ಮನೋರಂಜನೆ

ಭೂಗತ ಜಗತ್ತಿನಲ್ಲಿ ಅಜ್ಞಾತ ವಾಸ; ಸುಪಾರಿ ಸೂರ್ಯ

Pinterest LinkedIn Tumblr

Supari-Suryaಅವನಿಗೆ ತಾಯಿ ಮತ್ತು ತಂಗಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇರುವ ಒಬ್ಬ ತಂಗಿಗೆ ಮಾತು ಬರಲ್ಲ. ಕಿವಿ ಕೇಳಲ್ಲ. ಅವಳಿಗೆ ಹೇಗಾದರೂ ಮಾಡಿ ಮಾತು ಬರುವಂತೆ, ಕಿವಿ ಕೇಳುವಂತೆ ಮಾಡಬೇಕು ಎಂಬುದೊಂದೇ ಅವನ ಮುಂದಿರುವ ಗುರಿ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಬೇಕು. ಅಷ್ಟೊಂದು ಹಣ ಸಂಪಾದಿಸೋದು ಕಷ್ಟ. ಹಾಗಂತ ಅವನು ಸುಮ್ಮನಿರಲ್ಲ. ತಾಯಿಗೆ ತಾನೊಬ್ಬ ಸಾಫ್ಟ್ವೇರ್‌ ಎಂಜಿನಿಯರ್‌ ಅನ್ನೋ ಸುಳ್ಳು ಹೇಳ್ತಾನೆ. ಆದರೆ, ಅವನು ಮಾಡೋ ಕೆಲಸ ಮಾತ್ರ ಸುಪಾರಿ ಪಡೆದು ಹೇಳಿದವರನ್ನು ಕೊಲೆ ಮಾಡೋದು! ಘಟನೆಯೊಂದರಲ್ಲಿ ಕೊನೆಗೆ ತನ್ನ ತಂಗಿಯನ್ನೇ ಕೊಲೆ ಮಾಡಬೇಕಾದ ಪರಿಸ್ಥಿತಿ ಬಂದೊದಗುತ್ತೆ!! ಪ್ರಾಣಕ್ಕಿಂತ ಹೆಚ್ಚಾಗಿರೋ ತಂಗಿಯನ್ನ ಕೊಲೆ ಮಾಡ್ತಾನಾ ಇಲ್ಲವಾ ಅನ್ನೋದು “ಸುಪಾರಿ ಸೂರ್ಯ’ನ ಒನ್‌ಲೈನ್‌ ಸ್ಟೋರಿ.

ಕುತೂಹಲವಿದ್ದರೆ, ಸೂರ್ಯನ ಸುಪಾರಿ ಆಟ ನೋಡಬಹುದು. ಇಲ್ಲಿ ಗನ್‌ ಸದ್ದುಗಳಿಗೆ ಕೊರತೆ ಇಲ್ಲ, ರಕ್ತಪಾತಕ್ಕೆ ಕೊನೆ ಇಲ್ಲ. ಅಲ್ಲಲ್ಲಿ ಒಂಚೂರು ಪ್ರೀತಿ, ಒಂದಷ್ಟು ನ್ಯಾಯ-ನೀತಿ ಇತ್ಯಾದಿ ಇತ್ಯಾದಿ ಸಿನಿಮಾದೊಳಗಿನ ಗಂಟು.

ಕಥೆ ಹೊಸದೇನಲ್ಲ. ಹಿಂದೆ ಇಂಥದ್ದೊಂದು ಎಳೆ ಇಟ್ಟುಕೊಂಡು ಬಂದಿರುವ ಸಿನಿಮಾಗಳಿವೆ. ಹಾಗಂತ, ಇಲ್ಲಿ ಚಿತ್ರಕಥೆಯನ್ನು ಮಾತ್ರ ಕಡೆಗಣಿಸುವಂತಿಲ್ಲ. ನಿರ್ದೇಶಕ ರಘುರಾಜ್‌ ಅವರ ನಿರೂಪಣೆಯ ಜಾಣ್ಮೆ ಮೆಚ್ಚಬೇಕು. ಸಿನಿಮಾ ನೋಡುಗರಿಗೆ ಕಥೆಗಿಂತ ಅವರು ಮಾಡಿಕೊಂಡಿರುವ ಸ್ಕ್ರೀನ್‌ಪ್ಲೇ ಇಷ್ಟವಾಗುತ್ತೆ. ದೃಶ್ಯದಿಂದ ದೃಶ್ಯಕ್ಕೆ ಕೊಡುವ ಲಿಂಕ್‌ ಖುಷಿಕೊಡುತ್ತೆ. ಇನ್ನೇನು, “ಸುಪಾರಿ ಸೂರ್ಯ’ ಟ್ರ್ಯಾಕ್‌ ಬಿಟ್ಟು ಬೇರೆ ಕಡೆ ಹೋಗ್ತಾನೆ ಅಂದುಕೊಳ್ಳುತ್ತಿದ್ದಂತೆಯೇ, ಸಾಧುಕೋಕಿಲ ಅವರನ್ನು ಎಂಟ್ರಿಕೊಡಿಸಿ ಒಂದಷ್ಟು ಕಚಗುಳಿ ಕೊಡಿಸಿ ನೋಡುಗರ ತಾಳ್ಮೆಯನ್ನು ಸಮಾಧಾನ ಪಡಿಸುತ್ತಾರೆ. ಚಿತ್ರದ ಗಟ್ಸ್‌ ಅಂದರೆ ಅದು ಫೈಟ್ಸ್‌ ಅದನ್ನು ಹೊರತುಪಡಿಸಿದರೆ ಪಂಚಿಂಗ್‌ ಮಾತುಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ ಎನ್ನಬಹುದು. ಎಲ್ಲಕ್ಕಿಂತಲೂ ಹೆಚ್ಚಾಗಿ ಕ್ಯಾಮೆರಾ ಕೆಲಸ ನೋಡುಗರನ್ನು ಖುಷಿಗೊಳಿಸುತ್ತೆ ಎಂಬುದು ಗಮನಿಸಬೇಕಾದ ವಿಷಯ.

