ಕನ್ನಡದ ನಟಿ ಶ್ರಾವ್ಯಾ ಮತ್ತೂಂದು ಚಿತ್ರ ಒಪ್ಪಿಕೊಂಡಿದ್ದಾರೆ. “ರೋಸ್’ ಬಳಿಕ ಕನ್ನಡದಲ್ಲೆಲ್ಲೂ ಸುದ್ದಿಯಾಗದ
ಶ್ರಾವ್ಯಾ, ಇತ್ತೀಚೆಗೆ ತೆಲುಗಿನ “ವಾನಾವಿಲ್ಲು’ ಎಂಬ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಅದಾದ ಬಳಿಕ ಅಲ್ಲೇ ಬಿಜಿಯಾಗಿ ಬಿಡುತ್ತಾರೇನೋ ಎಂಬ ಪ್ರಶ್ನೆಗಳು ತೂರಿಬಂದಿದ್ದವು. ಆದರೆ, ಶ್ರಾವ್ಯಾ ಮಾತ್ರ ಹಾಗೆ ಮಾಡದೆ, ಪುನಃ ಕನ್ನಡದತ್ತ ಮುಖ ಮಾಡಿದ್ದಾರೆ.
ಈಗ ಶ್ರಾವ್ಯಾ ಹೊಸಬರ ಕನ್ನಡ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಆ ಚಿತ್ರದಲ್ಲಿ ಶ್ರಾವ್ಯಾಗೆ ನಾಯಕರಾಗಿ
ವಿಜಯರಾಘವೇಂದ್ರ ನಟಿಸುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಯದಾ ಯದಾಹೀ “ಧರ್ಮಸ್ಯ’ ಎಂದು ನಾಮಕರಣ ಮಾಡಲಾಗಿದೆ.
ಶುಕ್ರವಾರ ನಡೆದ “ರಾಮನವಮಿ’ ಹಬ್ಬದ ದಿನದಂದೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ. ಈ ಚಿತ್ರದ ಶೀರ್ಷಿಕೆ ನೋಡಿದರೆ ಇದೊಂದು ಪಕ್ಕಾ ಪ್ರೀತಿಯ ತಿಲ್ಲಾನ ಇರುವ ಅಥವಾ ಆ್ಯಕ್ಷನ್ಮಯ ಸಿನಿಮಾ ಎಂಬುದು ಗೊತ್ತಾಗುತ್ತೆ. ಅದರಲ್ಲೂ, ಚಿತ್ರದ ಅಡಿಬರಹವಾಗಿರುವ “ಮೈ ಹೂ ಡಾನ್’ ಎಂಬುದನ್ನು ಓದಿದರಂತೂ
ಇದು ಪಕ್ಕಾ ಆ್ಯಕ್ಷನ್ ಚಿತ್ರ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಶ್ರಾವ್ಯಾ ಮತ್ತು ವಿಜಯರಾಘವೇಂದ್ರ ಇಬ್ಬರು ಮೊದಲ ಸಲ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಇದು ಅಕ್ಷರ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದ್ದು, ವಿರಾಜ್ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಅಕ್ಷರ್ ವಾದ್ವಾನಿ ನಿರ್ಮಾಪಕರಾಗಿದ್ದು, ವಿಶಾಲ್ ತಿವಾರಿ ಸಹ ನಿರ್ಮಾಪಕರಾಗಿದ್ದಾರೆ.
ಇತ್ತೀಚೆಗೆ ನಡೆದ ಮುಹೂರ್ತದ ವೇಳೆ ನಟ ವಿನಯ್ರಾಜ್ಕುಮಾರ್ ಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಚಿತ್ರದಲ್ಲಿ
ರವಿಶಂಕರ್, ಸಾಧುಕೋಕಿಲ ಹಾಗು ಸುಧಾಬೆಳವಾಡಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಸದ್ಯಕ್ಕೆ ವಿಜಯ
ರಾಘವೇಂದ್ರ “ಧರ್ಮಸ್ಯ’ ಚಿತ್ರದಲ್ಲಿ ಬಿಜಿ. ಉಳಿದಂತೆ ಅವರ ನಿರ್ದೇಶನದ “ಕಿಸ್ಮತ್’ ಚಿತ್ರ ಈಗಾಗಲೇ
ಪೂರ್ಣಗೊಂಡಿದ್ದು, ಪ್ರೇಕ್ಷಕರ ಮುಂದೆ ಬರಬೇಕಿದೆ.
-ಉದಯವಾಣಿ