ಮನೋರಂಜನೆ

ಕಬಾಲಿ ವಿತರಣೆ ಹಕ್ಕುಗಳು ರಾಕ್‌ಲೈನ್‌ಗೆ: 10+ಕೋಟಿಗೆ ಕರ್ನಾಟಕ ಹಕ್ಕು

Pinterest LinkedIn Tumblr

kabaliರಜನಿಕಾಂತ್‌ ಅಭಿನಯದ “ಕಬಾಲಿ’ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜುಲೈ ಒಂದರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಈ ಚಿತ್ರದ ಕರ್ನಾಟಕ ಭಾಗದ ವಿತರಣೆಯ ಹಕ್ಕುಗಳನ್ನು ನಟ-ನಿರ್ಮಾಪಕ ಪಡೆದುಕೊಂಡಿದ್ದಾರೆ. ಈ ಹಿಂದೆ ರಾಕ್‌ಲೈನ್‌ ವೆಂಕಟೇಶ್‌ ಅವರು, ರಜನಿಕಾಂತ್‌ ಅಭಿನಯದ “ಲಿಂಗಾ’ ಚಿತ್ರವನ್ನು ನಿರ್ಮಿಸಿ-ವಿತರಿಸಿದ್ದರು. ಈಗ ಅವರು “ಕಬಾಲಿ’ ಚಿತ್ರವನ್ನೂ ಸಹ ವಿತರಣೆಗೆ ಪಡೆದುಕೊಂಡಿರುವುದು ವಿಶೇಷ.

ರಜನಿಕಾಂತ್‌ ಅಭಿನಯದ ಚಿತ್ರವೊಂದರ ವಿತರಣೆ ಎಂಬ ವಿಷಯಕ್ಕೆ ಬಂದರೆ, ಎಷ್ಟು ಮೊತ್ತಕ್ಕೆ ಪಡೆದಿರಬಹುದು ಎಂಬ ಕುತೂಹಲ ಸಹಜವಾಗಿಯೇ ಏಳುತ್ತದೆ. ನಿಖರವಾಗಿ ಇಷ್ಟೇ ಮೊತ್ತ ಎಂಬ ರಹಸ್ಯವನ್ನು ಬಿಟ್ಟುಕೊಡದೇ ಇದ್ದರೂ, 10ಕ್ಕೂ ಹೆಚ್ಚು ಕೋಟಿಗೆ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. “ಕಬಾಲಿ’ ಚಿತ್ರದಲ್ಲಿ ರಜನಿಕಾಂತ್‌ ಡಾನ್‌ ಆಗಿ
ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷದ ಆಗಸ್ಟ್‌ 18ರಂದು ಶುರುವಾದ ಈ ಚಿತ್ರದ ಚಿತ್ರೀಕರಣ, ಇದೀಗ ಮುಕ್ತಾಯವಾಗಿದ್ದು, ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಚಿತ್ರವನ್ನು ರಂಜಿತ್‌ ಅವರು ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶಿಸಿದ್ದಾರೆ. ಸಂತೋಷ್‌ ನಾರಾಯಣ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಕಲೈಪುಲಿ ಎಸ್‌. ಧನು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಜನಿಕಾಂತ್‌ ಜೊತೆಗೆ ರಾಧಿಕಾ ಆಪ್ಟೆ, ಕಿಶೋರ್‌, ಜಾನ್‌ ವಿಜಯ್‌, ದಿನೇಶ್‌ ರವಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ರಜನಿಕಾಂತ್‌ ಅವರ ಚಿತ್ರಗಳ ಚಿತ್ರೀಕರಣ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಆದರೆ, ಈ ಚಿತ್ರದ ಚಿತ್ರೀಕರಣ ತಮಿಳುನಾಡು ಅಲ್ಲದೆ, ಮಲೇಷ್ಯಾ, ಬ್ಯಾಂಕಾಕ್‌, ಹಾಂಗ್‌ಕಾಂಗ್‌ ಮುಂತಾದ ಕಡೆ ನಡೆದಿದೆ.
-ಉದಯವಾಣಿ

Comments are closed.