ಮನೋರಂಜನೆ

ಆ್ಯಕ್ಷನ್ ಚಿತ್ರಕ್ಕೆ ಕಾಮಿಡಿ ಸ್ಪರ್ಶ: ಟೈಸನ್‌

Pinterest LinkedIn Tumblr

tysonಸಿನಿಮಾ ಮುಗಿಯಲು ಹತ್ತು ನಿಮಿಷ ಬಾಕಿ ಇರುತ್ತದೆ. ನಾಯಕ ಮಾತ್ರ ಒಂದಷ್ಟು ಹಾಸ್ಯನಟರೊಂದಿಗೆ ಸೇರಿಕೊಂಡು “ಟಾಸ್ಕ್’ ಕೊಡುತ್ತಾ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸುತ್ತಿರುತ್ತಾನೆ. ಆ ಟಾಸ್ಕ್ ಚಿತ್ರದ ಕ್ಲೈಮ್ಯಾಕ್ಸ್‌ಗೆ ಪೂರಕವಾದುದೇನೋ ನಿಜ. ಆದರೆ, ಸಿನಿಮಾ ಸೀರಿಯಸ್‌ ಆಗುವ ಹೊತ್ತಲ್ಲಿ ಕಾಮಿಡಿ ಮಾಡುವ ಪ್ರಯತ್ನ ಅಲ್ಲಿ ನಡೆಯುತ್ತಿರುತ್ತದೆ. ಹಾಗೆ ನೋಡಿದರೆ “ಟೈಸನ್‌’ ಚಿತ್ರ ಆರಂಭದಿಂದಲೂ ತುಂಬಾ ಕಾಮಿಡಿಯಾಗಿಯೇ ಸಾಗಿ ಬಂದಿದೆ. ಇಲ್ಲಿ ನಾಯಕ-ನಾಯಕಿ ಅಥವಾ ಇತರ ಸೀರಿಯಸ್‌ ದೃಶ್ಯಗಳಿಗಿಂತ ಚಿಕ್ಕಣ್ಣ ಹಾಗೂ ವಿನೋದ್‌ ಪ್ರಭಾಕರ್‌ ನಡುವಿನ ಕಾಮಿಡಿ ದೃಶ್ಯಗಳೇ ಬಹುತೇಕ ರಾರಾಜಿಸಿವೆ.

ಹಾಗಂತ ಇದು ಸಿನಿಮಾದ ಕಥೆಗೆ ಅಷ್ಟೊಂದು ಪೂರಕವಾಗಿದೆಯೇ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ನಿರ್ದೇಶಕರು ಆರಂಭದಿಂದಲೂ ಹೇಳಿಕೊಂಡಂತೆ “ಟೈಸನ್‌’ ಒಂದು ಆ್ಯಕ್ಷನ್‌ ಸಿನಿಮಾ. ತನ್ನ ತಂದೆಯಂತೆ ಪೊಲೀಸ್‌ ಅಧಿಕಾರಿಯಾಗಬೇಕೆಂದು ಕನಸು ಕಾಣುವ ಹಾಗೂ ಆ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಎದುರಾಗುವ ತೊಂದರೆಗಳೇ ಈ ಸಿನಿಮಾದ ಒನ್‌ಲೈನ್‌. ಒನ್‌ಲೈನ್‌ ಕೇಳಲು ತುಂಬಾ ಚೆನ್ನಾಗಿದೆ. ಸಿನಿಮಾದಲ್ಲಿ ಇದನ್ನು ನೀಟಾಗಿ ಬಳಸಿಕೊಂಡಿದ್ದರೆ “ಟೈಸನ್‌’ ಖದರ್ರೆà ಬೇರೆಯಾಗುತ್ತಿತ್ತು. ಆದರೆ, ಸಿನಿಮಾದಲ್ಲಿ ನಿರ್ದೇಶಕರು ಅದನ್ನು ಸರಿಯಾಗಿ ಬಳಸಿಕೊಂಡಂತಿಲ್ಲ. ನಿರ್ದೇಶಕ ರಾಮ್‌ನಾರಾಯಣ್‌ಗೆ ಸಿನಿಮಾದಲ್ಲಿ ಇನ್ನೂ ಏನೇನೋ ಅಂಶಗಳನ್ನು ಸೇರಿಸಬೇಕೆಂಬ ಆಸೆಯೋ ಅಥವಾ ಒಂದೇ ಸಿನಿಮಾದಲ್ಲಿ ಎಲ್ಲಾ ವರ್ಗವನ್ನು ತೃಪ್ತಿ ಪಡಿಸಬೇಕೆಂಬ ಉದಾರತೆಯೋ ಏನೋ ಕಥೆಯ ಆಶಯಕ್ಕಿಂತ ಹೆಚ್ಚಾಗಿ ಇತರ ಕಾಮಿಡಿ, ಐಟಂ ಸಾಂಗ್‌, ಸುಖಾಸುಮ್ಮನೆ ಫೈಟ್‌ಗಳಿಗೆ ಹೆಚ್ಚಿನ ಗಮನಕೊಟ್ಟಿದ್ದಾರೆ. ಇದರ ಪರಿಣಾಮ ಕಥೆ ನಿಮಗೆ ಆಗಾಗ ಗೋಚರಿಸಿದಂತಾಗುತ್ತದೆಯಷ್ಟೇ.
“ಟೈಸನ್‌’ ಎಂದರೆ ಏನೂ ಎಂದು ನೀವು ಕೇಳಬಹುದುದು.

