ಮನೋರಂಜನೆ

ಮುತ್ತಪ್ಪ ರೈಶೂಟ್‌ ಮಾಡಬಹುದು:ರಾಮ್‌ ಗೋಪಾಲ್‌ ವರ್ಮ

Pinterest LinkedIn Tumblr

Varmaನಾನು ನಿರ್ದೇಶನ ಮಾಡುವ “ರೈ’ ಸಿನಿಮಾ ಇಷ್ಟವಾಗದೆ ಇದ್ದರೆ, ಮುತ್ತಪ್ಪ ರೈ ತಮ್ಮ ಹಳೆಯ ದಿನಗಳಿಗೆ ಜಾರಿ ನನ್ನನ್ನ ಶೂಟ್‌ ಮಾಡಬಹುದು …’ ಹಾಗಂತ ಹೇಳಿದ್ದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ. ಅವರ ಮಾತಿಗೆ ನೆರೆದಿದ್ದ ಜನರಿಂದ ಚಪ್ಪಾಳೆ, ಕೇಕೆ ಕೇಳಿ ಬಂತು. ಖುದ್ದು ಮುತ್ತಪ್ಪ ರೈ, ವರ್ಮಾ ಮಾತಿಗೆ ನಕ್ಕರು. ಇದೆಲ್ಲಾ ಆಗಿದ್ದು “ರೈ’ ಟೈಟಲ್‌ ಬಿಡುಗಡೆ ಸಮಾರಂಭದಲ್ಲಿ. ಮುತ್ತಪ್ಪ ರೈ ಅವರ ಹುಟ್ಟುಹಬ್ಬದಂದು “ರೈ’ ಚಿತ್ರದ ಶೀರ್ಷಿಕೆ ಬಿಡುಗಡೆ
ಮಾಡಲಾಗುತ್ತದೆ ಎಂದು ನೀವು ಇದೇ ಪುಟದಲ್ಲಿ ಓದಿರುತ್ತೀರಿ. ಅದರಂತೆ, ಮೇ ಒಂದರ ರೈ ಅವರ
ಹುಟ್ಟುಹಬ್ಬದಂದು, ಸುಮಾರು 150 ಅಡಿ ಎತ್ತರದ ದೊಡ್ಡ ಪರದೆಯ ಮೇಲೆ “ರೈ’ ಎಂಬ ಶೀರ್ಷಿಕೆ ಅನಾವರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ 15 ನಿಮಿಷಗಳ ಕಾಲ ಲೇಸರ್‌ ಶೋ ಸಹ ಇತ್ತು.

ಸಾವಿರಾರು ಜನ ವೀಕ್ಷಿಸಿದ ಈ ಕಾರ್ಯಕ್ರಮ ನಡೆದಿದ್ದು ಮುತ್ತಪ್ಪ ರೈ ಅವರ ಎಸ್ಟೇಟ್‌ ಬಳಿ. ಜೊತೆಗೆ ಯಶ್‌, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ರಾಮ್‌ ಗೋಪಾಲ್‌ ವರ್ಮ, ನಿರ್ಮಾಪಕ ಸಿ.ಆರ್‌. ಮನೋಹರ್‌, ವಿವೇಕ್‌ ಒಬೇರಾಯ್‌ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲೇಸರ್‌ ಶೋ, ಟೈಟಲ್‌ ಬಿಡುಗಡೆ ಮುಂತಾದ ಕಾರ್ಯಕ್ರಮಗಳ ನಂತರ ಒಬ್ಬೊಬ್ಬರೇ ಮಾತಾಡಿದರು.

“ನಾನು ನಿರ್ದೇಶನ ಮಾಡುವ “ರೈ’ ಸಿನಿಮಾ ಇಷ್ಟವಾಗದೆ ಇದ್ದರೆ, ಮುತ್ತಪ್ಪ ರೈ ತಮ್ಮ ಹಳೆಯ ದಿನಗಳಿಗೆ ಜಾರಿ ನನ್ನನ್ನ ಶೂಟ್‌ ಮಾಡಬಹುದು …’ ಎಂದು ರಾಮ್‌ ಗೋಪಾಲ್‌ ವರ್ಮ ಹೇಳಿದ್ದು ಇದೇ ಸಂದರ್ಭದಲ್ಲಿ. “ಮುಹೂರ್ತದ ದಿನವೇ ಚಿತ್ರದ ಕ್ಲೈಮ್ಯಾಕ್ಸ್‌ ಸಹ ಆಗಿದೆ. ಇಲ್ಲಿ ಮುತ್ತಪ್ಪ ರೈ ಅವರ ಆರಂಭದ ದಿನಗಳು ಹಾಗೂ ಸಾಮಾಜಿಕ ಕಳಕಳಿಯ ಕ್ಷಣಗಳನ್ನು ನೋಡಬಹುದು. ಭೂಗತ ಲೋಕದ ಜೊತೆಗೆ ಪ್ರೀತಿ-ಪ್ರೇಮದ ವಿಚಾರ ಹಾಗೂ ಸಮಾಜದ ದೊಡ್ಡ ಬದಲಾವಣೆಯ ಕುರಿತು ಈ ಸಿನಿಮಾದಲ್ಲಿ ನೋಡಬಹುದು. ಈ ರೀತಿಯ ಸಿನಿಮಾ ಮಾಡಲು ನನಗೆ ಈ ಹಿಂದೆ ಅವಕಾಶ ಸಿಕ್ಕಿರಲಿಲ್ಲ’ ಎಂದು ಹೇಳಿದರು.
-ಉದಯವಾಣಿ

Write A Comment