ಕರ್ನಾಟಕ

ಬರಿದಾದ ಪಾಪನಾಶಿನಿ ಶ್ರೀರಾಮಕೊಂಡ: ಹರಿವು ನಿಲ್ಲಿಸಿದ ಮಲೆನಾಡಿನ ಜೀವ ನದಿ ತುಂಗೆ

Pinterest LinkedIn Tumblr

03th-3epತೀರ್ಥಹಳ್ಳಿ: ಮಲೆನಾಡಿನ ಜೀವನದಿ ತುಂಗೆಯ ಒಡಲು ಬರಿದಾಗಿದೆ. ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ತುಂಗಾ ನದಿಯ ಶ್ರೀರಾಮಕೊಂಡಕ್ಕೆ ನೀರು ಹರಿದು ಬರುತ್ತಿಲ್ಲ. ಪಾಪನಾಶಿನಿ ಶ್ರೀರಾಮಕೊಂಡ ಈ ಪ್ರಮಾಣದಲ್ಲಿ ಬತ್ತಿ ಬರಿದಾದ ಉದಾಹರಣೆಗಳೇ ಇಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು.
ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದ ರಾಮಕೊಂಡದಲ್ಲಿ ಈಗ ಅರ್ಧ ಅಡಿಯಷ್ಟೂ ನೀರು ಇಲ್ಲವಾಗಿದೆ. ರಾಮಕೊಂಡಕ್ಕೆ ಹರಿದು ಬರುತ್ತಿರುವ ನೀರು ಸಂಪೂರ್ಣ ನಿಂತು ಹೋಗಿದೆ. ಬಿಸಿಲಿನ ಝಳದಿಂದ ಬಂಡೆಗಳು ಹಾಗೂ ನೀರು ಬಿಸಿಯಾಗಿ ಜಲಚರಗಳು ಸಾಯುತ್ತಿವೆ. ಹಾವು, ಕಪ್ಪೆಗಳು ಸತ್ತ ಮೀನುಗಳನ್ನು ತಿನ್ನುವಂತಾಗಿದೆ.
‘ಮೀನುಗಳು ಸತ್ತಿರುವುದರಿಂದ ಶ್ರೀರಾಮಕೊಂಡದ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ. ಇಂಥ ಸನ್ನಿವೇಶವನ್ನು ನಾವೆಂದೂ ಕಂಡಿಲ್ಲ’ ಎನ್ನುತ್ತಾರೆ ಸ್ಥಳೀಯರು. ತುಂಗಾ ನದಿಯಲ್ಲಿ ನೀರಿನ ಹರಿವು ನಿಂತಿರುವುದರಿಂದ ನದಿಯುದ್ದಕ್ಕೂ ಜಲಚರಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಇತ್ತೀಚಿನ ವರ್ಷಗಳಲ್ಲಿ ತುಂಗೆ ಈ ಪ್ರಮಾಣದಲ್ಲಿ ಬತ್ತಿ ಹೋಗಿದ್ದಿಲ್ಲ. ತುಂಗಾ ನದಿಯನ್ನು ಸೇರುವ ಉಪ ನದಿಗಳ ಕಥೆ ಕೂಡಾ ಭಿನ್ನವಾಗಿಲ್ಲ. ಪ್ರಮುಖ ಉಪನದಿ ಮಾಲತಿ ಕೂಡ ಬರಿದಾಗಿದೆ.
ತುಂಗಾ ನದಿ ಇಕ್ಕೆಲಗಳ ದಡಗಳ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನೀರುಣಿಸುವ ಸಲುವಾಗಿ ನದಿಯ ನೀರನ್ನು ಯಥೇಚ್ಛವಾಗಿ ಬಳಕೆ ಮಾಡಿ ಕೊಳ್ಳುತ್ತಿರುವುದೂ ಸಮಸ್ಯೆ ಇಷ್ಟೊಂದು ಉಲ್ಬಣಿಸಲು ಮತ್ತೊಂದು ಪ್ರಮುಖ ಕಾರಣ. ನದಿಯಿಂದ 10–15 ಕಿ.ಮೀ. ದೂರದವರೆಗೂ ಬೆಳೆಗಾರರು ಪೈಪ್‌ಲೈನ್‌ಗಳ ಮೂಲಕ ನೀರನ್ನು ಸಾಗಿಸುವುದರಿಂದಲೂ ಸಮಸ್ಯೆ ಹೆಚ್ಚಿದೆ ಎನ್ನಲಾಗಿದೆ.