“ಟೈಗರ್‌ ಸನ್‌’ ಅನ್ನುವ ಕಾನ್ಸೆಪ್ಟ್ನೊಂದಿಗೆ ಈ ಸಿನಿಮಾ ಮಾಡಲಾಗಿದೆ. ಚಿತ್ರದ ಮುಹೂರ್ತ ದಿನದ ಪತ್ರಿಕಾಗೋಷ್ಠಿಯಲ್ಲಿ ರಾಮ್‌ನಾರಾಯಣ್‌ ಹೇಳಿಕೊಂಡಂತೆ, “ಚಿತ್ರದಲ್ಲಿ ಟೈಗರ್‌ ಪ್ರಭಾಕರ್‌ ಕೂಡಾ ಒಂದು ಪಾತ್ರವಾಗಿ ಬರುತ್ತಾರೆ. ಅವರ ಹಿಂದಿನ ಸಿನಿಮಾಗಳ ದೃಶ್ಯಗಳನ್ನು ಬಳಸಿಕೊಂಡು, ಇಲ್ಲಿನ ಪಾತ್ರಕ್ಕೆ ತಕ್ಕಂತೆ ಲಿಂಕ್‌ ಮಾಡುವ ಮೂಲಕ ಅವರನ್ನೂ ಇಲ್ಲಿ ಪಾತ್ರವನ್ನಾಗಿಸುತ್ತೇವೆ. ನಾಯಕನ ತಂದೆಯ ಪಾತ್ರದಲ್ಲಿ ಟೈಗರ್‌ ಪ್ರಭಾಕರ್‌ ಅವರೇ ಇರುತ್ತಾರೆ. ಇದೊಂದು ಹೊಸ ಪ್ರಯೋಗ’ ಎಂದಿದ್ದರು. ಸಹಜವಾಗಿಯೇ ಕುತೂಹಲ ಕೂಡಾ ಇತ್ತು. ಆದರೆ, ಇಲ್ಲಿ ಆ ಕೆಲಸ ಕೂಡಾ ಆಗಿಲ್ಲ. ಟೈಗರ್‌ ಪ್ರಭಾಕರ್‌ ಇಲ್ಲಿ ಫೋಟೋದಲ್ಲಷ್ಟೇ ಇರುತ್ತಾರೆ. ತಂದೆಯ ಫೋಟೋ ನೋಡಿಕೊಂಡು ನಾಯಕ ತನ್ನ ಪೊಲೀಸ್‌ ಆಗುವ ಕನಸಿಗೆ ನೀರೆರೆದು ಪೋಷಿಸುತ್ತಿರುತ್ತಾನ್ನಷ್ಟೇ.
ಮೊದಲೇ ಹೇಳಿದಂತೆ ಇಲ್ಲಿ ಆ್ಯಕ್ಷನ್‌ ಜೊತೆಗೆ ಲವ್‌ಟ್ರ್ಯಾಕ್‌ವೊಂದನ್ನು ಕೂಡಾ ತಂದಿದ್ದಾರೆ.

