ಕರ್ನಾಟಕ

ಹನಿ ನೀರಿಗೂ ಜನರ ಹಾಹಾಕಾರ

Pinterest LinkedIn Tumblr

11_0ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆಯ ಕೊರತೆಯಿಂದಾಗಿ ದೇಶ ಬರಗಾಲದ ದವಡೆಗೆ ಸಿಲುಕಿದೆ. ಗಾಯದ ಮೇಲೆ ಬರೆ ಎಂಬಂತೆ ಈ ಸಲದ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಇನ್ನಷ್ಟು ಜಾಸ್ತಿಯಾಗಿದೆ. ಕೃಷಿ ಮಾಡುವುದಿರಲಿ ಕುಡಿಯಲೂ ನೀರು ಸಿಗದ ಪರಿಸ್ಥಿತಿ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ನೀರಿನ ಮೂಲಗಳೇ ಬತ್ತಿ ಹೋಗಿವೆ. ದೇಶದ 91 ಪ್ರಮುಖ ಜಲಾಶಯಗಳಲ್ಲಿ ಶೇ. 25ರಷ್ಟು ಮಾತ್ರ ನೀರು ಉಳಿದುಕೊಂಡಿದೆ. ಒಂದು ವೇಳೆ ಮಳೆ ಬಾರದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಎದುರಾಗಿರುವ ನೀರಿನ ಅಭಾವ, ನೀರಿಗಾಗಿ ಜನರು ಎದುರಿಸುತ್ತಿರುವ ಸಂಕಷ್ಟಗಳ ಸರಮಾಲೆಗಳ ಕುರಿತಾದ ಮಾಹಿತಿ ಇಲ್ಲಿವೆ…

ಲಾತೂರ್‌ನಲ್ಲಿ ಕಂಡು ಕೇಳರಿಯದ ಬರ
ಮಹಾರಾಷ್ಟ್ರ ಈ ಬಾರಿ ಹಿಂದೆಂದಿಗಿಂತಲೂ ಅಧಿಕ ಬರಕ್ಕೆ ತುತ್ತಾಗಿದೆ. ಮುಂಬೈನಿಂದ 500 ಕಿ.ಮೀ. ದೂರದ ಮರಾಠಾವಾಡ ಪ್ರದೇಶದ ಲಾತೂರ್‌ ಜಿಲ್ಲೆ ಬರದ ಕೇಂದ್ರ ಬಿಂದು. ಇಲ್ಲಿನ ಪರಿಸ್ಥಿತಿ ಹೇಗಿದೆ ಅಂದರೆ, ತಿಂಗಳಿಗೆ ಒಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿಗಾಗಿ ಜನರು ದಂಗೆ ಏಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೀರು ಸಂಗ್ರಹಿಸಲು 5ಕ್ಕಿಂತ ಹೆಚ್ಚು ಜನರು ಸೇರುವುದಕ್ಕೆ ನಿಷೇಧ ಹೇರಿ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿ ಮಾಡಲಾಗಿದೆ. ಲಾತೂರಿನ 5 ಲಕ್ಷಕ್ಕೂ ಅಧಿಕ ಜನರು ನೀರಿಲ್ಲದೇ ಪರಿತಪಿಸುತ್ತಿದ್ದಾರೆ.ನೀರಿಲ್ಲದೇ ಜನರು ಸ್ನಾನವನ್ನೇ ಮರೆತಿದ್ದಾರೆ. ಅಪರೂಪಕ್ಕೊಮ್ಮೆ ಅರ್ಧ ಬಕೆಟ್‌ ನೀರಿನಲ್ಲೇ ಸ್ನಾನ ಮಾಡಿ ಬಳಿಕ ಆ ನೀರನ್ನೇ ಬಟ್ಟೆ ಒಗೆಯಲು ಜನ ಬಳಸುತ್ತಿದ್ದಾರೆ. ದೂರದ ಪ್ರದೇಶಗಳಿಂದ ನೀರನ್ನು ಪೂರೈಸುವ ಟ್ಯಾಂಕರ್‌ಗಳಿಗೆ ಪೊಲೀಸ್‌ ಭದ್ರತೆ ನೀಡಲಾಗುತ್ತಿದೆ. ಲಾತೂರ್‌ಗೆ ಮಹಾರಾಷ್ಟ್ರ ಸರ್ಕಾರ ಗೂಡ್ಸ್‌ ರೈಲಿನ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆಯನ್ನೂ ಮಾಡುತ್ತಿದೆ. ರೈಲಿನ ಮೂಲಕ ಪ್ರತಿನಿತ್ಯ 2.7 ಕೋಟಿ ಲೀಟರ್‌ನಷ್ಟು ನೀರನ್ನು ಪೂರೈಸಲು ವ್ಯವಸ್ಥೆ ಮಾಡಿದೆ.

