ಮನೋರಂಜನೆ

ಟೈಟಲ್‌ ಗೊಂದಲಕ್ಕೆ ತೆರೆ ಸುದೀಪ್‌ ಈಗ ಕೋಟಿಗೊಬ್ಬ 2

Pinterest LinkedIn Tumblr

kotigobbaಸುದೀಪ್‌ ನಾಯಕರಾಗಿರುವ ಕೆ.ಎಸ್‌.ರವಿಕುಮಾರ್‌ ನಿರ್ದೇಶನದ ಚಿತ್ರದ ಟೈಟಲ್‌ ಏನು? – ಈ ಪ್ರಶ್ನೆಯನ್ನು ನಿರ್ಮಾಪಕ ಸೂರಪ್ಪ ಬಾಬು ಅವರಲ್ಲಿ ಕೇಳಿದರೆ “ಕೋಟಿಗೊಬ್ಬ’ ಎಂದು ಹೇಳುತ್ತಿದ್ದರು. “ಕೋಟಿಗೊಬ್ಬ-2′ ಎಂದರೆ ಖಂಡಿತಾ ಇಲ್ಲ, ಇದು “ಕೋಟಿಗೊಬ್ಬ’ ಎನ್ನುತ್ತಿದ್ದರು. ಏಕೆಂದರೆ ವಿಷ್ಣುವರ್ಧನ್‌ ಅವರ “ಕೋಟಿಗೊಬ್ಬ’ ಚಿತ್ರವನ್ನು
ನಿರ್ಮಿಸಿದ್ದು ಸೂರಪ್ಪ ಬಾಬು. ಹಾಗಾಗಿ ಆ ಟೈಟಲ್‌ ಕೂಡಾ ಸೂರಪ್ಪ ಬಾಬು ಅವರಲ್ಲೇ ಇತ್ತು. ಈಗ ಸುದೀಪ್‌ ನಾಯಕರಾಗಿರುವ ಚಿತ್ರಕ್ಕೆ “ಕೋಟಿಗೊಬ್ಬ’ ಎಂದು ಹೆಸರಿಡಬೇಕೆಂಬುದು ಸೂರಪ್ಪ ಬಾಬು ಅವರ ಆಸೆಯಾಗಿತ್ತು.
ಆದರೆ ಈಗ ಆ ಚಿತ್ರಕ್ಕೆ “ಕೋಟಿಗೊಬ್ಬ-2′ ಎಂಬ ಟೈಟಲ್‌ ಫೈನಲ್‌ ಆಗಿದೆ.

ಅಷ್ಟಕ್ಕೂ “ಕೋಟಿಗೊಬ್ಬ-2′ ಟೈಟಲ್‌ ಫೈನಲ್‌ ಆಗಲು ಕಾರಣ ಯಾರು ಎಂದರೆ ಸುದೀಪ್‌. ಸೂರಪ್ಪ ಬಾಬು ಅವರು “ಕೋಟಿಗೊಬ್ಬ’ ಎಂದು ಇಡುವುದಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದಾಗ ಸುದೀಪ್‌ ಮಾತ್ರ ತಾನು “ಕೋಟಿಗೊಬ್ಬ’ ಆಗಲ್ಲ, “ಕೋಟಿಗೊಬ್ಬ-2′ ಆಗುತ್ತೇನೆ ಎನ್ನುವ ಮೂಲಕ ಸೂರಪ್ಪ ಬಾಬು ಅವರು ಕೂಡಾ “ಕೋಟಿಗೊಬ್ಬ-2’ಗೆ
ಒಪ್ಪಿದ್ದಾರೆ. ವಿಷ್ಣುವರ್ಧನ್‌ ಅವರ “ಕೋಟಿಗೊಬ್ಬ’ ಚಿತ್ರ ದೊಡ್ಡ ಹಿಟ್‌ ಆಗಿತ್ತು. ಕೋಟಿಗೊಬ್ಬ ಏನಿದ್ದರೂ ಅದು
ವಿಷ್ಣುವರ್ಧನ್‌. ಆ ಟೈಟಲ್‌ ಅನ್ನು ನಾನು ಪಡೆಯಲು ಸಾಧ್ಯವಿಲ್ಲ. ಅದು ಅವರಿಗೆ ಸರಿ ಹೊಂದುತ್ತದೆ. ನಾನು
“ಕೋಟಿಗೊಬ್ಬ-2′ ಆಗಿ ಎರಡನೇ ಸ್ಥಾನದಲ್ಲಿ ಇರಲು ಇಚ್ಛಿಸುತ್ತೇನೆ. ಅವರೇ “ಕೋಟಿಗೊಬ್ಬ’ ಎನ್ನುವ ಮೂಲಕ ಸುದೀಪ್‌, ವಿಷ್ಣುವರ್ಧನ್‌ ಮೇಲಿನ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಹಾಗಾಗಿ ಈಗ ಚಿತ್ರದ ಟೈಟಲ್‌ ಬಗ್ಗೆ ಇದ್ದ ಗೊಂದಲ ಬಗೆಹರಿದಿದ್ದು, ಮುಂದಿನ ದಿನಗಳಿಂದ “ಕೋಟಿಗೊಬ್ಬ-2′ ಚಿತ್ರದ ಫೋಸ್ಟರ್‌ ರಾರಾಜಿಸಲಿವೆ. ಈ ಹಿಂದೆ ಸುದೀಪ್‌ “ವಿಷ್ಣುವರ್ಧನ’ ಎಂಬ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಕೂಡಾ ಹಿಟ್‌ ಆಗಿತ್ತು.

ಈಗಾಗಲೇ “ಕೋಟಿಗೊಬ್ಬ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇವೆ. ಏಪ್ರಿಲ್‌ 25 ರಿಂದ ಹಾಡುಗಳ ಚಿತ್ರೀಕರಣ ಆರಂಭವಾಗಲಿದ್ದು, ನಾಯಕ-ನಾಯಕಿಯ
ಡ್ಯುಯೆಟ್‌ ಸಾಂಗ್‌ ಅಹಮದಾಬಾದ್‌ನಲ್ಲಿ ಹಾಗೂ ನಾಯಕನ ಇಂಟ್ರೋಡಕ್ಷನ್‌ ಸಾಂಗ್‌ ಅನ್ನು ಮುಂಬೈನಲ್ಲಿ ಚಿತ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ. “ಕೋಟಿಗೊಬ್ಬ-2′ ತಮಿಳಿನಲ್ಲೂ ತಯಾರಾಗುತ್ತಿದ್ದು, “ಮುಡಿಂಜಾ ಇವನ ಪಿಡಿ’ ಎಂಬ ಟೈಟಲ್‌ನಲ್ಲಿ ಬರುತ್ತಿದೆ.
-ಉದಯವಾಣಿ

Write A Comment