್ಮಾಣ: ಸ್ವಾತಿ ಅಂಬರೀಶ್‌ ನಿರ್ದೇಶನ: ಗೋಪಾಲ್‌
ತಾರಾಗಣ: ವಸಂತ್‌, ಚಾಂದಿನಿ, ಧರ್ಮ, ಮೈಕೋ ನಾಗರಾಜ್‌.

ಸಿನಿಮಾ ಆರಂಭವಾಗಿ ಹತ್ತು ನಿಮಿಷಕ್ಕೆ ಪ್ರೇಕ್ಷಕನಿಗೆ ಒಂದಂತೂ ಸ್ಪಷ್ಟವಾಗಿರುತ್ತದೆ. ಅದೇನೆಂದರೆ ಇದೊಂದು ಹೊಡೆದಾಟದ, ರೌಡಿಸಂ ಹಿನ್ನೆಲೆಯ ಸಿನಿಮಾವಾಗಿ ಕೊನೆಯಾಗುತ್ತದೆಯೇ ಹೊರತು ಅದಕ್ಕಿಂತ ಹೆಚ್ಚಿನ್ನದ್ದೇನನ್ನು ಇಲ್ಲಿ ನಿರೀಕ್ಷಿಸಬಾರದೆಂದು. ಅದಕ್ಕೆ ಸರಿಯಾಗಿ ಆ ಊಹೆ ಕೂಡಾ ಸರಿಯಾಗುತ್ತದೆ.

ಒಂದು ಮರ್ಡರ್‌ ಸ್ಕೆಚ್‌ನೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಹಾಗಂತ ಆ ಸ್ಕೆಚ್‌ ವಕೌìಟ್‌ ಆಗಿದೆಯಾ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ಇಡೀ ಸಿನಿಮಾ ಒಂದು ಘಟನೆಯ ಸುತ್ತ ಸುತ್ತುತ್ತದೆಯೇ ಹೊರತು ಅದರಾಚೆ ಇಣುಕುವ ಪ್ರಯುತ್ನ ಕೂಡಾ ಇಲ್ಲಿ ನಡೆದಿಲ್ಲ. ಪರಿಣಾಮವಾಗಿ ಸಿನಿಮಾದಲ್ಲಿ ಮುಂದೇನಾಗಬಹುದೆಂಬುದನ್ನು ಪ್ರೇಕ್ಷಕ ಸುಲಭವಾಗಿ ಊಹಿಸುವಂತಾಗಿದೆ.

ಕಥೆ ಬಗ್ಗೆ ಹೇಳುವುದಾದರೆ ಇದೇನು ತೀರಾ ಹೊಸ ಕತೆಯೇನೂ ಅಲ್ಲ. ಒಂದು ಲ್ಯಾಂಡ್‌ ಡೀಲ್‌, ಅದಕ್ಕೆ ವಿರುದ್ಧವಾಗಿರುವ ವ್ಯಕ್ತಿ ಹಾಗೂ ಒಂದು ಮರ್ಡರ್‌ ಸ್ಕೆಚ್‌ನೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ನಿರ್ದೇಶಕರು ಅಷ್ಟಕ್ಕೇ ತೃಪ್ತಿ ಪಟ್ಟಂತಿದೆ. ಹಾಗಾಗಿಯೇ ಅದೇ ಹೊಡೆದಾಟ, ಬಡಿದಾಟ, ಚೇಸಿಂಗ್‌ ದೃಶ್ಯಗಳೇ ಪದೇ ಪದೇ ಕಾಣಿಸಿಕೊಳ್ಳುತ್ತವೆ. ಮರ್ಡರ್‌ ಸ್ಕೆಚ್‌ ಅನ್ನೇ ಮತ್ತಷ್ಟು ರೋಚಕ ಹಾಗೂ ಕುತೂಹಲದೊಂದಿಗೆ ನಿರೂಪಿಸುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಅವರು ಎಲ್ಲವನ್ನು ತುಂಬಾ ಸರಳವಾಗಿ ಮಾಡಿ ಮುಗಿಸಿದ್ದಾರೆ. ಹಾಗಾಗಿಯೇ ಇಡೀ ಸಿನಿಮಾದ ಫೋಕಸ್‌ ಮಿಸ್‌ ಆಗಿದೆ. ಕಥೆಯನ್ನು ಬೆಳೆಸಿಕೊಂಡು ಹೋಗುವ ಬದಲು ಸಿನಿಮಾಕ್ಕೆ ಅನಿವಾರ್ಯವೆನಿಸದ ಸನ್ನಿವೇಶಗಳ ಮೂಲಕ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಹಾಗಾಗಿಯೇ ಇಲ್ಲಿ ಕೆಲವು ದೃಶ್ಯಗಳು ಆಗಾಗ ಪ್ರತ್ಯಕ್ಷವಾಗುತ್ತವೆ. ಆದರೆ ಅದಕ್ಕೊಂದು ಗಟ್ಟಿಹಿನ್ನೆಲೆಯಿಲ್ಲದಿರುವುದರಿಂದ ಅವೆಲ್ಲವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಪ್ರೇಕ್ಷಕನದು.

