ಕನ್ನಡದಲ್ಲಿ ಈಗಂತೂ ಮಲ್ಟಿಸ್ಟಾರ್ ಸಿನಿಮಾಗಳಿಗೆ ಬರವಿಲ್ಲ. ಈಗೀಗ ಅಂತಹ ಬೆಳವಣಿಗೆಗಳು ಹೆಚ್ಚುತ್ತಲೇ ಇವೆ. “ಕಲಿ’ ಚಿತ್ರದಲ್ಲಿ ಸುದೀಪ್ ಮತ್ತು ಶಿವರಾಜ್ಕುಮಾರ್ ನಟಿಸುತ್ತಿದ್ದಾರೆ. “ಮುಕುಂದ ಮುರಾರಿ’ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್
ಜತೆಗೂಡಿದ್ದಾರೆ. ಇನ್ನು, “ಚೌಕ’ ಚಿತ್ರದಲ್ಲಿ ಪ್ರೇಮ್, ವಿಜಯರಾಘವೇಂದ್ರ, ಪ್ರಜ್ವಲ್ ಹಾಗು ದಿಗಂತ್ ಅಭಿನಯಿಸುತ್ತಿದ್ದಾರೆ. ಈಗ ಅವುಗಳ ಸಾಲಿಗೆ ಮತ್ತೂಂದು ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರುತ್ತಿದೆ.
ಅದು “ಜಾನ್ ಜಾನಿ ಜನಾರ್ಧನ್’. ಹೌದು, ಈ ಚಿತ್ರದ ಮೂಲಕ ಅಜೇಯ್ರಾವ್, ಯೋಗಿ ಮತ್ತು ಮದರಂಗಿ ಕೃಷ್ಣ ಜತೆಯಾಗಿ
ನಟಿಸುತ್ತಿದ್ದಾರೆ. ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶಿಸುತ್ತಿದ್ದು, ಎಂ.ಆರ್.ಪಿಕ್ಚರ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗುತ್ತಿದೆ.
ಇದು ಮಲಯಾಳಂನ “ಅಮರ್ ಅಕºರ್ ಆಂಟೋನಿ’ ಚಿತ್ರದ ರಿಮೇಕ್.ಸದ್ಯಕ್ಕೆ ಸಿನಿಮಾದ ಟೈಟಲ್ ಹಾಗು ಹೀರೋಗಳಷ್ಟೇ ಪಕ್ಕಾ ಆಗಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತವಿದೆ. ಉಳಿದಂತೆ ಈ ಮೂವರು ಹೀರೋಗಳಿಗೆ ನಾಯಕಿಯರು ಯಾರು, ಕ್ಯಾಮೆರಾ ಯಾರು ಹಿಡಿಯುತ್ತಿದ್ದಾರೆ. ಎಲ್ಲೆಲ್ಲಿ ಶೂಟಿಂಗು, ಇನ್ಯಾವ ಕಲಾವಿದರ ದಂಡು ಇಲ್ಲಿರಲಿದೆ ಎಂಬಿತ್ಯಾದಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ “ಜಾನ್ ಜಾನಿ ಜನಾರ್ಧನ್’ ಚಿತ್ರಕ್ಕೆ ಚಾಲನೆ ಸಿಗಲಿದೆ.
ಈಗಾಗಲೇ “ಅಮರ್ ಅಕºರ್ ಆಂಟೋನಿ’ ಹೆಸರಿನ ಚಿತ್ರ ಕನ್ನಡದಲ್ಲಿ ಮೂಡಿಬಂದಿತ್ತು. 1998 ರಲ್ಲಿ ಥ್ರಿಲ್ಲರ್ ಮಂಜು, ವಿನೋದ್ ಆಳ್ವ ಹಾಗು ಅರುಣ್ ಪಾಂಡ್ಯನ್ ಅಭಿನಯದಲ್ಲಿ ಮೂಡಿಬಂದಿದ್ದ ಚಿತ್ರ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ 1977 ರಲ್ಲಿ
ಬಾಲಿವುಡ್ನಲ್ಲಿ “ಅಮರ್ ಅಕºರ್ ಆಂಟೋನಿ’ ಹೆಸರಿನ ಹಿಂದಿ ಚಿತ್ರ ಕೂಡ ತೆರೆಕಂಡಿತ್ತು.
ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಹಾಗು ರಿಷಿಕಪೂರ್ ಅಭಿನಯದ ಹಿಂದಿ ಚಿತ್ರ ಆಗಿನ ಕಾಲದಲ್ಲಿ ಸೂಪರ್ಡೂಪರ್ ಹಿಟ್ ಆಗಿತ್ತು. ಈಗ ಕನ್ನಡದಲ್ಲಿ “ಜಾನ್ ಜಾನಿ ಜನಾರ್ಧನ್’ ಸೆಟ್ಟೇರುತ್ತಿದೆ. ಇಲ್ಲೂ ಕೂಡ ಅಜೇಯ್ ರಾವ್, ಯೋಗಿ ಹಾಗು ಮದರಂಗಿ
ಕೃಷ್ಣ ನಟಿಸುತ್ತಿದ್ದಾರೆ. ಇಲ್ಲಿ ಅಜಯ್ ರಾವ್ ಜನಾರ್ಧನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾನಿ ಮತ್ತು ಜಾನ್ ಯಾರು ಅನ್ನೋದು ಗೊತ್ತಿಲ್ಲ. ಸದ್ಯಕ್ಕೆ ಸಿನಿಮಾ ಸೆಟ್ಟೇರಲಿದೆ ಎಂಬುದಷ್ಟೇ ಈ ಹೊತ್ತಿನ ಸುದ್ದಿ.
ಅಜೇಯ್ರಾವ್ ಅಭಿನಯದ ಯಾವ ಚಿತ್ರವೂ ಈಗ ಇಲ್ಲ. ಉಳಿದಂತೆ, ಯೋಗಿ ಅಭಿನಯದ “ಝಂಡ’, “ಸ್ನೇಕ್ ನಾಗ’ ಚಿತ್ರ ತೆರೆಕಾಣಬೇಕಿದೆ. ಅವುಗಳ ಸುದ್ದಿಯಂತೂ ಈಗಿಲ್ಲ. ಹಾಗೆಯೇ ಮದರಂಗಿ ಕೃಷ್ಣ ಅಭಿನಯದ “ಮುಂಬೈ’ ಚಿತ್ರ ಮುಗಿದಿದ್ದರೂ ಬಿಡುಗಡೆ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಈಗ ಮೂವರು ನಟಿಸುತ್ತಿದ್ದಾರೆ.
-ಉದಯವಾಣಿ