ಮರಳುರಾಶಿ ಕಾವೇರಿದ್ದು, ಇನ್ನು ಒಂದೆರಡು ವಾರ ಮಳೆ ಬಾರದೇ ಇದ್ದರೆ ನದಿಯ ಹೊಂಡಗಳಲ್ಲಿ ಅಲ್ಲಲ್ಲಿ ಶೇಖರಣೆಯಾಗಿರುವ ನೀರೂ ಕೂಡ ಆರಿ ಹೋಗಲಿದೆ. ಜಾನುವಾರು, ಪಶು ಪಕ್ಷಿಗಳಿಗೆ ಕುಡಿಯುವ ನೀರೂ ಕೂಡ ಲಭ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಮತ್ಸ್ಯಬೇಟೆಗೆ ವಿಷ ಬಳಕೆ: ಈ ನಡುವೆ, ಅಲ್ಲಲ್ಲಿ ನಿಂತಿರುವ ನೀರಿನಲ್ಲಿ ಜೀವ ಹಿಡಿದಿಟ್ಟುಕೊಂಡಿರುವ ಮೀನು ಗಳನ್ನು ಹಿಡಿಯಲು ಬೇಟೆಗಾರರು ಮದ್ದು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೀರು ಕಲುಷಿತವಾಗಿದ್ದು, ಜಾನುವಾರು, ಪಶುಪಕ್ಷಿಗಳು ಸೇವಿಸಿ ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ.
ಪುಣ್ಯ ತೀರ್ಥಸ್ಥಳ ರಾಮಕೊಂಡ ದಲ್ಲಿ ನೀರು ಬರಿದಾಗುತ್ತಿರುವುದನ್ನು ಭಕ್ತರು ಕೆಟ್ಟ ದಿನಗಳ ಮುನ್ಸೂಚನೆ ಎಂದೇ ಭಾವಿಸಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಶ್ರೀರಾಮಕೊಂಡದಲ್ಲಿ ಯಾವಾಗಲೂ ನೀರು ಇರುತ್ತಿತ್ತು. ಆದರೆ, ಈ ಬಾರಿ ರಾಮಕೊಂಡ ಬತ್ತಿರುವುದು ಸಾರ್ವಜನಿಕರನ್ನು ದಿಗಿಲಿಗೆ ದೂಡಿದೆ.
ಪ್ರತಿ ವರ್ಷ ನಡೆಯುವ ಎಳ್ಳಮಾವಾಸ್ಯೆ ಜಾತ್ರೆಗೆ ನಾಡಿನ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು, ಇಲ್ಲಿನ ರಾಮಕೊಂಡದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಅಂದು ಮಲೆನಾಡಿನ ಸಾಂಸ್ಕೃತಿಕ ಹಬ್ಬದಂತಹ ವಾತಾವರಣ ಇರುತ್ತದೆ. ಇದಕ್ಕೆ ಕಾರಣವಾಗಿರುವ ತುಂಗೆ ಜೀವಕಳೆ ಕಳೆದುಕೊಂಡಿದ್ದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
‘ತುಂಗಾ ನದಿಯಲ್ಲಿ ನೀರಿನ ಹರಿವು ನಿಂತಿರುವ ಉದಾಹರಣೆಗಳಿವೆ. ಆದರೆ, ಶ್ರೀರಾಮಕೊಂಡ ಈ ರೀತಿ ಬತ್ತಿ ಹೋಗಿದ್ದಿಲ್ಲ. ನದಿಮೂಲವನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎನ್ನುತ್ತಾರೆ ದೇವಸ್ಥಾನದ ಅರ್ಚಕ ರಾಕೇಶ್‌ ಭಟ್‌.
‘ನದಿ ಈ ಪ್ರಮಾಣದಲ್ಲಿ ಬತ್ತಿರುವು ದನ್ನು ಎಂದೂ ಕಂಡಿರಲಿಲ್ಲ. ಈಗ ನದಿಯನ್ನು ಯಾವುದೇ ಆತಂಕವಿಲ್ಲದೆ ದಾಟಬಹುದು. ಒಣಗಿರುವ ನದಿ ಯನ್ನು ನೋಡುತ್ತಿದ್ದರೆ ಬೇಸರ ಮೂಡು ತ್ತದೆ’ ಎನ್ನುತ್ತಾರೆ ತೀರ್ಥಹಳ್ಳಿಯ ಮಂಜುನಾಥ್‌.

Write A Comment