ಐಟಂ ಸಾಂಗ್‌, ಚೇಸಿಂಗ್‌ ಗಳಿರುವುದರಿಂದ ಮಾಸ್‌ ಪ್ರೇಕ್ಷಕರಿಗೆ ಈ ಸಿನಿಮಾ ಖುಷಿ ಕೊಡಬಹುದು. ಧರ್ಮ ಹಾಗೂ ಮೈಕೋ ನಾಗರಾಜ್‌ ಬಿಟ್ಟರೆ ಉಳಿದಂತೆ ಇಲ್ಲಿ ಹೊಸಬರ ದಂಡೇ ಇದೆ. ಹಾಗಾಗಿ ಇಲ್ಲಿ ನಾಯಕ-ನಾಯಕಿ ಎನ್ನುವುದಕ್ಕಿಂತ ಎಲ್ಲಾ ಪಾತ್ರಗಳು ಹೈಲೈಟ್‌ ಆಗಿವೆ. ಆದರೆ, ಅದರಿಂದ ಚಿತ್ರಕ್ಕೆ ಹೆಚ್ಚಿನ ಲಾಭವಾದಂತಿಲ್ಲ.

ನಿರ್ದೇಶಕರು ಮನಸ್ಸು ಮಾಡಿದ್ದರೆ ಚಿತ್ರಕ್ಕೆ ಸೆಂಟಿಮೆಂಟ್‌ ಟಚ್‌ ನೀಡುವ ಅವಕಾಶವೂ ಇತ್ತು. ಚಿತ್ರದ ಮತ್ತೂಂದು ಮೈನಸ್‌ ಪಾಯಿಂಟ್‌ಗಳಲ್ಲಿ ರೀರೆಕಾರ್ಡಿಂಗ್‌ ಕೂಡಾ ಒಂದು. ಅಬ್ಬರದ ಹಿನ್ನೆಲೆ ಸಂಗೀತ ಡೈಲಾಗ್‌ ಅನ್ನು ನುಂಗಿ ಹಾಕಿದೆ. ಆ್ಯಕ್ಷನ್‌ ಸಿನಿಮಾಕ್ಕೆ ರೀರೆಕಾರ್ಡಿಂಗ್‌ ಮುಖ್ಯ ಪಾತ್ರ ವಹಿಸುತ್ತದೆ ನಿಜ. ಆದರೆ ಅತಿಯಾದರೆ ಅದೇ ಸಿನಿಮಾಕ್ಕೆ ಮೈನಸ್‌ ಆಗುತ್ತದೆ. “ತಾಂಡವ’ದಲ್ಲೂ ಆರಂಭದಿಂದ ಅಂತ್ಯದವರೆಗೆ ಹಿನ್ನೆಲೆ ಸಂಗೀತದ ಅಬ್ಬರವಿದೆ. ನಾಯಕ ವಸಂತ್‌, ನಾಯಕಿ ಚಾಂದಿನಿ, ಧರ್ಮ, ಮೈಕೋ ನಾಗರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇಲ್ಲಿ ಧರ್ಮ ಹಾಗೂ ಮೈಕೋ ನಾಗರಾಜ್‌ ಬಿಟ್ಟರೆ ಇತರರು ನಟನೆಯಲ್ಲಿ ಗಮನ ಸೆಳೆಯುವುದಿಲ್ಲ. ಧರ್ಮ ತುಂಬಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡುಗಳು ಕೂಡಾ ಗಮನ ಸೆಳೆಯುವುದಿಲ್ಲ.
– ರವಿ ಪ್ರಕಾಶ್‌ ರೈ
-ಉದಯವಾಣಿ

Comments are closed.