ಮನೋರಂಜನೆ

ಮಾಲಾಶ್ರೀ ವಾಪಸ್‌ ರ್ರೀ

Pinterest LinkedIn Tumblr

Malashri--600ಗಂಗಾ ನಂತರ ಮಾಲಾಶ್ರೀ ಯಾವ ಸಿನಿಮಾ ಮಾಡುತ್ತಿದ್ದಾರೆ? ಅವರ ಮುಂದಿನ ಸಿನಿಮಾ ಯಾವುದು? ಸಹಜವಾಗಿಯೇ ಮಾಲಾಶ್ರೀ ಅಭಿಮಾನಿಗಳಲ್ಲಿ ಇಂತಹ ಪ್ರಶ್ನೆ ಇದೆ. ಏಕೆಂದರೆ, ಒಂದು ಸಿನಿಮಾ ಮುಗಿಯುತ್ತಿದ್ದಂತೆ ಮಾಲಾಶ್ರೀಯವರ ಮತ್ತೂಂದು ಸಿನಿಮಾ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ‘ಗಂಗಾ’ ನಂತರ ಯಾವುದೇ ಸಿನಿಮಾ ಅನೌನ್ಸ್‌ ಆಗಿರಲಿಲ್ಲ. ಈಗ ಎರಡು ಹೊಸ ಸಿನಿಮಾಗಳೊಂದಿಗೆ ಮಾಲಾಶ್ರೀ ವಾಪಾಸ್‌ ಬರುತ್ತಿದ್ದಾರೆ. ‘ಉಪ್ಪು ಹುಳಿ ಖಾರ’ ಹಾಗೂ ‘ಜಾನ್‌ ಜಾನಿ ಜನಾರ್ದನ್‌’ ಚಿತ್ರಗಳಲ್ಲಿ ಮಾಲಾಶ್ರೀ ನಟಿಸುತ್ತಿದ್ದಾರೆ. ಹಾಗಂತ ಇದು ಮಾಲಾಶ್ರೀ ಸೋಲೋ ಹೀರೋಯಿನ್‌ ಆಗಿ ನಟಿಸುತ್ತಿರುವ ಸಿನಿಮಾವಲ್ಲ.

ಇತ್ತೀಚಿನ ವರ್ಷಗಳಲ್ಲಿನ ಬಹುತೇಕ ಸಿನಿಮಾಗಳಲ್ಲಿ ಮಾಲಾಶ್ರೀಯವರೇ ಹೀರೋ-ಹೀರೋಯಿನ್‌. ಆ್ಯಕ್ಷನ್‌ ಚಿತ್ರಗಳ ಮೂಲಕ ತಮ್ಮ ಖದರ್‌ ತೋರಿಸಿರುವ ಮಾಲಾಶ್ರೀಗೆ ಅವರದೇ ಆದ ದೊಡ್ಡ ಅಭಿಮಾನಿ ಬಳಗವೂ ಇದೆ. ಇಂತಿಪ್ಪ ಮಾಲಾಶ್ರೀಯವರು ಈ ಬಾರಿ ಎರಡು ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿ ಸಂಪೂರ್ಣ ಹೊಸಬರೇ ನಟಿಸುತ್ತಿದ್ದಾರೆ. ಇಲ್ಲಿ ಮೂವರು ಹುಡುಗರು, ಮೂವರು ಹುಡುಗಿಯರು ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ಹೊಸಬರೇ. ಈ ಚಿತ್ರದಲ್ಲಿ ಮಾಲಾಶ್ರೀಗೆ ಪ್ರಮುಖ ಪಾತ್ರವಿದೆ. ಇದೊಂದು ತಮಾಷೆಯಾಗಿ ಸಾಗುವ ಸಿನಿಮಾವಾಗಿದ್ದು, ಚಿತ್ರದಲ್ಲಿ ಮಾಲಾಶ್ರೀಯವರು ಲಾಯರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ.

ಇನ್ನು, ಮಲಯಾಳಂನ ‘ಅಮರ್‌ ಅಕ್ಬರ್‌ ಆಂಟೋನಿ’ ಚಿತ್ರದ ರೀಮೇಕ್‌ ಆದ ‘ಜಾನ್‌ ಜಾನಿ ಜನಾರ್ದನ್‌’ ಸಿನಿಮಾದಲ್ಲೂ ಮಾಲಾಶ್ರೀಯವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ಮಾಹಿತಿಯಿಲ್ಲ.

‘ಜಾನ್‌ ಜಾನಿ ಜನಾರ್ದನ್‌’ ಒಂದು ಮಲ್ಟಿಸ್ಟಾರ್‌ ಸಿನಿಮಾವಾಗಿದ್ದು, ಅಜೇಯ್‌ ರಾವ್‌, ಯೋಗೇಶ್‌ ಹಾಗೂ ಕೃಷ್ಣ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀಯವರಿಗೂ ಪ್ರಮುಖ ಪಾತ್ರವಿದೆ. ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡುವ ಮಾಲಾಶ್ರೀ, ‘ಹೌದು, ಎರಡು ಸಿನಿಮಾಗಳಲ್ಲಿ ನಾನು ನಟಿಸುವುದು ಬಹುತೇಕ ಅಂತಿಮವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ’ ಎಂದಷ್ಟೇ ಹೇಳುತ್ತಾರೆ.

ಇತ್ತೀಚೆಗೆ ಆ್ಯಕ್ಷನ್‌ ಸಿನಿಮಾಗಳಲ್ಲೇ ಗುರುತಿಸಿಕೊಂಡಿರುವ ಮಾಲಾಶ್ರೀಯವರಿಗೆ ಈ ಎರಡೂ ಸಿನಿಮಾಗಳಲ್ಲೂ ಭಿನ್ನ ಪಾತ್ರಗಳು ಸಿಕ್ಕಿವೆ ಎನ್ನಲಾಗಿದೆ. ಅದೇನೇ ಆದರೂ ಎರಡು ಸಿನಿಮಾಗಳನ್ನು ಮಾಲಾಶ್ರೀ ಒಪ್ಪಿಕೊಂಡಿರೋದು ಅವರ ಅಭಿಮಾನಿಗಳಿಗೆ ಖುಷಿ ನೀಡಬಹುದು.
-ಉದಯವಾಣಿ

Write A Comment