ಮನೋರಂಜನೆ

ಗಂಭೀರ ಕಥೆಗೆ ಕಾಮಿಡಿ ಸ್ಪರ್ಶ

Pinterest LinkedIn Tumblr

9ಚಿತ್ರ: ಜೈ ಮಾರುತಿ 800
„ ನಿರ್ಮಾಣ: ಮಂಜುಳ ರಮೇಶ್‌
„ ನಿರ್ದೇಶನ; ಹರ್ಷ
„ ತಾರಾಗಣ: ಶರಣ್‌, ಶೃತಿ ಹರಿಹರನ್‌, ಶುಭಾ ಪೂಂಜಾ, ಮಧುಗುರುಸ್ವಾಮಿ,ಲೋಕಿ, ಸಾಧು ಕೋಕಿಲ, ಅರುಣ್‌ ಸಾಗರ್‌ ಮತ್ತಿತರರು.

ಇನ್ನೇನು ಆತನ ಕಥೆ ಮುಗಿಯಿತೆಂದು ಎಲ್ಲರೂ ಭಾವಿಸುತ್ತಾರೆ. ಇಷ್ಟೊತ್ತು ಹೇಗೋ ಬದುಕಿಕೊಂಡ, ಈಗ ಬೀದಿ ಹೆಣವಾಗಿ ಸಾಯುತ್ತಾನೆಂದು ಊರ ಜನರೆಲ್ಲರೂ ಮರುಕದಿಂದ ನೋಡುತ್ತಾರೆ. ಆದರೆ, ಆ ಕಟುಕನಿಂದ ಬಿಡಿಸಿ, ಜೀವ ಉಳಿಸುವ ಧೈರ್ಯ ಮಾತ್ರ ಯಾರಿಗೂ ಇರೋದಿಲ್ಲ. ಆದರೆ, ಅಲ್ಲಿ ನಡೆಯಬಾರದ ಘಟನೆಯೊಂದು ನಡೆಯುತ್ತದೆ. ಅಂದುಕೊಂಡದ್ದು ತಲೆಕೆಳಗಾಗುತ್ತದೆ. ಊರ ಜನ ದಂಗಾಗಿ ನೋಡುತ್ತಾರೆ. ಅಷ್ಟಕ್ಕೂ ಅಂಥದ್ದೇನು ಪವಾಡ ನಡೆಯಿತೆಂದು ಹೇಳುವ ಬದಲು ನೋಡೋದೇ ವಾಸಿ. “ಜೈ ಮಾರುತಿ 800′ ಚಿತ್ರ ಮೇಲ್ನೋಟಕ್ಕೆ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ. ಸಾಮಾನ್ಯವಾಗಿ ಕಾಮಿಡಿ ಸಿನಿಮಾಗಳೆಂದರೆ ಕಥೆಗಿಂತ ಡೈಲಾಗ್‌ ಹಾಗೂ ಸನ್ನಿವೇಶಗಳಷ್ಟೇ ಮುಖ್ಯವಾಗುತ್ತದೆ.

