ರಾಷ್ಟ್ರೀಯ

ನುಂಗಣ್ಣರಿಗೆ ಗಾಳ : ಕಾಪ್ಟರ್ ಖರೀದಿಯಲ್ಲಿ ದಲ್ಲಾಳಿ ಪಡೆದವರ ಪತ್ತೆಗೆ ಇಡಿ ಕ್ರಮ

Pinterest LinkedIn Tumblr

helicopterನವದೆಹಲಿ, ಮೇ ೫- ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ದಲ್ಲಾಳಿ ಹಣ ಪಡೆದವರ ಪತ್ತೆಗೆ ಜಾರಿ ನಿರ್ದೇಶನಾಲಯ ಚಾಲನೆ ನೀಡಿದ್ದು, ಈ ಸಂಬಂಧ ಶಂಕಿತರ ವಿವರಗಳನ್ನು ಒದಗಿಸುವಂತೆ ರಕ್ಷಣಾ ಖಾತೆಗೆ ಸೂಚಿಸಿದೆ.
ಹೆಲಿಕಾಪ್ಟರ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕೇಳಿ ಬಂದಿರುವ ಅಧಿಕಾರಿಗಳು ಹಾಗೂ ಇತರರ ಸಂಪೂರ್ಣ ವಿವರಗಳನ್ನು ಒದಗಿಸುವಂತೆಯೂ ರಕ್ಷಣಾ ಖಾತೆಗೆ ತಿಳಿಸಲಾಗಿದೆ.
ತಮ್ಮ ಸೇವಾವಧಿಯ ನಾನಾ ಹಂತಗಳಲ್ಲಿ ಈ ಖರೀದಿ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಭಾರತೀಯ ವಾಯುಪಡೆಯ ಹತ್ತು ಜನ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳ ಆಸ್ತಿ ವಿವರಗಳನ್ನು ತನಗೆ ಸಲ್ಲಿಸಬೇಕೆಂದು ಜಾರಿ ನಿರ್ದೇಶನಾಲಯವು ರಕ್ಷಣಾ ಖಾತೆಯನ್ನು ಕೋರಿಕೊಂಡಿದೆ.
ಇದಲ್ಲದೆ ಈ ವ್ಯವಹಾರದಲ್ಲಿ ಆಸಕ್ತಿ ತೋರಿರುವ ಇತರ ಹಲವಾರು ಜನರ ವ್ಯಕ್ತಿಗತ ಹಣಕಾಸು ವ್ಯವಹಾರ, ವರ್ಗಾವಣೆ ಹಾಗೂ ಹೂಡಿಕೆಗಳಿಗೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಹೆಚ್ಚಿನ ವಿವರಗಳನ್ನು ಬಯಸಿದೆ.

ನಿರ್ದೇಶನಾಲಯವು ಈ ಸಂಬಂಧ ಆದಾಯ ತೆರಿಗೆ ಇಲಾಖೆ ಹಾಗೂ ಹಣಕಾಸು ಬೇಹುಗಾರಿಕೆ ಘಟಕಗಳಿಗೆ ಲಿಖಿತ ರೂಪದಲ್ಲಿ ಅರಿಕೆ ಮಾಡಿಕೊಂಡಿದೆ.
ಮಧ್ಯವರ್ತಿಗಳೆಂದು ಶಂಕಿಸಲಾಗಿರುವ ವ್ಯಕ್ತಿಗಳು ಮಾಡಿಕೊಂಡಿರುವ ಕೈ ಬರಹದ ಟಿಪ್ಪಣಿಗಳನ್ನು ಆಧರಿಸಿ ಮಿಲನ್‌ನಲ್ಲಿನ ನ್ಯಾಯಾಲಯಕ್ಕೆ ದಾಖಲೆಯನ್ನು ಒದಗಿಸಲಾಗಿದೆ.
ಇವುಗಳ ಆಧಾರದ ಮೇಲೆಯೇ ಇಟಲಿಯ ರಕ್ಷಣಾ ಸಂಸ್ಥೆ ಪ್ರಮುಖ ಹಾಗೂ ಸಂಸ್ಥೆಯ ಹಿಂದಿನ ಸಿಇಓ ಅವರಿಗೆ ಮಿಲನ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಹನ್ನೆರೆಡು ಅತಿ ಗಣ್ಯರು ಪ್ರಯಾಣ ಮಾಡುವ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ಇವರು ಅಕ್ರಮ ಎಸಗಿ ಹಣ ಲಪಟಾಯಿಸಿದ್ದಾರೆಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಕಿಗೆ ಬಂದಿರುವ ರಹಸ್ಯ ಸಂಕೇತಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯವು ತನ್ನದೇ ಆದ ವಿಶ್ಲೇಷಣೆಯನ್ನು ಮಾಡಿದ್ದು, ಅದರ ಆಧಾರದ ಮೇಲೆ ಆರೋಪಿಗಳನ್ನು ಬಲೆಗೆ ಬೀಳಿಸುವ ಸಾಧ್ಯತೆಗಳು ಇವೆ.
ಆದಾಯ ತೆರಿಗೆ ಇಲಾಖೆ, ಹಣಕಾಸು ಬೇಹುಗಾರಿಕೆ ಘಟಕ ಹಾಗೂ ರಕ್ಷಣಾ ಖಾತೆ ಒದಗಿಸುವ ಅಂಕಿ ಅಂಶ ಹಾಗೂ ಪೂರಕ ಮಾಹಿತಿಯನ್ನು ಆಧರಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವುದು ಸುಲಭವಾಗುವುದು ಎಂದು ಜಾರಿ ನಿರ್ದೇಶನಾಲಯದ ಆಶಯ.
ರಕ್ಷಣಾ ಖಾತೆಗೆ ಮಾಡಿಕೊಳ್ಳಲಾಗಿರುವ ಕೋರಿಕೆಯನ್ನು ಯಾರ ಆಸ್ತಿ ವಿವರ ಒದಗಿಸಬೇಕು ಎಂಬ ವಿಚಾರದಲ್ಲಿ ಹೆಸರುಗಳನ್ನು ಕೂಡ ಸ್ಪಷ್ಟವಾಗಿ ನಮೂದಿಸಲಾಗಿದೆ.
ಈಗಿರುವ ಮಾಹಿತಿಯೊಂದಿಗೆ ರಕ್ಷಣಾ ಖಾತೆ ನೀಡುವ ವಿವರಗಳನ್ನು ಥಳಕು ಹಾಕಿ ಪರಿಶೀಲನೆ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೇಳಿ ಬಂದಿರುವ ಕೆಲವು ಅಧಿಕಾರಿಗಳು ಈಗ ವಾಯುಪಡೆಯ ಉನ್ನತ ಹುದ್ದೆಗಳಲ್ಲಿದ್ದಾರೆ.

Write A Comment