ಮನೋರಂಜನೆ

ಐಫೋನ್‌ನಲ್ಲಿ ಸಿನಿಮಾ ಮಾಡಿದ ಭಾರ್ಗವ್‌-ಶ್ರೇಯಸ್‌

Pinterest LinkedIn Tumblr

filmಕನ್ನಡದಲ್ಲಿ ಈಗಂತೂ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅದರಲ್ಲೂ ಯುವಕರು ಅಂತಹ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಅಂಥದ್ದೊಂದು ಹೊಸ ಪ್ರಯೋಗ ಮೊದಲ ಬಾರಿಗೆ ಕನ್ನಡದಲ್ಲಿ ಆಗಿದೆ ಎಂಬುದು ವಿಶೇಷ.

ಅದು ಬೇರೇನೂ ಅಲ್ಲ, ಐಫೋನ್‌ಎಸ್‌ನಲ್ಲಿ “ಡೇವಿಡ್‌’ ಎಂಬ ಒಂಭತ್ತು ನಿಮಿಷದ ಚಿತ್ರವನ್ನು ಚಿತ್ರೀಕರಿಸಿರುವುದು! ಹೌದು, ಇದು ನಿಜಕ್ಕೂ ಖುಷಿಯ ವಿಷಯವೇ ಸರಿ, ಗೆಳೆಯರೇ ಸೇರಿ ಮಾಡಿರುವ ಈ ಹೊಸ ಪ್ರಯತ್ನಕ್ಕೆ ಈಗ ಎಲ್ಲಡೆಯಿಂದ ಮೆಚ್ಚುಗೆಯೂ ಸಿಕ್ಕಿದೆ. ಅದೇ ಖುಷಿಯಲ್ಲಿರುವ ಯುವಕರ ತಂಡ, “ಡೇವಿಡ್‌’ ಹೆಸರಲ್ಲೇ ಚಿತ್ರವೊಂದನ್ನು ತಯಾರು ಮಾಡಲು ಹೊರಟಿರುವುದು ಈ ಹೊತ್ತಿನ ವಿಶೇಷ.

ಅಂದಹಾಗೆ, ಈ ಪ್ರಯತ್ನಕ್ಕೆ ಮುಂದಾಗಿದ್ದು, ಶ್ರೇಯಸ್‌ ಚಿಂಗ ಹಾಗು ಭಾರ್ಗವ್‌ ಯೋಗಾಂಬರ್‌. ಇವರ ಜತೆ ಒಂದಷ್ಟು ಗೆಳೆಯರು ಕೈ ಜೋಡಿಸಿದ್ದಕ್ಕೆ ಐಫೋನ್‌ಎಸ್‌ನಲ್ಲಿ ಒಂಬತ್ತು ನಿಮಿಷದ “ಡೇವಿಡ್‌’ ಚಿತ್ರವನ್ನು ಚಿತ್ರೀಕರಿಸಲು ಸಾಧ್ಯವಾಗಿದೆ. ಅಷ್ಟಕ್ಕೂ ಐಫೋನ್‌ನಲ್ಲೇಕೆ ಈ ಪ್ರಯತ್ನ ಅಂತೀರಾ? ಎಲ್ಲರಂತೆ, ಈ ಯುವಕರಿಗೂ ಕನ್ನಡದಲ್ಲೊಂದು ಹೊಸ ಪ್ರಯೋಗದ ಚಿತ್ರ ಕೊಡಬೇಕು ಎಂಬ ಆಸೆ ಇತ್ತು. ಮೊದಲು ಫೈವ್‌ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ನಿರ್ಮಾಪಕರನ್ನು ಹುಡುಕೋಣ ಅನ್ನೋದು ಅವರ ಯೋಚನೆ ಆಗಿತ್ತು. ಆ ಸಂದರ್ಭದಲ್ಲೇ ಐಫೋನ್‌ಎಸ್‌ನಲ್ಲಿ ಶೂಟ್‌ ಆಗಿದ್ದ ಎರಡು ವೀಡಿಯೋಗಳನ್ನು ನೋಡಿದ್ದರು. ಲಕ್ಷಾಂತರ ಖರ್ಚು ಮಾಡೋದೇಕೆ, ನಾವೂ ಕೂಡ ಐಫೋನ್‌ಎಸ್‌ನಲ್ಲೇ “ಡೇವಿಡ್‌’ ಚಿತ್ರವನ್ನು ಶೂಟ್‌ ಮಾಡಿದರೆ ಹೇಗೆ ಅನ್ನೋ ಪ್ರಶ್ನೆ ಮುಂದಿಟ್ಟುಕೊಂಡು ಮಾಡಿದ ಪ್ರಯತ್ನ ಫ‌ಲಕೊಟ್ಟಿದೆ.

ಐಫೋನ್‌ನಲ್ಲಿ ಒಂಭತ್ತು ನಿಮಿಷಗಳ ಕಾಲ ಚಿತ್ರೀಕರಣ ಮಾಡಿದ ಮೇಲೆ, ನಂಬಿಕೆ ಜಾಸ್ತಿಯಾಗಿ, ಅದನ್ನೇ ಈಗ “ಡೇವಿಡ್‌’ ಹೆಸರಿನಲ್ಲಿ ಚಿತ್ರ ಮಾಡುತ್ತಿರುವುದಾಗಿ ಹೇಳುತ್ತಾರೆ ಆ ಚಿತ್ರದ ಹೀರೋ ಶ್ರೇಯಸ್‌ ಚಿಂಗ. ಶ್ರೇಯಸ್‌, ಅಭಿನಯ ತರಂಗ ಹಾಗು ಸುಚಿತ್ರಾ ಫಿಲ್ಮ್ಸೊಸೈಟಿಯಲ್ಲಿ ನಟನೆ ತರಬೇತಿ ಪಡೆದಿದ್ದಾರೆ.

