ಅಂತರಾಷ್ಟ್ರೀಯ

ಅಣಕು ಪ್ರದರ್ಶನ : ಒಬಾಮಾ ನಿವೃತ್ತಿ ಜೀವನ ಹೇಗಿರುತ್ತೆ ಗೊತ್ತಾ?

Pinterest LinkedIn Tumblr

obamaಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಇನ್ನು 8 ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದಾರೆ. ಆದರೆ, ಅವರ ನಿವೃತ್ತಿ ಬದುಕು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ. ಹೀಗಾಗಿ ತಮ್ಮ ನಿವೃತ್ತಿ ಜೀವನ ಹೀಗಿರಬಹುದು ಎಂದು ಕಲ್ಪಿಸಿಕೊಂಡು ವಿಡಿಯೋವೊಂದನ್ನು ಒಬಾಮಾ ಅವರೇ ಸಿದ್ಧಪಡಿಸಿದ್ದಾರೆ. ಶನಿವಾರ ರಾತ್ರಿ ಶ್ವೇತ ಭವನದಲ್ಲಿ ಆಯೋಜಿಸಿದ್ದ ಔತಣ ಸಮಾರಂಭದಲ್ಲಿ ವಿಡಿಯೋವನ್ನು ಒಬಾಮಾ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡಿದೆ.

ವಿಡಿಯೋದಲ್ಲಿ ಹೀಗಿದೆ
ನಿವೃತ್ತಿ ನಂತರ ಒಬಾಮಾ ಇನ್ನೂ ಎರಡು ವರ್ಷ ವಾಷಿಂಗ್ಟನ್‌ ಡಿ.ಸಿ.ಯಲ್ಲಿಯೇ ಇರುತ್ತಾರೆ ಎಂದು ಟೀವಿ ಚಾನಲ್‌ವೊಂದು ಪ್ರಸಾರ ಮಾಡುತ್ತಿದ್ದ ಸುದ್ದಿಯನ್ನು ಒಬಾಮಾ ವೀಕ್ಷಿಸುತ್ತಾರೆ. ಅದನ್ನು ನೋಡಿ ಎರಡು ವರ್ಷ ವಾಷಿಂಗ್ಟನ್‌ ಡಿಸಿಯಲ್ಲಿ ಇದ್ದು ನಾನೇನು ಮಾಡೋದಿದೆ ಎಂದು ಒಬಾಮಾ ಶಪಿಸುತ್ತಾರೆ. ಬಳಿಕ ಉಪಾಧ್ಯಕ್ಷ ಜೊ ಬಿಡನ್‌ರ ಸಲಹೆ ಕೇಳುತ್ತಾರೆ. “ನಾನು ಪ್ರತಿದಿನ ಗಾಲ್ಫ್ ಆಡುತ್ತಾ ಇರಲು ಸಾಧ್ಯವಿಲ್ಲ. ಬೇರೆ ಏನಾದರೂ ಇದ್ದರೆ ಹೇಳಿ’ ಎಂದು ಹೇಳುತ್ತಾರೆ. ಅದಕ್ಕೆ ಬಿಡನ್‌, “ನೀವು ಕಾರಿನ ಲೈಸನ್ಸ್‌ ಮಾಡಿಸಿಕೊಳ್ಳಿ ಎಲ್ಲಿಯಾದರೂ ಸುತ್ತಾಡಬಹುದು ಅಥವಾ ನಿಮಗೆ ಕ್ರೀಡೆಯ ಬಗ್ಗೆ ಆಸಕ್ತಿ ಇದೆ. ಯಾವುದಾದರೂ ತಂಡಕ್ಕೆ ಕೋಚ್‌ ಆಗಿ ಸೇರಿಕೊಳ್ಳಿ’ ಎಂಬ ಸಲಹೆ ಕೊಡುತ್ತಾರೆ. ಒಬಾಮಾ ಕೂಡಲೇ ವಾಷಿಂಗ್ಟನ್‌ ವಿಜಾರ್ಡ್‌ಗೆ ಫೋನ್‌ ಮಾಡಿ, “ನಿಮಗೆ ಕೋಚ್‌ ಒಬ್ಬರ ಅವಶ್ಯಕತೆ ಇದೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ನಾನು ನನ್ನ ಮಗಳಿಗೆ ಹಲವಾರು ಸಲ ಕೋಚಿಂಗ್‌ಕೊಟ್ಟಿದ್ದೇನೆ’ ಎಂದು ಹೇಳುತ್ತಾರೆ. ಅಲ್ಲಿಗೆ ಫೋನ್‌ ಕರೆ ಕಟ್‌ ಆಗುತ್ತದೆ. ಬಳಿಕ ಒಬಾಮಾ ಡ್ರೆ„ವಿಂಗ್‌ ಲೈಸೆನ್ಸ್‌ ಮಾಡಿಸಲು ಹೋಗುತ್ತಾರೆ. ಅಲ್ಲಿದ್ದ ಮಹಿಳೆಯೊಬ್ಬಳ ಮುಂದೆ “ನಾನು ಬರಾಕ್‌ ಹುಸೇನ್‌ ಒಬಾಮಾ. ನನಗೆ ಡ್ರೆ„ವಿಂಗ್‌ ಲೈಸೆನ್ಸ್‌ ಬೇಕಾಗಿದೆ’ ಎಂದು ಹೇಳುತ್ತಾರೆ. ಅದಕ್ಕೆ ಆಕೆ ನಿಮ್ಮ ಜನ್ಮದಿನಾಂಕ ಕೊಡಿ ಎಂದು ಆಕೆ ಕೇಳುತ್ತಾಳೆ. ಒಬಾಮಾ ಯಾವುದೋ ಒಂದು ಲೆಟರ್‌ ತೋರಿಸುತ್ತಾರೆ. ನಂತರದಲ್ಲಿ ಒಬಾಮಾ ಮಿಷೆಲ್‌ ಒಬಾಮಾರ ಫೋನ್‌ ಕೈಗೆತ್ತಿಕೊಂಡು ಸ್ನಾಪ್‌ ಚಾಟ್‌ನಲ್ಲಿ ತೊಡಗುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮಿಷೆಲ್‌, ಒಬಾಮಾರಿಂದ ಫೋನ್‌ ಕಸಿದುಕೊಳ್ಳುತ್ತಾರೆ. ಕೊನೆಗೆ ಒಬಾಮಾ, ನಿವೃತ್ತ ಸ್ಪೀಕರ್‌ ಜಾನ್‌ ಬೋನರ್‌ ಅವರನ್ನು ಮಾತನಾಡಿಸುತ್ತಾರೆ. ಅವರು ನಿವೃತ್ತಿ ಜೀವನ ಇರುವುದು ವಿಶ್ರಾಂತಿ ಪಡೆದುಕೊಳ್ಳಲು. ನೀವು ಮೊದಲು ಲಿಂಕ್ಡ್ಇನ್‌ನಲ್ಲಿ ಸಂದೇಶವನ್ನು ಕಳುಹಿಸುವುದನ್ನು ನಿಲ್ಲಿಸಿ ಎಂದು ಸಲಹೆಕೊಡುತ್ತಾರೆ.
-ಉದಯವಾಣಿ

Write A Comment