ಮನೋರಂಜನೆ

ಅಜ್ಞಾತವಾಸ ಮುಗಿಸಿಬಂದ ‘ಕಾಲಭೈರವ’

Pinterest LinkedIn Tumblr

crec25Kalabhairava_0ಪಕ್ಕದಮನೆ ಹುಡುಗನ ರೀತಿಯ ಪಾತ್ರಗಳಿಗೆ ಜೀವತುಂಬುವಲ್ಲಿ ನಟ ಯೋಗಿ ಸಿದ್ಧಹಸ್ತರು. ‘ಕಾಲಭೈರವ’ ಚಿತ್ರದ ಮೂಲಕ ಮರಳಿ ಪ್ರೇಕ್ಷಕರ ಮನಸ್ಸು ಗೆಲ್ಲುವ ಹಂಬಲ ಅವರದು.
ಯೋಗೀಶ್ ನಟನೆಯ ‘ಕಾಲಭೈರವ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕು ಎರಡು ವರ್ಷಗಳಾಗಿದ್ದವು. ಅಜ್ಞಾತವಾಸದಿಂದ ಹೊರಬಂದಿರುವ ‘ಕಾಲಭೈರವ’ ಇಂದು (ಮಾರ್ಚ್ 25) ತೆರೆಗೆ ಬರುತ್ತಿದೆ. ‘ಕಿರಗೂರಿನ ಗಯ್ಯಾಳಿಗಳು’, ‘ಪರಪಂಚ’ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಯೋಗೀಶ್ ‘ಕಾಲಭೈರವ’ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ.
‘ಶೀರ್ಷಿಕೆ ನೋಡಿದರೆ ಇದು ಭಕ್ತಿಪ್ರಧಾನ ಚಿತ್ರ ಎನಿಸಬಹುದು. ಆದರೆ, ‘ಕಾಲಭೈರವ’ ಹಳ್ಳಿ ಸೊಗಡಿನ ಸಿನಿಮಾ. ನಾಯಕ ಕುಲುಮೆ ಕೆಲಸ ಮಾಡುವವನು. ಇದು ‘ದೂರದಬೆಟ್ಟ’ ಚಿತ್ರದಲ್ಲಿ ವರನಟ ರಾಜಕುಮಾರ್ ಅವರು ಮಾಡಿದಂತಹ ಪಾತ್ರ. ಆ ಚಿತ್ರದ ನಾಯಕಿ ಭಾರತಿಯಂತಹ ಚೆಲುವೆ ತನಗೂ ಸಿಗಬೇಕು ಎನ್ನುವುದು ನಾಯಕನ ಆಸೆ.
ಇಂಥ ಕನಸುಕಂಗಳ ತರುಣ, ತಾಯಿಯ ಆಸೆ ಈಡೇರಿಸಲು ಬೆಂಗಳೂರಿಗೆ ಬಂದಾಗ ಅನುಭವಿಸುವ ನೋವು, ನಲಿವುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ಸಿನಿಮಾದ ಕಥೆಯನ್ನು ಯೋಗಿ ಸೂಚ್ಯವಾಗಿ ಹೇಳುತ್ತಾರೆ. ಚಿತ್ರದ ಬಿಡುಗಡೆಯ ವಿಳಂಬಕ್ಕೆ ಅವರು ನೀಡುವ ಕಾರಣ– ‘ತಾಂತ್ರಿಕ ತೊಂದರೆ’.
ಚಿತ್ರದಲ್ಲಿ ನಗುವಿಗೆ ಭರಪೂರ ಅವಕಾಶವಿದೆಯಂತೆ. ಇದಕ್ಕೆ ತಕ್ಕಂತೆ ಚಿತ್ರದಲ್ಲಿ ತಬಲಾ ನಾಣಿ ಮತ್ತು ರಂಗಾಯಣ ರಘು ಜುಗಲಬಂದಿ ಇದೆ. ತಬಲಾ ನಾಣಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ನಾಯಕ ಯೋಗಿ ಅವರ ಮಾವನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರಂತೆ. ‘ಇಬ್ಬರೂ ಸೇರಿ ಮಲೆ ಮಹದೇಶ್ವರಸ್ವಾಮಿ ಮತ್ತು ಸಿದ್ದಪ್ಪಾಜಿ ಭಜನೆಗಳನ್ನು ಮಾಡುತ್ತೇವೆ’ ಎಂದರು ನಾಣಿ. ನೀನಾಸಮ್ ಅಶ್ವಥ್ ಮಂಗಳಮುಖಿಯಾಗಿ ನಟಿಸಿದ್ದಾರಂತೆ.
ಶರತ್‌ ಲೋಹಿತಾಶ್ವ ತಾರಾಗಣದಲ್ಲಿನ ಮತ್ತೊಂದು ಪ್ರಮುಖ ಹೆಸರು. ಶಿವಪ್ರಭು ‘ಕಾಲಭೈರವ’ ಚಿತ್ರದ ನಿರ್ದೇಶಕರು. ‘ಕಾಲಭೈರವನ ಟೈಟಲ್‌ ನಿರ್ಮಾಪಕ ಕೆ. ಮಂಜು ಅವರ ಬಳಿ ಇತ್ತು. ಯೋಗಿ ನಟಿಸುತ್ತಾರೆಂದು ತಿಳಿದು ಟೈಟಲ್ ನೀಡಿ ಶುಭ ಹಾರೈಸಿದರು. ನಾಯಕನಿಗೆ ಅಗತ್ಯವಿರುವ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಪ್ರೇಕ್ಷಕರಿಗೆ ಬೇಸರವಾಗದಂತೆ ಆಕ್ಷನ್ ಕಟ್ ಹೇಳಿದ್ದೇನೆ’ ಎಂದರು ಶಿವಪ್ರಭು.
‘ಹಾಯ್‌ ಬೆಂಗಳೂರ್’, ‘ಎಮರ್ಜನ್ಸಿ’ ಚಿತ್ರಗಳಿಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಕುಮರೇಶ್ ಬಾಬು ಬಹಳ ದಿನಗಳ ನಂತರ ‘ಕಾಲಭೈರವ’ ಮೂಲಕ ಮತ್ತೆ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 150 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆಯಂತೆ. ವಿತರಕ ಮುನಿರಾಜು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Write A Comment