ಚಿತ್ರ ನೋಡುವಾಗ ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂಬ ಫೀಲ್‌ ಬರುತ್ತೆ. ಅದಕ್ಕೆ ಕಾರಣ, ಜಬರ್‌ದಸ್ತ್ ಫೈಟ್ಸ್‌, ಕಲರ್‌ಫ‌ುಲ್‌ ಲೊಕೇಷನ್ಸ್‌. ಅದು ಬಿಟ್ಟರೆ ಬೇರೇನೂ ಕೇಳುವಂತಿಲ್ಲ. ಹೊಸ ಹುಡುಗನನ್ನು ಇಟ್ಟುಕೊಂಡು ಆ ಪರಿ “ಸಾಹಸ’ ಮಾಡಿರುವುದರಿಂದ “ಸುಪಾಯಿ ಸೂರ್ಯ’ ಎಲ್ಲೂ ಬೋರು ಎನಿಸಲ್ಲ. ಆದರೆ, ಚಿತ್ರದ ವೀಕ್‌ನೆಸ್‌ ಅಂದರೆ, ಅದು ಅವಧಿ. ಚಿತ್ರವನ್ನು ಉದ್ದಕ್ಕೆ ಎಳೆದಾಡಿದ್ದಾರೆ. ಒಂದಷ್ಟು ಕತ್ತರಿ ಪ್ರಯೋಗಿಸಿದರೆ, “ಸೂರ್ಯ’ ಇನ್ನಷ್ಟು ಅಂದಗೊಳ್ಳಬಹುದೇನೋ? ಮೊದಲರ್ಧ ಕೊಂಚ ನಿಧಾನ ಎನಿಸುವ ಸಿನಿಮಾ, ದ್ವಿತಿಯಾರ್ಧದಲ್ಲಿ ಕೆಲ ಸಣ್ಣಪುಟ್ಟ ಟ್ವಿಸ್ಟ್‌ಗಳಿಂದ ಸುಧಾರಣೆಗೆ ಬರುತ್ತೆ.

ಚಿತ್ರದಲ್ಲಿ ಗನ್‌ ಸದ್ದಿನ ಜತೆಯಲ್ಲಿ ಲವ್‌ ಎಂಬ ವೆಪೆನ್‌ ಕೂಡ ಇದೆ. ತಾಯಿ, ತಂಗಿ ಹಾಗು ಗೆಳೆಯನ ಸೆಂಟಿಮೆಂಟ್‌ನೊಂದಿಗೆ ಸಾಗುವ ಚಿತ್ರದಲ್ಲಿ ಆಗಾಗ ಹಾಸ್ಯ ಇಣುಕುತ್ತಾದರೂ, ನೋಡುಗನ ಮೊಗದಲ್ಲಿ ಅಷ್ಟಾಗಿ ನಗೆಯ ಗೆರೆ ಮೂಡುವುದಿಲ್ಲ. ಮಾತ್‌ ಮಾತಿಗೂ ಉದ್ದುದ್ದ ಡೈಲಾಗ್‌ಗಳು ಒಂದಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ. ಚಿತ್ರದ ಟೈಟಲ್‌ಗೆ ತಕ್ಕಂತೆ, ಆರಂಭದಿಂದ ಅಂತ್ಯದವರೆಗೂ ಸುಪಾರಿ ಪಡೆಯೋದು, ಕೊಲ್ಲೋದು, ರೌಡಿಗಳ ಜತೆಯಲ್ಲಿ ಹೊಡೆದಾಡೋದನ್ನೇ ಸುತ್ತಿದ್ದಾರೆ. ಇನ್ನೇನು ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂತು ಅಂತ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಮತ್ತೂಂದು ಟ್ವಿಸ್ಟ್‌ ಬಂದು ಸಿನಿಮಾ ಮತ್ತೆ ಸಾಗುತ್ತೆ. ಚಿತ್ರವನ್ನು ಅಲ್ಲಿಗೇ ಮೊಟಕುಗೊಳಿಸಿದ್ದರೆ ಸುಪಾರಿ ಹುಡುಗನನ್ನು ಮೆಚ್ಚಬಹುದಿತ್ತು. ಆದರೂ ಇಲ್ಲಿ ಎಲ್ಲವೂ ವೇಗವಾಗಿ ನಡೆಯುವುದರಿಂದ ಆಗಾಗ ಆಗುವ ತಪ್ಪುಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ಸಮಾಧಾನದ ವಿಷಯ.

