ಮನೋರಂಜನೆ

ಈಗ ಅತೀವೃಷ್ಠಿ; ಆಮೇಲೆ ಅನಾವೃಷ್ಠಿ: ಈ ವಾರ 10 ಚಿತ್ರ ತೆರೆಗೆ!

Pinterest LinkedIn Tumblr

tysonಕಳೆದ ಶುಕ್ರವಾರದಂದು (ಡಿಸೆಂಬರ್‌ 26) ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ಆರು. ಈ ಆರು ಚಿತ್ರಗಳಲ್ಲಿ “ಗೇಮ್‌’ ಮತ್ತು “ಕೃಷ್ಣ ರುಕ್ಕು’ ಚಿತ್ರಗಳು ಮಾತ್ರ ಹೆಚ್ಚು ಸುದ್ದಿಯಲ್ಲಿದ್ದಿದ್ದು ಬಿಟ್ಟರೆ, ಮಿಕ್‌ ಚಿತ್ರಗಳು ಅಷ್ಟಾಗಿ ಜನರ ಗಮನಕ್ಕೆ ಬರಲಿಲ್ಲ. ಹೀಗಿರುವಾಗಲೇ ಈ ವಾರ ಮತ್ತಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಕನ್ನಡವಲ್ಲದೆ ಪರಭಾಷೆಯ ಚಿತ್ರಗಳನ್ನು ಲೆಕ್ಕ ಹಾಕಿದರೆ, ಏನಿಲ್ಲವೆಂದರೂ 10 ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದೆ. ಅದ್ಯಾಕೆ ಇಷ್ಟೊಂದು ಸಂಖ್ಯೆಯ ಚಿತ್ರಗಳು ಇತ್ತೀಚೆಗೆ ಬಿಡುಗಡೆಯಾಗುತ್ತಿವೆ ಎಂದು ಯೋಚಿಸಿದ್ದೀರಾ? ಅದಕ್ಕೆ ಕಾರಣ ಕ್ರಿಕೆಟ್‌!

ಕನ್ನಡ ಚಿತ್ರ ನಿರ್ಮಾಪಕರು ಧಾವಂತದಲ್ಲಿದ್ದಾರೆ. ಹೇಗಾದರೂ ಸರಿ ತಮ್ಮ ಚಿತ್ರಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ನಡೆಸಿದ್ದಾರೆ. ಇದರ ಫ‌ಲವಾಗಿ ಕಳದ ವಾರ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಅದರ ಹಿಂದಿನ ವಾರವೂ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವಾರ ಸಹ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರಗಳನ್ನು ಸೇರಿಸಿದರೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ 10ಕ್ಕೇರುತ್ತದೆ.

