ಮನೋರಂಜನೆ

ತಮಿಳಿನ ಗೋಲಿಸೋಡ ಕನ್ನಡದಲ್ಲೂ ಅದೇ

Pinterest LinkedIn Tumblr

Goli-sodaತಮಿಳಿನಲ್ಲಿ ಸೂಪರ್‌ಹಿಟ್‌ ಆದ “ಗೋಲಿಸೋಡ’, ಇದೀಗ ಕನ್ನಡದಲ್ಲೂ ತಯಾರಾಗಿದೆ. ಅದಕ್ಕೂ ಸಹ “ಗೋಲಿಸೋಡ’ ಎಂದೇ ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಲೋಗೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ನಿರ್ದೇಶಕ ರಘು ಜಯ ಹಾಗು ನಿರ್ಮಾಪಕ ಕೊಲ್ಲ ಪ್ರವೀಣ್‌. ಅಂದಿನ ಹೈಲೈಟ್‌ ನಟ ಸುದೀಪ್‌. “ಗೋಲಿಸೋಡ’ ಚಿತ್ರದ ಲೋಗೋ ಬಿಡುಗಡೆ ಮಾಡಿದ ಸುದೀಪ್‌, ಆ ಬಗ್ಗೆ ಮಾತಿಗಿಳಿದರು.

“ನಾನು ಇಲ್ಲಿಗೆ ಬರೋದ್ದಕ್ಕೆ ಎರಡು ಕಾರಣಗಳಿವೆ. ಒಂದು ಗೆಳೆಯ ಕೊಲ್ಲ ಪ್ರವೀಣ್‌ ನಿರ್ಮಾಣದ ಚಿತ್ರ ಅನ್ನೋದು. ಮತ್ತೂಂದು ಹೊಸ ಪ್ರತಿಭೆಗಳೇ ಇರುವ “ಗೋಲಿಸೋಡ’ ಚಿತ್ರ ಎಂಬುದು. ಕನ್ನಡದಲ್ಲಿ ಈಗಂತೂ ಹೊಸಬರೇ ಹೊಸತನದ ಹಾಗು ಗೆಲುವಿನ ಚಿತ್ರಗಳನ್ನು ಕೊಡುತ್ತಿದ್ದಾರೆ. “ಗೋಲಿಸೋಡ’ ಒಂದು ಒಳ್ಳೆಯ ಸಿನಿಮಾ ಆಗಿ ಹೊರ ಹೊಮ್ಮಲಿ. ಎಲ್ಲರ ಶ್ರಮ ಚೆನ್ನಾಗಿದ್ದರೆ, ಖಂಡಿತವಾಗಿಯೂ ಚಿತ್ರ ಚೆನ್ನಾಗಿ ಮೂಡಿಬರುತ್ತೆ. ಕೊಲ್ಲ ಪ್ರವೀಣ್‌ಗೆ ಸಿನಿಮಾಗಳನ್ನು ಹೇಗೆ ತಯಾರಿಸಬೇಕು, ಎಂಥಾ ಚಿತ್ರ ಮಾಡಬೇಕು ಎಂಬುದು ಗೊತ್ತಿದೆ. ಈವರೆಗೆ ಇಲ್ಲಿ ಮಾಡಿದ ಎಲ್ಲಾ ಸಿನ್ಮಾಗಳೂ ಗೆದ್ದಿವೆ.
“ಗೋಲಿಸೋಡ’ ಕೂಡ ಯಶಸ್ವಿಯಾಗಲಿ’ ಅಂದರು ಸುದೀಪ್‌.