ಕೇವಲ ಲಾತೂರ್‌ ಅಷ್ಟೇ ಅಲ್ಲ. ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದ 8 ಜಿಲ್ಲೆಗಳಲ್ಲಿ ನೀರಿಗಾಗಿ ಜನರು ಹಪಾಹಪಿಸುತ್ತಿದ್ದಾರೆ. ಮರಾಠಾವಾಡದ ವ್ಯಾಪ್ತಿಯಲ್ಲಿನ ಜಲಾಶಯಗಳಲ್ಲಿ ಕೇವಲ ಶೇ.5ರಷ್ಟು ಮಾತ್ರ ನೀರು ಉಳಿದುಕೊಂಡಿದೆ. ಕಳೆದ ವರ್ಷವೂ ಈ ಪ್ರದೇಶ ಬರಕ್ಕೆ ತುತ್ತಾಗಿತ್ತು. ಆದರೆ, ಕಳೆದ ಬಾರಿ ಜಲಾಶಯದಲ್ಲಿ ಕಾಲು ಭಾಗದಷ್ಟಾದರೂ ನೀರಿತ್ತು. ಮಹಾರಾಷ್ಟ್ರದಲ್ಲಿ ನೀರಿನ ಮೂಲಗಳಾದ ಬಾವಿ, ಬೋರ್‌ವೆಲ್‌ಗ‌ಳು ಬತ್ತಿ ಹೋಗುವ ಹಂತ ತಲುಪಿವೆ. ಇಲ್ಲಿನ ಸಣ್ಣಪುಟ್ಟ ಹಳ್ಳಿಗಳಿಗೂ ಟ್ಯಾಂಕರ್‌ ನಲ್ಲಿ ಪೂರೈಕೆಯಾಗುತ್ತಿರುವ ನೀರೇ ಕಡೆಯ ಆಸರೆ.

ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೂ ನೀರಿಲ್ಲ
ಮರಾಠಾವಾಡದಲ್ಲಿ ಆಸ್ಪತ್ರೆಗಳಿಗೂ ಸರಿಯಾಗಿ ನೀರಿನ ಪೂರೈಕೆ ಯಾಗುತ್ತಿಲ್ಲ. ನೀರಿನ ಕೊರತೆಯಿಂದಾಗಿ ವೈದ್ಯರು ರೋಗಿಗಳ ಶಸ್ತ್ರ ಚಿಕಿತ್ಸೆಯನ್ನೇ ನಿಲ್ಲಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ವೈದ್ಯರು ಹರಿಯುವ ನೀರಿನಲ್ಲಿ ಸೋಪಿನಿಂದ 10 ನಿಮಿಷ ಕೈಗಳನ್ನು ತೊಳೆದು ಕೊಳ್ಳಬೇಕು. ಅಲ್ಲದೇ ಶಸ್ತ್ರ ಚಿಕಿತ್ಸೆಯ ವೇಳೆ ನಿರಂತರ ನೀರಿನ ಪೂರೈಕೆ ಆಗುತ್ತಿರಬೇಕು. ಆದರೆ, ಆಸ್ಪತ್ರೆಗಳಿಗೆ ದಿನಕ್ಕೊಮ್ಮೆ ನೀರು ಪೂರೈಸು ವುದೇ ಕಷ್ಟವಾಗಿದೆ. ಹೀಗಾಗಿ ವೈದರು ಶಸ್ತ್ರಚಿಕಿತ್ಸೆ ನಡೆಸಲಾಗದೇ ಅಸಹಾಯಕರಾಗಿದ್ದಾರೆ. ಜತೆಗೆ ನೀರಿನ ಕೊರತೆಯ ಕಾರಣ ಆಸ್ಪತ್ರೆಯ ಶುಚಿತ್ವವನ್ನು ಕಾಪಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.

