ಕರ್ನಾಟಕ

`ರಾಜಕಾರಣಿಗಳಿಗೆ ರಾಗದ್ವೇಷ ಬೇಡ’: ಎಸ್.ಎಂ.ಕೃಷ್ಣ

Pinterest LinkedIn Tumblr

5J2clrಬೆಂಗಳೂರು, ಮೇ ೫- ನಮ್ಮ ರಾಜಕಾರಣಿಗಳಲ್ಲಿ ಒಮ್ಮೆ ಚುನಾವಣಾ ಸಂದರ್ಭದಲ್ಲಿ ವೈರತ್ವ ಎದುರಾದರೆ ಜೀವನದುದ್ದಕ್ಕೂ ಅದನ್ನೆ ಪಾಲಿಸಿಕೊಂಡು ಬರುವ ಮನೋಭಾವನೆ ಇದ್ದು, ಇದು ಸರಿಯಲ್ಲ, ಬದಲಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ಚುನಾವಣೆ ಸಂದರ್ಭದಲ್ಲಿ ಒಂದು ಸಾರಿ ವಿರೋಧಿಗಳಾದರೆ ಅದೇ ಸೇಡು, ಮತ್ಸರವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬರುವ ಪರಿಸ್ಥಿತಿ ನಮ್ಮಲ್ಲಿದೆ. ನಮ್ಮ ಹಿಂಬಾಲಕರು ಇಂಥ ಬೆಳವಣಿಗೆಗಳಿಗೆ ಮಣ್ಣು, ಗೊಬ್ಬರ, ನೀರು ಹಾಕಿ ಪೋಷಿಸುತ್ತಾರೆ. ನಮ್ಮಂತಹವರಿಗೂ ಕೆಟ್ಟ ಘಳಿಗೆ ಎದುರಾಗಿ ಒತ್ತಡದಲ್ಲಿರುತ್ತೇವೆ. ಅಂಥ ಮಾತುಗಳಿಗೆ ಶರಣಾಗುತ್ತೇವೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್ ಅವರು ಬರೆದಿರುವ “ದಿ ಟಾಕಿಂಗ್ ಶಾಪ್” ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬ್ರಿಟನ್ ಸಂಸತ್ತಿನಲ್ಲಿ ಸಂಸದರು ಪರಸ್ಪರ ವಾಗ್ದಾಳಿ ನಡೆಸಿದರೂ ಹೊರಗೆ ಬಂದ ನಂತರ ಸ್ನೇಹಿತರಾಗಿ ಬೆರೆಯುತ್ತಾರೆ. ಅದೇ ಪರಿಸ್ಥಿತಿ ನಮ್ಮಲ್ಲೂ ಬರಬೇಕು ಎಂದರು.
ಟೀಕೆಗಳು ಸ್ವೀಕಾರ್ಹವಾಗಿರಬೇಕು. ಯಾವುದೇ ರಾಜಕಾರಣಿಗಳ ವಿರುದ್ಧ ಮಾಡುವ ಟೀಕೆಗಳು ವ್ಯಕ್ತಿಗತವಾಗಿರಬಾರದು. ಅವು ಗಂಭೀರವಾಗಿ ಸ್ವೀಕಾರ್ಹವಾಗಿರಬೇಕು. ಏಕೆಂದರೆ ರಾಜಕಾರಣಿಗಳು ಯಾರೂ ಶಾಶ್ವತ ಶತ್ರುಗಳಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ರಾಜಕಾರಣಿಗಳು ಎಲ್ಲದಕ್ಕೂ ತಾವೇ ಕಾರಣ ಎಂಬ ಭಾವನೆ ಹೊಂದಿರುತ್ತಾರೆ. ಮಳೆ ಬಂದರೂ ಅದಕ್ಕೆ ನಾನೇ ಕಾರಣ ಎನ್ನುತ್ತಾರೆ. ಬರ ಬಂದಾಗ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಇಂಥ ವೈರುದ್ಯಗಳು ನಮ್ಮಲ್ಲಿವೆ ಎಂದ ಅವರು, ನಮ್ಮ ರಾಜಕಾರಣಿಗಳು ಒಂದು ಬಾರಿ ಶಾಸಕ ಅಥವಾ ಮಂತ್ರಿಯಾದರೆ ಎಲ್ಲವೂ ನನಗೆ ಗೊತ್ತಿದೆ ಎಂಬ ಭಾವನೆಗೆ ಒಳಗಾಗುತ್ತಾರೆ. ಇದು ಕೂಡ ಸರಿಯಲ್ಲ ಎಂದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ಇನ್‌ಫೋಸಿಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳ ಸಹಕಾರ ಪಡೆಯಲಾಯಿತು. ಅದರಿಂದ ಇಂದು ವಿಶ್ವಭೂಪಟದಲ್ಲಿ ಬೆಂಗಳೂರು ಗುರುತಿಸಿಕೊಂಡಿದೆ ಎಂದರು.
ತಾವು ವಿದೇಶಾಂಗ ಸಚಿವರಾಗಿದ್ದಾಗ ಅಮೆರಿಕಾದ ಶ್ವೇತ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಅವರು ಶಿಷ್ಟಾಚಾರಗಳನ್ನು ಬದಿಗೊತ್ತಿ ತಮ್ಮನ್ನು ಭೇಟಿ ಮಾಡಿದ ಸಂದರ್ಭವನ್ನು ಮೆಲುಕು ಹಾಕಿದರು.
ವಿಶ್ವನಾಥ್ ಅವರ ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೃಷ್ಣ ಅವರು, ವಿಶ್ವನಾಥ್ ಇನ್ನು ಮುಂದೆಯೂ ಬರೆಯುವುದನ್ನು ಮುಂದುವರೆಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ವೈ.ಎಸ್.ವಿ. ದತ್ತ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನುಬಳಿಗಾರ್, ಪತ್ರಕರ್ತ ರಂಗನಾಥ್ ಉಪಸ್ಥಿತರಿದ್ದರು.

Write A Comment