ಆದರೆ, ಹರ್ಷ ಮಾತ್ರ ಒಂದು ಗಟ್ಟಿ ಕಥೆಯೊಂದಿಗೆ ಕಾಮಿಡಿ ಸಿನಿಮಾ ಮಾಡಿದ್ದಾರೆ. ಆ ಕಥೆಯಲ್ಲಿ ಗಟ್ಟಿತನವಿದೆ, ಅದಕ್ಕೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಇಂತಿಪ್ಪ ಕಥೆಯನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಹರ್ಷ. ಹಾಗೆ ನೋಡಿದರೆ ಇದೇ ಚಿತ್ರದ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ ಎಂದರೆ ತಪ್ಪಲ್ಲ. ಏಕೆಂದರೆ ಇಲ್ಲಿನ ಕಥೆ ಹಾಗೂ ಅದಕ್ಕಿರುವ ಕ್ಯಾನ್‌ವಾಸ್‌ ದೊಡ್ಡದು. ತುಂಬಾ ಸೀರಿಯಸ್‌ ಅಂಶಗಳಿರುವ ಕಥೆಯಿದು. ಇದನ್ನು ಕಾಮಿಡಿಯಾಗಿ, ಕಾಮಿಡಿ ಹೀರೋ ಮೂಲಕ ಹೇಳಲು ಹೊರಟಿರುವ ಹರ್ಷ ಪ್ರಯತ್ನವನ್ನು ಮೆಚ್ಚಲೇಬೇಕು. ಜೊತೆಗೆ ಕಾಮಿಡಿ ಸಿನಿಮಾದಲ್ಲಿ ಇಷ್ಟು ಗಂಭೀರ ಕಥೆಯನ್ನು ಸುಲಭವಾಗಿ ಹೇಳುವುದನ್ನು ಅರಗಿಸಿಕೊಳ್ಳುವುದು ಕೂಡಾ ಕಷ್ಟದ ವಿಷಯವೇ.ಆದರೆ, ಹರ್ಷ ಮಾತ್ರ ಮೊದಲ ಬಾರಿಗೆ ಕಾಮಿಡಿ ಸಿನಿಮಾ ಮಾಡಲು ಹೊರಟಿದ್ದರಿಂದ ಅವೆರಡನ್ನೂ ಬ್ಯಾಲೆನ್ಸ್‌ ಮಾಡಲು ಪ್ರಯತ್ನಿಸಿರುವುದು ಇಡೀ ಸಿನಿಮಾದುದ್ದಕ್ಕೂ ಕಾಣುತ್ತದೆ.

ಅಂದಹಾಗೆ, ಇದು ತೆಲುಗು ಶೈಲಿಯ ಕಥೆ. ಸಾಕಷ್ಟು ವರ್ಷಗಳ ಹಗೆತನವಿರುವ ಎರಡು ಊರು. ತಮ್ಮದೇ ಪಡೆ ಕಟ್ಟಿಕೊಂಡು ಹಗೆತನ ಸಾಧಿಸುತ್ತಿರುವ ಎರಡು ಕುಟುಂಬ. ಅದನ್ನು ಒಂದು ಮಾಡಲು ಎಂಟ್ರಿ ಕೊಡೋ ಹೀರೋ. ಈ ನಡುವೆ ಏನೇನೋ ಸನ್ನಿವೇಶ. ಕೊನೆಗೂ ಕಟುಕರಂತಿರುವ ಆ ಕುಟುಂಬದ ಮುಖ್ಯಸ್ಥರನ್ನೇ ಇದು ರಿಯಾಲಿಟಿ ಶೋ, ಜಡ್ಜ್, ಮಾರ್ಕ್ಸ್ … ಎಂದೆಲ್ಲಾ ಹೇಳಿ ಯಾಮಾರಿಸುವ ಸಂದರ್ಭ. ಈ ಮಧ್ಯೆ ಆ ಎರಡೂ ಕುಟುಂಬಗಳಲ್ಲೂ ಹರೆಯದ ಇಬ್ಬರು ಹೆಣ್ಣುಮಕ್ಕಳು. ಇಷ್ಟು ಹೇಳಿದ ಮೇಲೆ ನೀವು ಕಥೆಯನ್ನು ಸುಲಭವಾಗಿ ಊಹಿಸಿಕೊಳ್ಳುತ್ತೀರಿ. ಏಕೆಂದರೆ ಈಗಾಗಲೇ ಇದೇ ರೀತಿಯ ಕಥಾಹಂದರವಿರುವ “ಬೃಂದಾವನಂ’ ಚಿತ್ರ ತೆಲುಗಿನಲ್ಲಿ ಬಂದು ಆ ನಂತರ ಕನ್ನಡದಲ್ಲಿ “ಬೃಂದಾವನ’ ಆಗಿದ್ದು, ಆ ನಂತರ ಇದು ರಿಯಾಲಿಟಿ ಶೋ ಎನ್ನುತ್ತಲೇ ಗುರಿ ಸಾಧಿಸಿದ ಕಥೆ ಇರುವ “ದೂಕುಡು’ ಕನ್ನಡದಲ್ಲಿ “ಪವರ್‌’ ಆಗಿದ್ದು ನಿಮಗೆ ಗೊತ್ತೇ ಇದೆ. ಹಾಗಾಗಿ, “ಜೈ ಮಾರುತಿ 800′ ಚಿತ್ರದ ಕಥೆ ತೀರಾ ಹೊಸದೇನು ಅಲ್ಲ. ಹಾಗಂತ ನಿಮಗೆ ಮನರಂಜಗೆ ಇಲ್ಲಿ ಮೋಸವಿಲ್ಲ. ಕುಟುಂಬ ಸಮೇತ ಆರಾಮವಾಗಿ ನೋಡುವಂತಹ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ.