“ಈ ಚಿತ್ರ ನಿರ್ದೇಶಿಸೋಕೆ ಕಾರಣ ನಂದಕಿಶೋರ್‌. ಇಂಥದ್ದೊಂದು ಒಳ್ಳೆಯ ಅವಕಾಶ ಮಾಡಿಕೊಟ್ಟ ಅವರಿಗೊಂದು ದೊಡ್ಡ ಥ್ಯಾಂಕ್ಸ್‌’ ಅಂತಾನೇ ಮಾತು ಶುರುಮಾಡಿದರು ನಿರ್ದೇಶಕ ರಘು ಜಯ. “ಈ ಚಿತ್ರ ನಂದಕಿಶೋರ್‌ ನಿರ್ದೇಶಿಸಬೇಕಿತ್ತು. ಆದರೆ, ಅವರು ಬಿಜಿ ಇದ್ದುದರಿಂದ ಆ ಅವಕಾಶ ನನಗೆ ಮಾಡಿಕೊಟ್ಟರು. ಅವರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸವಿದೆ. ಇನ್ನು, ಪ್ರಿಯಾಂಕ, ದಿವ್ಯಾ, ಹೇಮಂತ್‌ ಮತ್ತು ಚಂದನ್‌ ಚಿತ್ರದ ಪ್ರಮುಖ ಪಾತ್ರಧಾರಿಗಳು. ಪ್ರವೀಣ್‌ ಅವರ ಸಹಕಾರ ಮತ್ತು ಚಿತ್ರತಂಡದ ಪ್ರೋತ್ಸಾಹದಿಂದ ಸಿನಿಮಾವನ್ನು ಚೆನ್ನಾಗಿ ಮಾಡಿದ್ದೇನೆ ಎಂಬ ಖುಷಿ ಇದೆ. ಇನ್ನು, ರಿಮೇಕ್‌ ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಒಂದು ಚೌಕಟ್ಟು ಇರುತ್ತೆ. ಅದನ್ನು ಮೀರಿ ಹೋಗಲು ಸಾಧ್ಯವಿಲ್ಲ. ಮೂಲ ಚಿತ್ರಕ್ಕಿಂತಲೂ ಚೆನ್ನಾಗಿ ಮಾಡಬೇಕು ಎಂಬ ಸವಾಲು ಇರುತ್ತೆ.
ಅದನ್ನಿಲ್ಲಿ ಸ್ವೀಕರಿಸಿಯೇ ಕೆಲಸ ಮಾಡಿದ್ದೇನೆ. ನನ್ನೆಲ್ಲಾ ತಂಡದ ಸಹಕಾರವನ್ನು ಎಂದೂ ಮರೆಯೋವಂತಿಲ್ಲ’ ಅಂದರು ರಘುಜಯ.

ಲಹರಿ ವೇಲು ಅವರಿಲ್ಲಿ ಮೊದಲ ಸಲ ಬಣ್ಣ ಹಚ್ಚಿದ್ದಾರಂತೆ. ಅದು ಪ್ರವೀಣ್‌ ಮೇಲಿರುವ ಪ್ರೀತಿ ಮತ್ತು ಒಳ್ಳೇ ಸಿನಿಮಾ ಎಂಬ ಕಾರಣಕ್ಕೆ ಎಂಬುದು ವೇಲು ಮಾತು. ಈ ಚಿತ್ರದಲ್ಲಿ ಮಕ್ಕಳೇ ಸ್ಟಾರ್‌. ಮೂಲ ಚಿತ್ರ ನೋಡಿಲ್ಲ. ಈ ಚಿತ್ರ ವೀಕ್ಷಿಸುತ್ತೇನೆ. ಇನ್ನು, ರಾಜೇಶ್‌ ರಾಮನಾಥ್‌ ಸಾಂಗ್ಸ್‌ ಚೆನ್ನಾಗಿವೆ. ಇರುವ ಮೂರು ಹಾಡುಗಳೂ ಗುನುಗುವಂತಿವೆ ಎಂದರು ವೇಲು.

ಖಳನಟ ಮಧುಸೂದನ್‌ ಅವರು ಮೂಲ ಚಿತ್ರದಲ್ಲೂ ಖಳನಟರಾಗಿ ನಟಿಸಿದ್ದರಂತೆ. ಅಲ್ಲಿ ಆ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಇಲ್ಲೂ ಕೂಡ ಖಳನಟನಾಗಿ ನಟಿಸಿದ್ದೇನೆ. ಇದು ಅದಕ್ಕಿಂತ ದೊಡ್ಡ ಸಕ್ಸಸ್‌ ಕಾಣಲಿ ಅಂದರು ಮಧುಸೂದನ್‌.

ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥ್‌ ಪ್ರಕಾರ, ಕನ್ನಡದ ಮಟ್ಟಿಗೆ “ಗೋಲಿಸೋಡ’ ವಿಭಿನ್ನ ಸಿನಿಮಾ ಆಗಲಿದೆಯಂತೆ. ಒಳ್ಳೇ ಟೀಮ್‌ ಇಲ್ಲಿದೆ. ಅದಕ್ಕೆ ತಕ್ಕಂತಹ ಸಿನಿಮಾನೇ ಮೂಡಿಬಂದಿದೆ ಅಂದರು ಅವರು.

ಚಿತ್ರದಲ್ಲಿ ನಟಿಸಿರುವ ಪ್ರಿಯಾಂಕ, ದಿವ್ಯಾ ರಂಗಾಯಣ, ಹೇಮಂತ್‌ ಹಾಗು ಚಂದನ್‌ ಅನುಭವ ಹಂಚಿಕೊಂಡರೆ, ನಿರ್ಮಾಪಕ ಕೊಲ್ಲ ಪ್ರವೀಣ್‌ ಹಾಗು ಯೋಗೀಶ್‌ ದ್ವಾರಕೀಶ್‌ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
-ಉದಯವಾಣಿ

Write A Comment