ಮನೋರಂಜನೆ

ಅಂಪೈರ್‌ ಶ್ರವಣ ಸಾಧನ ಬಳಕೆ: ದೋನಿ ಆಕ್ಷೇಪ

Pinterest LinkedIn Tumblr

dhoni

ಮೀರ್‌ಪುರ (ಪಿಟಿಐ): ಕ್ರಿಕೆಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸುವ ಅಂಪೈರ್‌ಗಳು ಶ್ರವಣ ಸಾಧನ ಬಳಸುತ್ತಿರುವುದು ಸರಿಯಲ್ಲ ಎಂದು ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರೇಕ್ಷಕರ ಅಬ್ಬರ, ಗಲಾಟೆಗಳಿಂದ ತುಂಬಿರುವ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳ ಬ್ಯಾಟ್ ಅಂಚಿಗೆ ಚೆಂಡು ಬಡಿದಾಗ ಹೊರಹೊಮ್ಮುವ ಸದ್ದು ಕೇಳಲು ಅಂಪೈರ್‌ಗಳಿಗೆ ಈ ಸಾಧನಗಳು ಅಡ್ಡಿ ಮಾಡುತ್ತಿವೆ. ಇದರಿಂದ ಅವರ ತೀರ್ಪುಗಳು ತಪ್ಪಾಗುತ್ತಿವೆ. ಶನಿವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಶಿಶ್ ನೆಹ್ರಾ ಬೌಲಿಂಗ್‌ನಲ್ಲಿ ಖುರ್ರಂ ಮಂಜೂರ್ ಅವರ ಬ್ಯಾಟ್ ಅಂಚಿಗೆ ಚೆಂಡು ಬಡಿದು ಕ್ಯಾಚ್ ಆಗಿತ್ತು. ಆದರೆ, ಬಾಂಗ್ಲಾದೇಶದ ಅಂಪೈರ್ ಶ್ರಾಫುದ್ದೌಲಾ ಅವರು ಸರಿ ತೀರ್ಪು ನೀಡುವಲ್ಲಿ ವಿಫಲರಾದರು’ ಎಂದರು.

‘ಅಂಪೈರ್‌ಗಳು ಈಗ ವಾಕಿ ಟಾಕಿ ಬಳಸುತ್ತಿದ್ದಾರೆ. ಒಂದು ಕಿವಿಗೆ ಶ್ರವಣ ಸಾಧನ ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಒಂದೇ ಕಿವಿಯಿಂದ ಬ್ಯಾಟ್‌–ಚೆಂಡು ಸ್ಪರ್ಶದ ಸದ್ದನ್ನು ಆಲಿಸುವುದು ಕಷ್ಟದ ಕೆಲಸವೆಂಬುದು ಇದರಿಂದ ಅರ್ಥವಾಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಯಬೇಕು. ಬೌಲರ್ ಬೌಲಿಂಗ್ ಮಾಡುವಾಗ ಶ್ರವಣ ಸಾಧನವನ್ನು ಕಿವಿಗೆ ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ಬಳಸಬಹುದಲ್ಲವೆ’ ಎಂದು ಪ್ರಶ್ನಿಸಿದರು.

ಪಾಕ್ ಎದುರಿನ ಪಂದ್ಯದಲ್ಲಿ ಇನ್ನೊಂದು ಘಟನೆಯ ಕುರಿತು ದೋನಿ ಪಂದ್ಯದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಆಟಗಾರರು ಪಂದ್ಯದ ನಡುವೆ ಸಂಭಾಷಣೆ ನಡೆಸುವಾಗ ಸಲಹೆ, ಸೂಚನೆ ವಿನಿಮಯ ಮಾಡಿಕೊಳ್ಳುವಾಗ ವಿಕೆಟ್‌ನಲ್ಲಿರುವ ಮೈಕ್ರೋಫೋನ್ ಬಂದ್ ಆಗಿರುತ್ತದೆ ಎಂದು ಪಂದ್ಯದ ರೆಫರಿ ಹೇಳುತ್ತಾರೆ. ಆದರೆ, ಪಂದ್ಯದಲ್ಲಿ ಇನ್ನೊಬ್ಬ ಆಟಗಾರನೊಂದಿಗೆ ನಡೆದ ಸಂಭಾಷಣೆಯು ಅವರಿಗೆ (ರೆಫರಿ) ಗೊತ್ತಾಗಿದೆ. ಇನ್ನೊಬ್ಬ ವ್ಯಕ್ತಿಯು ಆಕ್ಷೇಪಾರ್ಹ ಶಬ್ದ ಬಳಸಬಾರದಿತ್ತು. ಆದರೆ, ಆ ಸಂದರ್ಭದಲ್ಲಿ ಮೈಕ್ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಆಮೇಲೆ ಗೊತ್ತಾಯಿತು’ ಎಂದು ಹೇಳಿದರು.