ಒಂದಷ್ಟು ಚಿತ್ರಗಳಲ್ಲೂ ಕೆಲಸ ಮಾಡಿದ ಅನುಭವವೂ ಇದೆ. ಈಗ ಗೆಳೆಯರ ಜತೆ ಸೇರಿ “ಡೇವಿಡ್‌’ ಚಿತ್ರ ಮಾಡೋಕೆ ಹೊರಟಿದ್ದಾರೆ. ಇನ್ನು, ಭಾರ್ಗವ್‌ ಯೋಗಾಂಬರ್‌ “ಡೇವಿಡ್‌’ ಚಿತ್ರದ ನಿರ್ದೇಶಕ. ಭಾರ್ಗವ್‌ ಮೂಲತಃ ಡ್ಯಾನ್ಸ್‌ ಮಾಸ್ಟರ್‌. ಕನ್ನಡದ ಅನೇಕ ಸ್ಟಾರ್‌ಗಳಿಗೆ ಸ್ಟೆಪ್‌ ಹೇಳಿಕೊಟ್ಟವರು. ಇವರು ನಿರ್ದೇಶಿಸಲು ಹೊರಟಿರುವ “ಡೇವಿಡ್‌’ ಚಿತ್ರದಲ್ಲಿ ಲಕ್ಕಿಆಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಉಳಿದಂತೆ ಹಾಲಿವುಡ್‌ನ‌ “ಅವತಾರ್‌ ‘,”ಏಲಿಯನ್ಸ್‌2′”ರಾಬಿನ್‌ಹುಡ್‌’ ಚಿತ್ರಗಳಿಗೆ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಮಾಡಿದ್ದ ಸ್ಟೀವ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿರುವುದು ವಿಶೇಷ. ಇನ್ನೊಂದು ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಎಸ್‌ಐ 2ಕೆ ಎಂಬ ಕ್ಯಾಮೆರಾದಲ್ಲಿ ಕನ್ನಡ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ. ಈ ಹಿಂದೆ “ಸ್ಲಂಡಾಗ್‌ ಮಿಲೇನಿಯರ್‌’ ಹಾಗು ತೆಲುಗಿನಲ್ಲಿ ನಾಗಾರ್ಜುನ ಅಭಿನಯದ “ಗಗನಂ’ ಚಿತ್ರಕ್ಕೆ ಈ ಕ್ಯಾಮೆರಾ ಬಳಸಲಾಗಿತ್ತು. ಅದು ಬಿಟ್ಟರೆ, ಈಗ ಕನ್ನಡದ “ಡೇವಿಡ್‌’ ಚಿತ್ರದಲ್ಲಿ ಬಳಸಲಾಗುತ್ತಿದೆ ಎಂಬುದು ಶ್ರೇಯಸ್‌ ಮಾತು.

“ಡೇವಿಡ್‌’ ಎಂಬುದು ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸ್ಟೋರಿ. ಇಲ್ಲಿ ನಾಲ್ಕು ಕಥೆಗಳು ಸಾಗುತ್ತವೆ. ಡೇವಿಡ್‌ ಯಾರು ಅನ್ನುವುದನ್ನು ಹೀರೋ ಪತ್ತೆ ಮಾಡೋಕೆ ಹೋಗುವುದೇ ಸಿನಿಮಾದ ಹೈಲೈಟ್‌. ಇಲ್ಲಿ ಕ್ರೈಮ್‌, ಸೆಂಟಿಮೆಂಟ್‌ ಹಾಗು ಲವ್‌ ಕೂಡ ಇದೆ. ಹಾಲಿವುಡ್‌ ಫೀಲ್‌ನಲ್ಲೇ ಇಡೀ ಸಿನಿಮಾವನ್ನು ತೋರಿಸುವ ಉದ್ದೇಶ ನಮಗಿದೆ ಎನ್ನುವ ಶ್ರೇಯಸ್‌, ಕನ್ನಡದಲ್ಲೊಂದು ಹೊಸ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಾರೆ.

ಶ್ರೇಯಸ್‌ ಸದ್ಯಕ್ಕೆ ಕನ್ನಡದ “ರಂಗ್‌ಬಿ ರಂಗಿ’ ಚಿತ್ರದ ನಾಲ್ವರು ಹೀರೋಗಳಲ್ಲೊಬ್ಬರಾಗಿ ನಟಿಸುತ್ತಿದ್ದಾರೆ. ಅದು ಬಿಟ್ಟರೆ “ಡೇವಿಡ್‌’ ಮೂಲಕ ಅವರು ಸೋಲೋ ಹೀರೋ ಆಗಿದ್ದಾರೆ. ಸದ್ಯಕ್ಕೆ ಎಲ್ಲವೂ ರೆಡಿಯಾಗಿದೆ, ಇನ್ನೊಬ್ಬ ನಿರ್ಮಾಪಕರಿಗಾಗಿ ಹುಡುಕಾಟ ನಡೆದಿದೆ. ಚಿತ್ರದ ನಾಯಕಿ ಹಾಗು ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
-ಉದಯವಾಣಿ

Write A Comment