ಮನೋರಂಜನೆ

ಜಗ್ಗು ದಾದಾ ಹಾಡು ಸಂಜೆ

Pinterest LinkedIn Tumblr

Jaggu-Dada_(147)ಮೊದಲಿಗೊಬ್ಬರ ಶುಭ ಹಾರೈಕೆ. ನಂತರ ಅವರಿಂದ ಒಂದು ಹಾಡಿನ ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್‌. ಹೀಗೆ ನಾಲ್ಕು ಹಾಡುಗಳು ಪ್ರದರ್ಶನಗೊಂಡವು. ಹಿರಿಯ ನಿರ್ಮಾಪಕ ಎಸ್‌.ಎ. ಗೋವಿಂದರಾಜ್‌, ತಾರಾ, ಆದಿತ್ಯ ಹಾಗೂ ಪಿ.ಎನ್‌. ಸತ್ಯ ಒಂದೊಂದು ಹಾಡುಗಳಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟರು. ಹಾಡುಗಳ ಪ್ರದರ್ಶನ ಮುಗಿದ ನಂತರ ಒಬ್ಬೊಬ್ಬರೇ ವೇದಿಕೆ ಏರಿ, ನಾಲ್ಕು ಹಾರೈಕೆಯ ಮಾತನ್ನು ಆಡಿದರು. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ರಾಘವೇಂದ್ರ ಹೆಗಡೆ, ಸೃಜನ್‌ ಲೋಕೇಶ್‌, ವಿಶಾಲ್‌ ಹೆಗಡೆ, ನೃತ್ಯ ನಿರ್ದೇಶಕ ಗಣೇಶ್‌, ದೀಪಿಕಾ ಕಾಮಯ್ಯ, ಡಿ ಕಂಪೆನಿಯ ಶೈಲಜಾ ನಾಗ್‌ … ಹೀಗೆ ಒಬ್ಬೊಬ್ಬರೇ ಮೈಕು ಹಿಡಿದು, ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಹಾರೈಕೆಯ ಮಾತುಗಳನ್ನಾಡಿದರು.

ಕೊನೆಗೆ ಮಾತಾಡುತ್ತೀನಿ ಎಂದಿದ್ದರಂತೆ ದರ್ಶನ್‌. ಎಲ್ಲರ ಮಾತು ಮುಗಿಯುತ್ತಿದ್ದಂತೆ ದರ್ಶನ್‌ ಅವರನ್ನು ವೇದಿಕೆ ಮೇಲೆ ಕರೆಸಿಕೊಳ್ಳಲಾಯಿತು. ದರ್ಶನ್‌ ಮೈಕು ಹಿಡಿದರು. ಹಿರಿಯ ನಿರ್ಮಾಪಕ ಎಸ್‌.ಎ. ಗೋವಿಂದರಾಜ್‌ ಅವರು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದನ್ನು ನೆನೆದು, ಖುಷಿಪಟ್ಟರು. ನಂತರ ಚಿತ್ರದ ಬಗ್ಗೆ ಅವರ ಮಾತು ಹರಿಯಿತು. “ಪತ್ರಿಕೆಯೋರು ನಾನು ಓವರ್‌ ಡೈಲಾಗ್‌ ಹೊಡೀತೀನಿ ಅಂತ ಬರೀತಾನೆ ಇದ್ದರು. ಇಲ್ಲಿ ನನಗೆ ಆದಷ್ಟು ಕಡಿಮೆ ಮಾತಿದೆ. ಈ ಚಿತ್ರ ಎಷ್ಟು ನಗಿಸೋಕೆ ಸಾಧ್ಯವೋ ಅಷ್ಟು ನಗಿಸುತ್ತದೆ. ಇಲ್ಲಿ ನಾನು ಕಾಮಿಡಿ ಮಾಡಲ್ಲ. ನಾನು ಕಾಮಿಡಿ ಪೀಸ್‌ ಅಷ್ಟೇ. ನಿಜವಾಗಿ ಕಾಮಿಡಿ ಮಾಡೋದು ಅವನು’ ಎಂದರು.

ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಕೆಲಸ ನೋಡಿ, ದರ್ಶನ್‌ ಸಖತ್‌ ಇಂಪ್ರಸ್‌ ಆಗಿದ್ದಾರೆ. “ನಿಜ ಹೇಳಬೇಕು ಅಂದರೆ, ಈ ಚಿತ್ರಕ್ಕೆ ಪ್ಯಾಚ್‌ವರ್ಕ್‌ ಮಾಡಿದ್ದು ಒಮ್ಮೆ ಮಾತ್ರ. ರಾಘು ಮೂಲತಃ ಎಡಿಟರ್‌ ಆಗಿರುವುದರಿಂದ, ಆನ್‌ ಸ್ಪಾಟ್‌ ಎಡಿಟ್‌ ಮಾಡಿಸುತ್ತಿದ್ದರು.

ಸರಿಯಾಗಿಲ್ಲ ಎಂದನಿಸಿದ್ದನ್ನ ಒಮ್ಮೆ ಮಾತ್ರ ತಕ್ಷಣ ರೀಶೂಟ್‌ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ರೀಶೂಟ್‌ ಮಾಡಿಲ್ಲ. ಇನ್ನು
ಅವರು ನಿರ್ಮಾಪಕರೂ ಆಗಿರುವುದರಿಂದ, ಹೇಗೆ ಮಾಡುತ್ತಾರೋ ಎಂಬ ಭಯವಿತ್ತು. ಆದರೆ, ರಾಘು ಸಖತ್‌ ಖರ್ಚು ಮಾಡಿದ್ದಾರೆ. ಯಾವುದಕ್ಕೂ ಇಲ್ಲ ಎನ್ನದೆಯೇ ಅದ್ಧೂರಿಯಾಗಿ ಚಿತ್ರ ಮಾಡಿದ್ದಾರೆ. ಒಟ್ಟಾರೆ ಇದೊಂದು ಒಳ್ಳೆಯ ಫ್ಯಾಮಿಲಿ ಫಿಲ್ಮ್. ಪ್ರೇಕ್ಷಕರು ಚಿತ್ರ ನೋಡಿ, ನಕ್ಕು ನಲಿದು ಹೊರ ಬರ್ತಾರೆ’ ಎಂದರು.

ದೀಕ್ಷಾ ಸೇs…ಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಾಗ “ಹೆಂಗಪ್ಪಾ ದೇವೆÅ …’ ಅಂತನಿಸಿತ್ತಂತೆ. “ನಾನು ದರ್ಶನ್‌ ಅವರ ಬಗ್ಗೆ ಕೇಳಿದ್ದೆ. ಅವರು ದೊಡ್ಡ ಹೆಸರು ಮಾಡಿದವರು. ಅವರ ಜೊತೆಗೆ ನಟಿಸುವಾಗ ಸ್ವಲ್ಪ ಭಯವಿತ್ತು. ಅವರ ಜೊತೆಗೆ ಕೆಲಸ ಮಾಡಿದಾಗ, ಅವರೆಷ್ಟು ಸರಳ ಮತ್ತು ಹಂಬಲ್‌ ಅನ್ನೋದು ಗೊತ್ತಾಯ್ತು. ಅವರ ಜೊತೆಗೆ ನಟಿಸಿದ್ದು ಮರೆಯದ ಅನುಭವ’ ಎಂದು ಹೇಳಿಕೊಂಡರು.

ನಂತರ ಪಿ.ಎನ್‌. ಸತ್ಯ ಮತ್ತು ಎಂ.ಜಿ. ರಾಮಮೂರ್ತಿ ಅವರನ್ನು ವೇದಿಕೆಗೆ ಕರೆಸಲಾಯಿತು. ಅವರಿಬ್ಬರೂ ದರ್ಶನ್‌ ಅಭಿನಯದ ಮೊದಲ ಚಿತ್ರ “ಮೆಜೆಸ್ಟಿಕ್‌’ನ ನಿರ್ದೇಶಕ-ನಿರ್ಮಾಪಕರು. ಅವರಿಂದ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಲಾಯಿತು.

-ಚೇತನ್‌ ನಾಡಿಗೇರ್‌
-ಉದಯವಾಣಿ

Write A Comment