ಭಾರತದ ಗೆಲುವಿನಲ್ಲಿ ಯುವರಾಜ್ ಸಿಂಗ್ ಅವರ ತಾಳ್ಮೆಯ ಬ್ಯಾಟಿಂಗ್ ಕೂಡ ಮಹತ್ವದ ಪಾತ್ರ ವಹಿಸಿತ್ತು ಎಂದು ದೋನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಹ್ಲಿಗೆ ದಂಡ ಅಂಪೈರ್ ತೀರ್ಪಿಗೆ ಅಶಿಸ್ತಿನ ಪ್ರತಿಕ್ರಿಯೆ ನೀಡಿದ ಕಾರಣಕ್ಕೆ ಭಾರತದ ಉಪನಾಯಕ ವಿರಾಟ್ ಕೊಹ್ಲಿ ಅವರಿಗೆ ದಂಡ ವಿಧಿಸಲಾಗಿದೆ. ಪಂದ್ಯ ಶುಲ್ಕದ ಶೇ 30ರಷ್ಟನ್ನು ಅವರು ದಂಡ ನೀಡಬೇಕು ಎಂದು ರೆಫರಿ ಜೆಫ್ ಕ್ರೋವ್ ತೀರ್ಪು ನೀಡಿದ್ದಾರೆ.

‘ಪಾಕ್ ಎದುರಿನ ಪಂದ್ಯದಲ್ಲಿ 49 ರನ್ ಗಳಿಸಿದ್ದ ವಿರಾಟ್ 15ನೇ ಓವರ್‌ನಲ್ಲಿ ಮೊಹಮ್ಮದ್ ಸಮಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿದ್ದರು. ತೀರ್ಪು ನೀಡಿದ ಅಂಪೈರ್‌ಗೆ ಬ್ಯಾಟ್ ತೋರಿಸಿ ಕ್ರೀಸ್‌ನಿಂದ ಹೊರ ನಡೆದರು. ಹೋಗುವಾಗ ತಿರುಗಿ ಅಂಪೈರ್‌ನತ್ತ ನೋಡಿ ಗೊಣಗುತ್ತ ನಿರ್ಗಮಿಸಿದ್ದರು. ಇದನ್ನು ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ನಡವಳಿಕೆ ಎಂದು ಪರಿಗಣಿಸಿ ದಂಡ ವಿಧಿಸಲಾಗಿದೆ’ ಎಂದು ರೆಫರಿ ತಿಳಿಸಿದ್ದಾರೆ.

ಕೊಹ್ಲಿ–ಆಮೀರ್ ಪೈಪೋಟಿ ಆಸಕ್ತದಾಯಕ
ಶನಿವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬೌಲರ್ ಮೊಹಮ್ಮದ್ ಆಮೀರ್ ಅವರ ನಡುವಣ ಪೈಪೋಟಿ ಆಸಕ್ತಿದಾಯಕ ವಾಗಿತ್ತು. ಸಚಿನ್ ತೆಂಡೂಲ್ಕರ್ ಮತ್ತು ನನ್ನ ಬೌಲಿಂಗ್ ನಡುವಣ ಇಂತಹದ್ದೇ ಹಣಾಹಣಿ ಏರ್ಪಡುತ್ತಿತ್ತು ಎಂದು ಪಾಕ್‌ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ನೆನಪಿಸಿಕೊಂಡಿದ್ದಾರೆ.

‘ಸಚಿನ್ ಎದುರು ಬೌಲಿಂಗ್ ಮಾಡು ವುದು ಬಹಳ ದೊಡ್ಡ ಸವಾಲಾಗಿತ್ತು. ಅದೇ ರೀತಿ ವಿರಾಟ್ ಮತ್ತು ಆಮೀರ್ ನಡುವೆಯೂ ತುರುಸಿನ ಸ್ಪರ್ಧೆ ಕಂಡುಬಂದಿತ್ತು. ವಿರಾಟ್ ಮತ್ತು ಸಚಿನ್ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು’ ಎಂದು ಶೋಯೆಬ್ ಹೇಳಿದ್ದಾರೆ.