ಸಾಮಾನ್ಯವಾಗಿ ಆ್ಯಕ್ಷನ್‌ ಸಿನಿಮಾಗಳಲ್ಲಿ ಲವ್‌ ಪಾಸಿಂಗ್‌ ಶಾಟ್‌ಗಳಲ್ಲಿ ಬಂದು ಹೋಗುತ್ತದೆ. ಆದರೆ ಇಲ್ಲಿ ಅದೊಂದು ಪ್ರತ್ಯೇಕ ಟ್ರ್ಯಾಕ್‌ ಆಗಿಯೇ ಬಂದಿದೆ. ಅತ್ತ ಕಡೆ ಪೊಲೀಸ್‌ ಆಗಬೇಕೆಂಬ ನಾಯಕ ಹಾಗೂ ತಾಯಿಯ ಕನಸಾದರೆ, ತನ್ನ ಮಗಳನ್ನು ಯಾವ ಕಾರಣಕ್ಕೂ ಪೊಲೀಸ್‌ಗೆ ಮದುವೆ ಮಾಡಿ ಕೊಡಲ್ಲ ಎಂಬ ನಾಯಕಿಯ ತಂದೆಯ ಹಠ ಹಾಗೂ ತನ್ನ ಪ್ರೀತಿಗಾಗಿ ಪೊಲೀಸ್‌ ಕೆಲಸದ ಆಸೆ ಬಿಡುವಂತೆ ಒತ್ತಾಯಿಸುವ ನಾಯಕಿ … ಇದು ಕೂಡಾ ಇಡೀ ಸಿನಿಮಾದಲ್ಲಿ ದೀರ್ಘಾವಧಿಯಲ್ಲೇ ಬಂದಿದೆ. ಎರಡೂ ಟ್ರ್ಯಾಕ್‌ಗಳನ್ನು ಬ್ಯಾಲೆನ್ಸ್‌ ಮಾಡಲು ನಿರ್ದೇಶಕರು ಕಷ್ಟಪಟ್ಟಿರುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಅದು ಬಿಟ್ಟರೆ ಇಲ್ಲಿ ಹೈಲೈಟ್‌ ಆಗಿರುವುದು ಚಿಕ್ಕಣ್ಣ ಅವರ ಕಾಮಿಡಿ. ಒಂದರ್ಥದಲ್ಲಿ ಅವರು ಕೂಡಾ ಹೀರೋ ರೇಂಜ್‌ನಲ್ಲೇ ತೆರೆಮೇಲೆ ಮಿಂಚಿದ್ದಾರೆ.

ಚಿತ್ರದಲ್ಲಿ ಒಳ್ಳೆಯ ಅಂಶಗಳೇ ಇಲ್ಲವೆಂದಲ್ಲ. ಇಲ್ಲಿ ಪೊಲೀಸ್‌ ವ್ಯವಸ್ಥೆ, ಪೊಲೀಸ್‌ ಆಗಬೇಕೆಂದು ಶಿಸ್ತಿನಿಂದ ಕಷ್ಟಪಡುವ ಯುವಕರ ಕನಸು ಕಮರಲು ಕಾರಣವಾಗುವ ಅಂಶಗಳು, ಪೊಲೀಸ್‌ ವ್ಯವಸ್ಥೆಯಲ್ಲಿನ ಪಾಸಿಟಿವ್‌ -ನೆಗೆಟಿವ್‌ ಅಂಶಗಳು … ಹೀಗೆ ಸಾಕಷ್ಟು ವಿಷಯಗಳನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಅದ್ಧೂರಿತನಕ್ಕೇನು ಕಡಿಮೆಯಾಗಿಲ್ಲ. ನಿರ್ಮಾಪಕರು ಖರ್ಚು ಮಾಡಿರುವುದು ತೆರೆಮೇಲೆ ಅದರಲ್ಲೂ ಹಾಡು ಹಾಗೂ ಫೈಟ್‌ಗಳಲ್ಲಿ ಕಾಣುತ್ತದೆ.

ನಾಯಕ ವಿನೋದ್‌ ಪ್ರಭಾಕರ್‌ ಆ್ಯಕ್ಷನ್‌ನಲ್ಲಿ ಗಮನ ಸೆಳೆದಿದ್ದಾರಷ್ಟೇ. ನಾಯಕಿ ಗಾಯತ್ರಿ ಅಯ್ಯರ್‌ ಇದ್ದಷ್ಟು ಹೊತ್ತು ಅಭಿನಯಿಸಲು ಪ್ರಯತ್ನಿಸಿದ್ದಾರೆ. ಅದು ಬಿಟ್ಟರೆ ವಿನಯ ಪ್ರಸಾದ್‌, ಶ್ರೀನಿವಾಸ್‌ ಮೂರ್ತಿ, ಚಿಕ್ಕಣ್ಣ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಹಾಗೂ ಅದನ್ನು ಚಿತ್ರೀಕರಿಸಿದ ತಾಣಗಳು ಚೆನ್ನಾಗಿವೆ.

ಚಿತ್ರ: ಟೈಸನ್‌
ನಿರ್ದೇಶನ: ರಾಮ್‌ನಾರಾಯಣ್‌
ನಿರ್ಮಾಣ: ಬಾಬು ರೆಡ್ಡಿ
ತಾರಾಗಣ: ವಿನೋದ್‌ ಪ್ರಭಾಕರ್‌, ಗಾಯತ್ರಿ ಅಯ್ಯರ್‌, ಚಿಕ್ಕಣ್ಣ, ವಿನಯ್‌ ಪ್ರಸಾದ್‌, ಶ್ರೀನಿವಾಸ ಮೂರ್ತಿ ಮತ್ತಿತರರು.
-ಉದಯವಾಣಿ

Write A Comment