ಇಂತಿಪ್ಪ ಕಥೆಯಲ್ಲಿ ಹರ್ಷ ತಮ್ಮ ಶೈಲಿ ಮೆರೆದಿದ್ದಾರೆ. ಅದು ಇಡೀ ಸಿನಿಮಾದುದ್ದಕ್ಕೂ ಕಾಣುತ್ತದೆ. ಅವರ ಈ ಹಿಂದಿನ ಎರಡು ಸಿನಿಮಾಗಳ ಶೇಡ್‌ ಇಲ್ಲೂ ಮುಂದುವರೆದಿದೆ. ಫ್ಲ್ಯಾಶ್‌ಬ್ಯಾಕ್‌, ಕೋಟೆ ಮನೆಗಳು, ಅದಕ್ಕೆ ಒಪ್ಪುವಂತಹ ಬ್ಯಾಕ್‌ಡ್ರಾಪ್‌, ಆಂಜನೇಯ … ಹೀಗೆ ಸಾಕಷ್ಟು ಅಂಶಗಳ ಮೂಲಕ ಹರ್ಷ ತಮ್ಮ ಶೈಲಿಯನ್ನು ಇಲ್ಲಿ ಸಾಬೀತುಮಾಡಿದ್ದಾರೆ. ಕಾಮಿಡಿ ವಿಷಯಕ್ಕೆ ಬರುವುದಾದರೆ ಶರಣ್‌ ಅವರ ಈ ಹಿಂದಿನ ಸಿನಿಮಾಗಳಿಗಿಂತ ಇದು ಭಿನ್ನ. ಏಕೆಂದರೆ ಈ ಕಥೆಗೊಂದು ಉದ್ದೇಶವಿದೆ. ಬೇಕಾಬಿಟ್ಟಿ ಕಾಮಿಡಿ ಮಾಡಲು ಹೋದರೆ ಅಪಹಾಸ್ಯಕ್ಕೀಡಾಗಬೇಕಾಗುತ್ತದೆ. ಹಾಗಾಗಿ, ಸನ್ನಿವೇಶಗಳ ಮೂಲಕ ನಗಿಸುವಂತಹ ಅನಿವಾರ್ಯತೆ ಇರುವುದರಿಂದ ಇಲ್ಲಿ ನಿಮಗೆ ಆಗಾಗ ನಗೆಬುಗ್ಗೆ ಚಿಮ್ಮುತ್ತದೆ. ಕಾಮಿಡಿ ಜೊತೆ ಜೊತೆಗೆ ಇಲ್ಲಿ ಸಾಕಷ್ಟು ಸೀರಿಯಸ್‌ ಅಂಶಗಳು ಕೂಡಾ ತುಂಬಿಕೊಂಡಿವೆ. ಆ ಮಟ್ಟಿಗೆ ಶರಣ್‌ ಕೂಡಾ ಸ್ವಲ್ಪ ಹೆಚ್ಚೇ ರಿಸ್ಕ್ ತಗೊಂಡಂತಿದೆ. ನಿರೂಪಣೆಯ ವಿಷಯಕ್ಕೆ ಬರುವುದಾದರೆ ಮೊದಲೇ ಹೇಳಿದಂತೆ ಹರ್ಷ ಶೈಲಿ ಇಲ್ಲಿ ಎದ್ದು ಕಾಣುತ್ತದೆ. ಸಿಕ್ಕಾಪಟ್ಟೆ ದೃಶ್ಯಗಳು ಬರುತ್ತವೆ. ಅದರಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಕೂಡಾ ನಿರ್ದೇಶಕರಿಗಿದೆ. ಅದು ಬಿಟ್ಟರೆ ಗಟ್ಟಿ ಕಥೆಯ ಜೊತೆಗೆ ಮನರಂಜನೆಗೆ ಏನು ಬೇಕೋ ಆ ಎಲ್ಲಾ ಅಂಶಗಳನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಹರ್ಷ.