ಗಂಗಾ ನದಿಯಲ್ಲೂ ತಗ್ಗಿದ ನೀರಿನ ಪ್ರಮಾಣ
ಭಾರತದ ಜೀವನದಿ ಎಂದೇ ಕರೆಸಿಕೊಳ್ಳುವ ಗಂಗೆಯಲ್ಲಿಯೂ ಈ ಸಲ ನೀರಿನ ಕೊರತೆ ಎದುರಾಗಿದೆ. ನದಿ ನೀರಿನ ರಭಸ ಕಡಿಮೆಯಾದ ಕಾರಣಕ್ಕಾಗಿ ಫ‌ರಾಕ್ಕಾ ವಿದ್ಯುತ್‌ ಉತ್ಪಾದನಾ ಘಟಕ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ 9 ರಾಜ್ಯಗಳಲ್ಲಿ ನೀರಿನ ಕೊರತೆ
ಮಳೆಯ ಕೊರತೆಯಿಂದಾಗಿ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ 9 ರಾಜ್ಯಗಳನ್ನು ಬರ ಪೀಡಿತ ಎಂದು 2015ರಲ್ಲಿ ಘೋಷಣೆ ಮಾಡಲಾಗಿದೆ. ಹೀಗಾಗಿ ಜಲಾಶಯಗಳಲ್ಲಿ ನೀರು ಖಾಲಿ ಆಗುವ ಹಂತ ತಲುಪಿದೆ. ಈ ನೀರಿನ ಮೂಲವನ್ನೇ ಬಳಸಿಕೊಂಡು ಇನ್ನೆರಡು ತಿಂಗಳ ಬೇಸಿಗೆಯನ್ನು ಕಳೆಯ ಬೇಕಾದ ಸ್ಥಿತಿ ಇದೆ. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಚ್‌ ಅಂತ್ಯದ ಅಂಕಿ ಅಂಶಗಳ ಪ್ರಕಾರ, ದೇಶದ 91ರಷ್ಟು ಜಲಾಶಯಗಳಲ್ಲಿ ಈಗಾಗಲೇ ಶೇ. 25ರಷ್ಟು ಮಾತ್ರ ನೀರಿದೆ. ಇದು ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆ. ಕಳದೊಂದು ದಶಕದಲ್ಲಿಯೇ ಜಲಾಶಯಗಳ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ದೇಶದ ಪಶ್ಚಿಮ ಭಾಗದ ರಾಜ್ಯಗಳಾದ ಗುಜರಾತ್‌ ಮತ್ತು ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇ. 21ರಷ್ಟು ಮಾತ್ರ ನೀರಿದೆ. ಇನ್ನು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಆಂಧ್ರ ಪ್ರದೇಶ ತೆಲಂಗಾಣಗಳಲ್ಲಿ ಜಲಾಶಯದ ಈಗಿನ ನೀರಿನ ಮಟ್ಟ ಶೇ. 17ಕ್ಕೆ ಕುಸಿದಿದೆ. ದೇಶದಲ್ಲಿ ಈಗಿನ ಪರಿಸ್ಥಿತಿ 2009ರಲ್ಲಿ ಕಾಣಿಸಿಕೊಂಡ ಭೀಕರ ಬರಗಾಲಕ್ಕಿಂತಲೂ ಕೆಟ್ಟದಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬರದ ಬರೆ
ಕರ್ನಾಟಕದಲ್ಲಿ 1972ರ ಬಳಿಕ ಈ ವರ್ಷ ಭೀಕರ ಜಲ ಕ್ಷಾಮ ಕಾಣಿಸಿಕೊಂಡಿದೆ. ಕಳೆದ 25 ವರ್ಷದಲ್ಲೇ ಅಧಿಕ ಬರಕ್ಕೆ ರಾಜ್ಯ ತುತ್ತಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ನೀರಿಲ್ಲದೇ ಬಸವಳಿದಿದ್ದಾರೆ. ಕರ್ನಾಟಕದ 176 ತಾಲೂಕುಗಳ ಪೈಕಿ 137 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

600ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಅಭಾವ ಎದುರಾಗಿದ್ದು, ಅವುಗಳಲ್ಲಿ ಹೆಚ್ಚಿನ ಗ್ರಾಮಗಳು ಉತ್ತರ ಕರ್ನಾಟಕ 12 ಜಿಲ್ಲೆಗಳಿಗೆ ಸೇರಿವೆ. ಇಲ್ಲಿ 2-3 ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ಈ ನೀರು ಏತಕ್ಕೂ ಸಾಲುತ್ತಿಲ್ಲ. ರಾಜ್ಯದ 13 ಪ್ರಮುಖ ಜಲಾಶಗಳಲ್ಲಿ ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ (ಬಳಕೆಗೆ ಸಿಗದ ನೀರು) ಮಟ್ಟವನ್ನು ತಲುಪುತಿದೆ. ರಾಜ್ಯದಲ್ಲಿರುವ 10 ಸಾವಿರ ಬೋರ್‌ವೆಲ್‌ಗ‌ಳು ಬೇಸಿಗೆ ಮುನ್ನವೇ ಬತ್ತಿ ಹೋಗಿವೆ. 2015ರಲ್ಲಿ ಉತ್ತರ ಕರ್ನಾಟಕ ಶೇ.44ರಷ್ಟು ಮಳೆಯ ಕೊರತೆಯನ್ನು ಎದುರಿಸಿತ್ತು. ಹೀಗಾಗಿ ಕೊಳವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ.
-ಉದಯವಾಣಿ

Write A Comment