ರೋಹಿತ್‌ಗೆ ಗಾಯ
ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ಎಡಗಾಲಿನ ಹೆಬ್ಬೆರಳಿಗೆ ಚೆಂಡು ಬಡಿದು ಗಾಯವಾಗಿದೆ. ಭಾನು ವಾರ ಅವರನ್ನು ಕ್ಷ ಕಿರಣ ತಪಾಸಣೆಗೆ ಒಳಪಡಿಸಲಾಯಿತು.

ಪಂದ್ಯದ ಮೊದಲ ಓವರ್‌ನಲ್ಲಿ ಮೊಹಮ್ಮದ್ ಆಮೀರ್ ಅವರ ಪ್ರಥಮ ಎಸೆತವು ಶರ್ಮಾ ಅವರ ಕಾಲಿನ ಹೆಬ್ಬೆರಳಿಗೆ ಬಡಿದಿತ್ತು. ಇದರಿಂದ ಅವರು ನೋವು ಅನುಭವಿಸಿದ್ದರು. ನಂತರದ ಎಸೆತದಲ್ಲಿಯೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ನಿರ್ಗಮಿಸಿದ್ದರು.

ಮಿಯಾಂದಾದ್ ಮೆಚ್ಚುಗೆ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಪಾಕ್ ತಂಡದ ಮಾಜಿ ಆಟಗಾರರಾದ ಜಾವೇದ್ ಮಿಯಾಂದಾದ್, ಹನೀಫ್ ಮೊಹಮ್ಮದ್, ಮೊಹಮ್ಮದ್ ಯೂಸುಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕ್ ಅಭಿಮಾನಿಗಳ ಆಕ್ರೋಶ
ಕರಾಚಿ (ಪಿಟಿಐ): ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸೋಲನುಭವಿಸಿದ ಪಾಕಿಸ್ತಾನ ತಂಡದ ಮೇಲೆ ಪಾಕ್ ಅಭಿಮಾನಿ ಗಳು ಮತ್ತು ಮಾಜಿ ಆಟಗಾರರು ಟೀಕೆಯ ಮಳೆಯನ್ನೇ ಸುರಿಸಿದ್ದಾರೆ.

ಕರಾಚಿಯ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಟಿವಿ ಪರದೆಗಳನ್ನು ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ಹಬ್ಬದ ವಾತಾವರಣವಿತ್ತು. 83 ರನ್‌ಗಳ ಅಲ್ಪಮೊತ್ತ ಬೆನ್ನತ್ತಿದ್ದ ಭಾರತವು ಆರಂಭಿಕ ಕುಸಿತ ಕಂಡಾಗ ಪಾಕ್ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತ್ತು. ಆದರೆ, ಅಂತ್ಯದಲ್ಲಿ ಪಾಕ್ ಸೋತಾಗ ಅದು ಆಕ್ರೋಶದಲ್ಲಿ ಬದಲಾಯಿತು.

ಪಿಸಿಬಿ ಮತ್ತು ತಂಡದ ಆಟಗಾರರ ವಿರುದ್ಧ ಜನರು ಘೋಷಣೆ ಕೂಗಿದರು. ಪಂಜಾಬ್ ಪ್ರಾಂತ್ಯದಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಶಾಹೀದ್ ಅಫ್ರಿದಿ ಮತ್ತು ಸಹ ಆಟಗಾರರು ಪ್ರತಿಕೃತಿಗಳನ್ನು ದಹಿಸಿದರು.

ಸ್ಪಷನೆ ಬಿಡಿ ಆಟ ಆಡಿ
‘ಸೋತಾಗ ಸ್ಪಷ್ಟನೆ ಕೊಡುವುದನ್ನು ಬಿಡಿ. ಉತ್ತಮವಾಗಿ ಆಡುವುದನ್ನು ಕಲಿಯಿರಿ. ನೀವು ಮಕ್ಕಳಲ್ಲ’ ಎಂದು ಮಾಜಿ ಆಟಗಾರ ಸಿಕಂದರ್‌ ಭಕ್ತ್ ಜಿಯೋ ಸುದ್ದಿವಾಹಿನಿಯ ಸಂದರ್ಶನದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Write A Comment