ನಾಯಕ ಶರಣ್‌ಗೆ ಈ ಸಿನಿಮಾದಲ್ಲಿ ದೊಡ್ಡ ಜವಾಬ್ದಾರಿಯೇ ಇದೆ ಮತ್ತು ಅದನ್ನು ಚೆನ್ನಾಗಿ ನಿಭಾಹಿಸಿದ್ದಾರೆ ಕೂಡಾ. ಎಲ್ಲೋ ಒಂದು ಹಂತಕ್ಕೆ ಶರಣ್‌ ರೇಂಜ್‌ ಗೆ ಈ ಕಥೆ ಸ್ವಲ್ಪ ಹೆಚ್ಚಾಯಿತೇನೋ ಎಂದು ಪ್ರೇಕ್ಷಕರಿಗೆ ಎನಿಸುವ ಹೊತ್ತಿಗೆ ಶರಣ್‌ ತಮ್ಮ ಕಾಮಿಡಿ ಟೈಮಿಂಗ್‌ ಮೂಲಕ ನಿಮ್ಮನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಸ್‌ಪ್ಯಾಕ್‌ ನಲ್ಲೂ ಕಾಣಿಸಿಕೊಂಡು, ಜಬರ್‌ದಸ್ತ್ ಆಗಿ ಕಾಣಿಸಿಕೊಂಡಿದ್ದಾರೆ ಕೂಡಾ. ನಾಯಕಿಯರಾದ ಶೃತಿ ಹರಿಹರನ್‌ ಹಾಗೂ ಶುಭಾ ಪೂಂಜಾಗೆ ಇಲ್ಲಿ ಹೇಳಿಕೊಳ್ಳುವಂತಹ ಅವಕಾಶವಿಲ್ಲ. ಆಗಾಗ ಬಂದು ಹೋಗುತ್ತಾರಷ್ಟೇ. ಚಿತ್ರದಲ್ಲಿ ವಿಲನ್‌ಗಳಾಗಿ ಕಾಣಿಸಿಕೊಂಡಿರುವ ಮಧುಗುರುಸ್ವಾಮಿ ಹಾಗೂ ಲೋಕಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಅದರಲ್ಲೂ ಮಧುಗುರುಸ್ವಾಮಿಗೆ ಇದೊಂದು ಒಳ್ಳೆಯ ಅವಕಾಶ ಎಂದರೆ ತಪ್ಪಲ್ಲ. ಉಳಿದಂತೆ ಸಾಧು ಕೋಕಿಲ, ಅರುಣ್‌ ಸಾಗರ್‌, ಕುರಿ ಪ್ರತಾಪ್‌ ನಿಮ್ಮನ್ನು ನಗಿಸಲು ಪ್ರಯತ್ನಿಸಿದ್ದಾರೆ. ಚಿತ್ರದ ಮೂರು ಹಾಡುಗಲು ಹಾಗೂ ಅದನ್ನು ಚಿತ್ರೀಕರಿಸಿರುವ ರೀತಿ ಇಷ್ಟವಾಗುತ್ತದೆ. „
-ರವಿಪ್ರಕಾಶ್‌ ರೈ
-ಉದಯವಾಣಿ

Write A Comment