ಹೌದು, ಈ ವಾರ ಐದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿನೋದ್‌ ಪ್ರಭಾಕರ್‌ ಅಭಿನಯದ “ಟೈಸನ್‌’, ಸಾಯಿಕುಮಾರ್‌ ಅಭಿನಯದ “ದಂಡು’, “ಸುಪಾರಿ ಸೂರ್ಯ’, “ಚದುರಿದ ಕಾರ್ಮೋಡ’, “ತ’ ಎಂಬ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇನ್ನು ತೆಲುಗು, ತಮಿಳಿನ “ಶೌರ್ಯ’, “ಕಲ್ಯಾಣ ವೈಭೋಗಮೇ’, “ಶಿವಗಂಗ’, “ಸೌಕಾರ್‌ಪೇಟೈ’, “ಪಿಚ್ಚೆ„ಕಾರನ್‌’, “ಲಂಡನ್‌ ಹ್ಯಾಸ್‌ ಫಾಲನ್‌’ ಎಂಬ ಚಿತ್ರಗಳು ಬಿಡುಗಡೆಯಾಗಲಿದೆ. ಇಷ್ಟಕ್ಕೂ ಯಾಕೆ ಇಷ್ಟೊಂದು ಸಂಖ್ಯೆಯ ಚಿತ್ರಗಳು ಎಂದರೆ ಅದಕ್ಕೆ ಕಾರಣ ಕ್ರಿಕೆಟ್‌. ಮುಂದಿನ ತಿಂಗಳಿನಿಂದ ಬ್ಯಾಕ್‌ ಟು ಬ್ಯಾಕ್‌ ಎರಡು ದೊಡ್ಡ ಕ್ರಿಕೆಟ್‌ ಟೂರ್ನಿಗಳು ನಡೆಯಲಿವೆ. ಜೊತೆಗೆ ಪರೀಕ್ಷೆಗಳು. ಇದೆಲ್ಲದರಿಂದ ಇನ್ನೆರೆಡು ತಿಂಗಳುಗಳ ಕಾಲ ಪ್ರೇಕ್ಷಕರು ಚಿತ್ರಮಂದಿರದತ್ತ ಬರುವುದು ಸಂಶಯ. ಅದೇ ಕಾರಣಕ್ಕೆ ಅದಕ್ಕಿಂತ ಮುಂಚೆ ಎಷ್ಟು ಸಾಧ್ಯವೋ, ಅಷ್ಟು ಸಂಖ್ಯೆಯ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಕನ್ನಡ ಅಥವ ಯಾವುದೇ ಭಾಷೆಯ ಚಿತ್ರಗಳ ಮೊದಲ ಶತ್ರು ಕ್ರಿಕೆಟ್‌ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಬಾರಿ ಸಹ ಕ್ರಿಕೆಟ್‌, ಸಿನಿಮಾಗಳಿಗೆ ಅಡ್ಡಗೋಡೆಯಾಗಿ ನಿಂತಿದೆ. ಮೊದಲಿಗೆ ಮರ್ಚ್‌ ಎಂಟರಂದು ಟಿ20 ಕ್ರಿಕೆಟ್‌ ವರ್ಲ್ಡ್ ಕಪ್‌ ಶುರುವಾಗಲಿದೆ. ಈ ಟೂರ್ನಿ ಮುಗಿಯುವುದು ಏಪ್ರಿಲ್‌ ಮೂರರಂದು. ಅಲ್ಲಿಗೆ ಎಲ್ಲವೂ ಮುಗಿಯುವಂತಿಲ್ಲ. ಈಗಾಗಲೇ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಐ.ಪಿ.ಎಲ್‌ನ ಒಂಬತ್ತನೇ ಸೀಸನ್‌ ಶುರುವಾಗಲಿದೆ. ಏಪ್ರಿಲ್‌ 8ರಂದು ಶುರುವಾಗುವ ಈ ಟೂರ್ನಿ, ಮುಗಿಯುವುದೇನಿದ್ದರೂ ಮೇ 24ರಂದು. ಈ ಮಧ್ಯೆ ಮಕ್ಕಳ ಪರೀಕ್ಷೆಗಳು ಶುರುವಾಗಿ ಮುಗಿದು, ರಜೆ ಶುರುವಾಗಿ ಮುಗಿದು, ಶಾಲೆಗಳು ಶುರುವಾಗಿರುತ್ತವೆ. ಪರೀಕ್ಷೆಗಳು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವ ಒತ್ತಡದಿಂದಾಗಿ ಜನ ಚಿತ್ರಮಂದಿರಗಳಿಗೆ ಬಂದು, ಚಿತ್ರ ನೋಡುವುದಕ್ಕೆ ಖರ್ಚು ಮಾಡುವುದು ಕಷ್ಟವೇ.

ಇದೆಲ್ಲದರಿಂದ ನೇರವಾಗಿ ಏಟು ಬೀಳುವುದು ಚಿತ್ರರಂಗಕ್ಕೆ. ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಎಲ್ಲಾ ಭಾಷೆಗಳ ಚಿತ್ರಗಳಿಗೂ ಸಮಸ್ಯೆಯೇ. ಅದೇ ಕಾರಣಕ್ಕೆ ಮಾರ್ಚ್‌ ಎಂಟರೊಳಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಹಲವರು ಮುಂದಾಗಿದ್ದಾರೆ ಮತ್ತು ಅದೇ ಕಾರಣಕ್ಕೆ ವಾರಕ್ಕೆ ಅಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದರ್ಥದಲ್ಲಿ ಇದು ಅತೀವೃಷ್ಠಿ. ಆದರೆ, ಒಮ್ಮೆ ಕ್ರಿಕೆಟ್‌ ಸೀಸನ್‌ ಶುರುವಾದರೆ ಅನಾವೃಷ್ಠಿ ಪ್ರಾರಂಭವಾಗುತ್ತದೆ. ಆಗ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಆಟೋಮ್ಯಾಟಿಕ್‌ ಆಗಿ ಕಡಿಮೆಯಾಗುತ್ತದೆ. ಬಿಡುಗಡೆಯಾದರೂ ಪ್ರೇಕ್ಷಕರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಅವೆಲ್ಲಾ ಆಗುವಷ್ಟರಲ್ಲಿ ನಮ್ಮ ಸಿನಿಮಾನೂ ಬಿಡುಗಡೆಯಾಗಲಿ ಎಂಬುದು ಹಲವು ನಿರ್ಮಾಪಕರ ಆಶಯ. ಅದೇ ಕಾರಣಕ್ಕೆ ವಾರಕ್ಕೆ ಆರು, ಆರು, ಐದು …
-ಉದಯವಾಣಿ

Write A Comment