ವಿರಾಟ್‌ ನೋಡೋಕೆ ಚೆನ್ನಾಗಿ ಕಾಣಾ¤ರೆ. ಫೈಟ್ಸ್‌ನಲ್ಲಂತೂ ಸಾಕಷ್ಟು ರಿಸ್ಕ್ ತಗೊಂಡಿದ್ದಾರೆ. ನಟನೆ ಬಗ್ಗೆ ಮಾತಾಡದಿರುವುದೇ ಒಳಿತು. ಡೈಲಾಗ್‌ ಡಿಲವರಿ ಬಗ್ಗೆ ಕೊಂಚ ಗಮನಹರಿಸಿದರೆ, ಉಜ್ವಲ ಭವಿಷ್ಯವಿದೆ. ನಾಯಕಿ ಮಧುರಿಮಾ ಗ್ಲಾಮರ್‌ಗಷ್ಟೇ ಸೀಮಿತ. ಬಂದು ಹೋಗುವ ಹಾಡೊಂದರಲ್ಲಿ ಕುಣಿದಿದ್ದು ಬಿಟ್ಟರೆ ಬೇರೆಲ್ಲೂ ಗಮನಸೆಳೆಯಲ್ಲ. ಇಲ್ಲಿ ಶರತ್‌ಲೋಹಿತಾಶ್ವ ಅವರ ನಟನೆ ನೆನಪಲ್ಲುಳಿಯುವಂತಿದೆ. ಡಿಫ‌ರೆಂಟ್‌ ಗೆಟಪ್‌ನಲ್ಲಿ ತೆರೆಯನ್ನು ಆವರಿಸಿ, ಅಬ್ಬರಿಸಿದ್ದಾರೆ. ಸಾಧು ಕೋಕಿಲ ಕಾಮಿಡಿ ಅಷ್ಟಾಗಿ ಮೋಡಿ ಮಾಡಿಲ್ಲ. ಗೆಳೆಯನಾಗಿ ವಿಜಯ್‌ಚೆಂಡೂರ್‌ ಇಷ್ಟವಾಗುತ್ತಾರೆ. ಉಳಿದಂತೆ ಭವ್ಯಾ, ಉಗ್ರಂ ಮಂಜು ಸಿಕ್ಕ ಪಾತ್ರವನ್ನು ನೀಟಾಗಿ ನಿರ್ವಹಿಸಿದ್ದಾರೆ. ಶ್ರೀಧರ್‌ ವಿ.ಸಂಭ್ರಮ್‌ ಸಂಗೀತದಲ್ಲಿ ಸಂಭ್ರಮವೇ ಇಲ್ಲ. ಹಿನ್ನೆಲೆ ಸಂಗೀತವನ್ನು ತೆಗಳುವಂತಿಲ್ಲ. ನಂದಕುಮಾರ್‌ ಕ್ಯಾಮೆರಾ ಕೆಲಸವನ್ನು ಜರಿಯುವಂತಿಲ್ಲ.

ಚಿತ್ರ : ಸುಪಾರಿ ಸೂರ್ಯ
ನಿರ್ದೇಶನ : ರಘುರಾಜ್‌
ನಿರ್ಮಾಣ : ಚಾಮುಂಡಿ ಚಂದ್ರು
ತಾರಾಗಣ : ವಿರಾಟ್‌, ಮಧುರಿಮಾ, ಶರತ್‌ಲೋಹಿತಾಶ್ವ, ಸಾಧುಕೋಕಿಲ, ಭವ್ಯಾ, ಉಗ್ರಂ ಮಂಜು, ರಿಶಿತಾ, ಜುಲಾಯಿ ಇತರರು.
-ವಿಜಯ್‌ ಭರಮಸಾಗರ

-ಉದಯವಾಣಿ

Write A Comment